ಪ್ರಕಟಣೆ
ಡಿ. 26 ರಿಂದ ಎರಡು ದಿನಗಳ ಕಾಲ ಭಗವದ್ಗೀತೆ ಲೇಖನ ಅಭಿಯಾನ
ಕುಶಾಲನಗರ, ಡಿ.23:ಕೋಟಿ ಗೀತಾ ಲೇಖನ ಯಜ್ಞ ಅಭಿಯಾನದ ಅಂಗವಾಗಿ ಕುಶಾಲನಗರದಲ್ಲಿ ಈ ತಿಂಗಳ 26 ರಿಂದ ಎರಡು ದಿನಗಳ ಕಾಲ ಭಗವದ್ಗೀತೆ ಲೇಖನ ಅಭಿಯಾನ ನಡೆಯಲಿದ್ದು ಉಡುಪಿಯ ಪುತ್ತಿಗೆ ಮಠದ ಶ್ರೀಗಳಾದ ಡಾ ಸುಗುಣೇಂದ್ರ ತೀರ್ಥ ಸ್ವಾಮೀಜಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕೋಟಿ ಗೀತಾ ಲೇಖನ ಯಜ್ಞದ ಕೊಡಗು ಜಿಲ್ಲಾ ಸಂಚಾಲಕರಾದ ಎಸ್ ಕೆ ಸತೀಶ್ ತಿಳಿಸಿದ್ದಾರೆ.
ಅವರು ಕುಶಾಲನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿ ಭಗವದ್ಗೀತೆ ಯಜ್ಞದಲ್ಲಿ ಜಾತಿ ಮತ ಲಿಂಗ ವಯಸ್ಸು ಭೇದವಿಲ್ಲದೆ ಪ್ರತಿಯೊಬ್ಬರೂ ಭಾಗವಹಿಸಬಹುದಾಗಿದೆ. ಮಕ್ಕಳಿಗೆ ಭಗವದ್ಗೀತೆಯ ಅಭ್ಯಾಸ ಅವರ ಮುಂದಿನ ಜೀವನಕ್ಕೆ ದಾರಿದೀಪ ಆಗಲಿದೆ ಎಂದರು.
ಕೋಟಿ ಗೀತಾ ಲೇಖನ ಯಜ್ಞದ ಸಂಪೂರ್ಣ ಮಾಹಿತಿಯನ್ನು ತಿಳಿಸಿದ ಸತೀಶ್ ಅವರು 26ರಂದು ಸಂಜೆ ಶ್ರೀಗಳು ಕುಶಾಲನಗರ ಗಣಪತಿ ದೇವಸ್ಥಾನದ ಬಳಿ ಆಗಮಿಸಲಿದ್ದು ಅವರನ್ನು ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಗುವುದು.
ನಂತರ ಮೆರವಣಿಗೆಯಲ್ಲಿ ರಥಬೀದಿ ಮೂಲಕ ತೆರಳಿ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಸಂಜೆ 6 ಗಂಟೆಗೆ ಪಾದ ಪೂಜೆ ಹಾಗೂ ತೊಟ್ಟಿಲು ಪೂಜೆ ಕಾರ್ಯಕ್ರಮ ಜರಗಲಿದೆ.
ಮರುದಿನ ಬೆಳಗ್ಗೆ 9.30 ಕ್ಕೆ ಕೋಟಿಗೀತಾ ಲೇಖನ ಯಜ್ಞ ಅಭಿಯಾನ ಮತ್ತು ಶ್ರೀಗಳಿಂದ ಆಶೀರ್ವಚನ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭ ಶ್ರೀ ಮಧ್ವಾಚಾರ್ಯರು ತೀರ್ಥ ಪೀಠದ ಮೂಲ ಯತಿಗಳಿಗೆ ಕರುಣಿಸಿದ 700 ವರ್ಷದ ಪುರಾತನವಾದ ಶ್ರೀ ಕೃಷ್ಣ ದೇವರಿಗೆ ಗುರುಗಳಿಂದ ಮಹಾ ಸಂಸ್ಥಾನ ಪೂಜೆ ನಡೆಯಲಿದೆ ಎಂದರು.
ಎಲ್ಲ ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಸತೀಶ್ ಕೋರಿದರು.
ಗೋಷ್ಠಿಯಲ್ಲಿ ಅಭಿಯಾನದ ಪ್ರಮುಖರಾದ ಜನಾರ್ಧನ್ ವಸಿಷ್ಠ ಅಮೃತರಾಜ್, ರಮಾ ವಿಜಯೇಂದ್ರ ಪದ್ಮ ಪುರುಷೋತ್ತಮ್, ಎಸ್ ಕೆ ರಾಜಶೇಖರ್, ವನಿತಾ ಚಂದ್ರಮೋಹನ್ ಇದ್ದರು.