ಕುಶಾಲನಗರ, ಆ 11:ನಂಜರಾಯಪಟ್ಟಣ ಗ್ರಾಪಂ ನಲ್ಲಿ ಅಧ್ಯಕ್ಷರ ನೂತನ ಕಛೇರಿ ಕೊಠಡಿ ಉದ್ಘಾಟನೆ, ಫಲಾನುಭವಿಗಳಿಗೆ ಚೆಕ್ ವಿತರಣೆ ಹಾಗೂ ನೂತನ ಟ್ರಾಕ್ಟರ್ ಗೆ ಚಾಲನೆ ಕಾರ್ಯಕ್ರಮ ನಡೆಯಿತು.
ಪಂಚಾಯತ್ ಅನುದಾನದಲ್ಲಿ
ಕಸ ವಿಲೇವಾರಿಗೆಂದು ರೂ 10.75 ಲಕ್ಷ ವೆಚ್ಚದಲ್ಲಿ ಖರೀದಿಸಿದ ಟ್ರಾಕ್ಟರ್ ಗೆ ಗ್ರಾಮದ ನಂಜುಂಡೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಪಂಚಾಯತ್ ಅಧ್ಯಕ್ಷ ಸಿ.ಎಲ್.ವಿಶ್ವ ಚಾಲನೆ ನೀಡಿದರು.
ಇದೇ ಸಂದರ್ಭ ಎಸ್.ಸಿ.ಪಿ, ಟಿ.ಎಸ್.ಪಿ ಯೋಜನೆಯಡಿ 15 ಮಂದಿ ಫಲಾನುಭವಿಗಳಿಗೆ ಸಹಾಯಧನದ ಚೆಕ್ ಹಸ್ತಾಂತರ ಮಾಡಲಾಯಿತು.
ಪಂಚಾಯತ್ ಅಧ್ಯಕ್ಷರ ನೂತನ ಕಛೇರಿ ಕೊಠಡಿಯನ್ನು ಇದೇ ಸಂದರ್ಭ ಉದ್ಘಾಟಿಸಲಾಯಿತು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ, 2013 ರಲ್ಲಿ ಗ್ರಾಪಂ ಕಸ ವಿಲೇವಾರಿ ಘಟಕ ಸ್ಥಾಪಿಸಲಾಯಿತಾದರೂ ಕಸ ಸಾಗಾಟಕ್ಕೆ ಟ್ರಾಕ್ಟರ್ ಒದಗಿಸಲು ಸಲ್ಲಿಸಿದ ಯಾವುದೇ ಬೇಡಿಕೆ ಈಡೇರಲಿಲ್ಲ. ಸತತ 10 ವರ್ಷಗಳ ಕಾಲ ಬಾಡಿಗೆ ಆಧಾರದಲ್ಲಿ ಟ್ರಾಕ್ಟರ್ ಪಡೆದು ಕಸ ವಿಲೇವಾರಿ ಮಾಡಲಾಗುತ್ತಿತ್ತು. ಇದೀಗ ಸರ್ವ ಸದಸ್ಯರು, ಅಧಿಕಾರಿಗಳ ಸಹಕಾರದಿಂದ ಪಂಚಾಯ್ತಿ ನಿಧಿಯಿಂದ ಸ್ವಂತ ಟ್ರಾಕ್ಟರ್ ಖರೀದಿಸಲು ಸಾಧ್ಯವಾಗಿದೆ. ಗ್ರಾಮದ ಬಡ ವರ್ಗಕ್ಕೆ ಅಂತ್ಯಕ್ರಿಯೆ ಕಾರ್ಯಗಳಿಗೆ ಕಟ್ಟಿಗೆ ಸಾಗಿಸಲು ಉಚಿತವಾಗಿ ಟ್ರಾಕ್ಟರ್ ಸೌಕರ್ಯ ಒದಗಿಸಲು ಆಡಳಿತ ಮಂಡಳಿ ನಿರ್ಣಯ ಕೈಗೊಂಡಿದೆ ಎಂದು ತಿಳಿಸಿದರು.
ಈ ಸಂದರ್ಭ ಗ್ರಾಪಂ ಉಪಾಧ್ಯಕ್ಷೆ ಕುಸುಮ, ಸದಸ್ಯರಾದ ಆರ್.ಕೆ.ಚಂದ್ರ, ಮಾವಾಜಿ ರಕ್ಷಿತ್, ಸಮೀರ, ಮಾಜಿ ಸದಸ್ಯರಾದ ಚಂದ್ರಾವತಿ, ಟಿ.ಕೆ.ಸುಮೇಶ್, ಪಿಡಿಒ ಕಲ್ಪ, ಕಾರ್ಯದರ್ಶಿ ಶೇಷಗಿರಿ ಸೇರಿದಂತೆ ಸಿಬ್ಬಂದಿಗಳು, ಫಲಾನುಭವಿಗಳು, ಗ್ರಾಮಸ್ಥರು ಇದ್ದರು.
Back to top button
error: Content is protected !!