ಕುಶಾಲನಗರ, ಅ 18: ಬಾರವಿ ಕಾವೇರಿ ಕನ್ನಡ ಸಂಘದ ಆಶ್ರಯದಲ್ಲಿ 11ನೇ ವರ್ಷದ ಕಾವೇರಿ ಸಂಕ್ರಮಣ ಆಚರಣೆ ಅಂಗವಾಗಿ ಕಾವೇರಿ ತೀರ್ಥ ವಿತರಣೆ ಮತ್ತು ಅನ್ನಸಂತರ್ಪಣೆ ಕಾರ್ಯ ನಡೆಯಿತು.
ಕೊಡಗು-ಮೈಸೂರು ಗಡಿಯಲ್ಲಿನ ಕಾವೇರಿ ಪ್ರತಿಮೆ ವೃತ್ತದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಕಾವೇರಿ ಮಾತೆಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.
ಮಾತೆಗೆ ವಿವಿಧ ವಿಶೇಷ ಪೂಜೆ ನಂತರ ನೂತನವಾಗಿ ನಿರ್ಮಿಸಿದ್ದ ಅನ್ನಸಂತರ್ಪಣಾ ಭವನ ಉದ್ಘಾಟಿಸಲಾಯಿತು.
ಉದ್ಯಮಿ ಎಸ್.ಎಲ್.ಎನ್. ಮಾಲೀಕ ಸಾತಪ್ಪನ್ ನೂತನ ಭವನವನ್ನು ಲೋಕಾರ್ಪಣೆಗೊಳಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೂಡ್ಲೂರಿನ ಉದ್ಯಮಿ ಬಿ.ಕೆ.ಸುದೀಪ್ ಕುಮಾರ್ ಮತ್ತು ಎಸ್.ಎಲ್.ಎನ್.ನ ವೆಂಕಟಾಚಲಂ ಅವರು ಮಾತನಾಡಿ ಬಾರವಿ ಕಾವೇರಿ ಕನ್ನಡ ಸಂಘದ ಕಳೆದ 11 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ವಿಭಿನ್ನ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬಾರವಿ ಕಾವೇರಿ ಕನ್ನಡ ಸಂಘದ ರವೀಂದ್ರ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭ ಬಾರವಿ ಕಾವೇರಿ ಕನ್ನಡ ಸಂಘದ ಅಧ್ಯಕ್ಷ ಬಬೀಂದ್ರ ಪ್ರಸಾದ್, ವಿಜೇಂದ್ರ ಪ್ರಸಾದ್, ಪ್ರಮುಖರಾದ ಚಂದ್ರು, ಕಾವಲುಪಡೆ ಕೃಷ್ಣ, ಪುಷ್ಪಾ ಸುದೀಪ್ ಮತ್ತಿತರರು ಇದ್ದರು. ನೆರೆದಿದ್ದ ಭಕ್ತರಿಗೆ ತೀರ್ಥ, ಪ್ರಸಾದ ವಿತರಣೆ ನಡೆಸಲಾಯಿತು.
ಮಧ್ಯಾಹ್ನ ಕ್ಷೇತ್ರಕ್ಕೆ ಭೇಟಿ ನೀಡಿದ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ತೀರ್ಥ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ನಗರಾಧ್ಯಕ್ಷ ಪ್ರಮೋದ್ ಮುತ್ತಪ್ಪ, ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡುರಾವ್ ಮತ್ತಿತರರು ಇದ್ದರು.