ಅರಣ್ಯ ವನ್ಯಜೀವಿ

ಚಿಕ್ಕತ್ತೂರಿನಲ್ಲಿ‌ ಕಾಡಾನೆ ಉಪಟಳ: ಸ್ಥಳ ಪರಿಶೀಲಿಸಿ‌ದ ಆರ್.ಎಫ್.ಒ: ಆನೆ ಕಂದಕ‌ ದುರಸ್ಥಿಗೆ ಕ್ರಮ

ಕುಶಾಲನಗರ, ಜ 08:ಚಿಕ್ಕತ್ತೂರು ಗ್ರಾಮದಲ್ಲಿ ಕಾಡಾನೆ ಹಾವಳಿ ಪ್ರದೇಶಕ್ಕೆ ಕುಶಾಲನಗರ ವಲಯ ಅರಣ್ಯಾಧಿಕಾರಿ ರತನ್ ಕುಮಾರ್ ಭೇಟಿ‌ ನೀಡಿ ಪರಿಶೀಲಿಸಿದರು.
ರೈತರ ದೂರಿನ‌ ಹಿನ್ನಲೆ ಸ್ಥಳ ಪರಿಶೀಲಿಸಿದ ಅವರು, ರೈತರ ಅಹವಾಲು ಆಲಿಸಿದರು.
ಕಾಡಾನೆಗಳು ಸಲೀಸಾಗಿ ಅರಣ್ಯದಿಂದ ಅಗಮಿಸುವ ಮಾರ್ಗದಲ್ಲಿ ಟ್ರಂಚ್ ಗಳ ದುರಸ್ಥಿ ಬಗ್ಗೆ ರೈತರು ಅಧಿಕಾರಿಯ ಗಮನ ಸೆಳೆದರು.

ಈ ಸಂದರ್ಭ ಮಾತನಾಡಿದ ಕೂಡುಮಂಗಳೂರು ಗ್ರಾಪಂ ಅಧ್ಯಕ್ಷ ಭಾಸ್ಕರ್ ನಾಯಕ್, ಆನೆ ಕಂದಕಗಳು‌ ಮಣ್ಣಿನಿಂದ ತುಂಬಿಹೋಗಿದೆ. ಇದನ್ನು ದುರಸ್ಥಿಗೊಳಿಸಬೇಕು. ಸೋಲಾರ್ ಬೇಲಿ ನಿರ್ಮಿಸುವುದರೊಂದಿಗೆ ಕಾಡಾನೆ ಹಾವಳಿ ಶಾಶ್ವತವಾಗಿ ತಡೆಗಟ್ಟಲು ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು. ಬೆಳೆಹಾನಿಗೆ ಸೂಕ್ತ ಪರಿಹಾರ ಕಲ್ಪಿಸಲು ಆಗ್ರಹಿಸಿದರು.

ಸ್ಥಳಕ್ಕೆ ಭೇಟಿ‌ ನೀಡಿದ್ದ ಜಿಪಂ ಮಾಜಿ ಸದಸ್ಯ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಈ ಭಾಗದಲ್ಲಿ ನಿರ್ಮಿಸಿರುವ ಆನೆ ಕಂದಕ ಅವೈಜ್ಞಾನಿಕವಾಗಿದೆ. ಮಳೆ‌ ನೀರು‌ ನಿಂತು ಕಂದಕದ ಎರಡೂ‌ ಬದಿ‌ ಮಣ್ಣು ಕುಸಿದು ಕಂದಕ‌ ಕಿರಿದಾಗಿದೆ. ಇದರಿಂದ ಕಾಡಾನೆ ಸಲೀಸಾಗಿ‌ ದಾಡುತ್ತಿದೆ.‌ಕಂದಕವನ್ನು ಅಗಲೀಕರಣಗೊಳಿಸಬೇಕು. ಮುಂದಿನ ದಿನಗಳಲ್ಲಿ ಪರಿಣಾಮಕಾರಿ ಯೋಜನೆಗಳ‌ ಮೂಲಕ‌ ಕಾಡಾನೆ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆ‌ ಕ್ರಮ ವಹಿಸುವಂತೆ ಆಗ್ರಹಿಸಿದರು.

ಸಮಸ್ಯೆ ಆಲಿಸಿದ ಆರ್.ಎಫ್.ಒ ರತನ್ ಕುಮಾರ್ ಮಾತನಾಡಿ, ರೈತರ ದೂರಿನನ್ವಯ ಸ್ಥಳ ಪರಿಶೀಲನೆ‌ ನಡೆಸಲಾಗಿದೆ. ಈ ಭಾಗದಲ್ಲಿ ಮಳೆಯಿಂದ ಆನೆ‌ ಕಂದಕ ಮುಚ್ಚಿ ಕಿರಿದಾಗಿದ್ದು, ಕೆಲವೆಡೆ ಬಂಡೆಗಳನ್ನು ಸ್ಫೋಟಿಸು ಅಗತ್ಯವಿರುವ ಬಗ್ಗೆ ಗಮನಕ್ಕೆ ಬಂದಿದೆ. ಶೀಘ್ರದಲ್ಲೇ ಈ ಆನೆ ಕಂದಕ ದುರಸ್ಥಿ‌ ಕಾರ್ಯ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಸೋಲಾರ್ ಫೆನ್ಸಿಂಗ್, ರೈಲ್ವೇ ಬ್ಯಾರಿಕೆಡ್ ಅಗತ್ಯತೆ ಬಗ್ಗೆ ಪರಿಶೀಲಿಸಿ ಕಾಡಾನೆ ಹಾವಳಿ ತಡೆಗಟ್ಟಲು ಅಗತ್ಯ ಕ್ರಮವಹಿಸುವುದಾಗಿ ತಿಳಿಸಿದರು.

ಈ ಸಂದರ್ಭ ಕೂಡುಮಂಗಳೂರು ಗ್ರಾಪಂ ಸದಸ್ಯರಾದ ದಿನೇಶ್, ಖತೀಜ, ಸ್ಥಳೀಯರಾದ ವಿ.ಜೆ.ನವೀನ್, ಉದಯ,ನೌಶಾದ್, ಪುರುಷೋತ್ತಮ್, ಸುನಿಲ್, ಪುಟ್ಟೇಗೌಡ, ರಾಮೇಗೌಡ, ವಿನಯ್, ಸಣ್ಣೇಗೌಡ, ಮಂಜಣ್ಣ, ಉದಯಕುಮಾರ್, ಡಿ ಆರ್ ಎಫ್ ಒ ಅನಿಲ್ ಡಿಸೋಜ, ಮಂಜೇಗೌಡ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!