ಕುಶಾಲನಗರ, ಮೇ 15: ಅಬೇಧ್ಯ ಎನ್ನುವ ಬಿಜೆಪಿ ಕೋಟೆಯನ್ನು ಕಾಂಗ್ರೆಸ್ ಬೇಧಿಸಿದ್ದು ಈ ಮೂಲಕ, ಕೊಡಗು ಜಿಲ್ಲೆ ಹೊಸ ಪರ್ವಕ್ಕೆ ಕಾಲಿಟ್ಟಿದೆ. ಬಿಜೆಪಿ ಮುಕ್ತ ಆಡಳಿತಕ್ಕೆ ಅಂಕುರಾರ್ಪಣೆಯಾಗಿದೆ ಎಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಹೇಳಿದರು.
ಕುಶಾಲನಗರದ ಕಾಂಗ್ರೆಸ್ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಮುಂಬರುವ ಜಿಪಂ, ತಾಪಂ, ಪುರಸಭೆ ಸೇರಿದಂತೆ ಸಹಕಾರ ಸಂಘಗಳ ಚುನಾವಣೆಯನ್ನು ಅತ್ಯಂತ ಉತ್ಸಾಹ ಹಾಗೂ ಹುರುಪಿನಿಂದ ಎದುರಿಸಲಿದ್ದೇವೆ. ದೂರದೃಷ್ಠಿಯ ಕೊರತೆಯಿಂದ ಹತ್ತು ಹಲವು ಎಡಬಿಂಡಂಗಿತನ ಹಿಂದಿನ ಶಾಸಕರ ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿದ ಅವರು, ಶಾಸಕರ ಹಲವು ವೈಫಲ್ಯಗಳ ಬಗ್ಗೆ ಆಕ್ರೋಷ ವ್ಯಕ್ತಪಡಿಸಿದರು.
ನೂತನವಾಗಿ ಆಯ್ಕೆಯಾದ ಶಾಸಕ ಮಂಥರ್ ಗೌಡ ಅವರ ಅವಧಿಯಲ್ಲಿ ಕೊಡಗಿನಲ್ಲಿ ಅಗತ್ಯವಾಗಿ ಬೇಕಿರುವ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದಾಗಿ ತಿಳಿಸಿದರು. ಈ ನಿಟ್ಟಿನಲ್ಲಿ ಕ್ಷೇತ್ರದ ಎಲ್ಲಾ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆ ಶೀಘ್ರದಲ್ಲಿ ನಡೆಯಲಿದೆ. ಜನಪೀಡಕ, ಭ್ರಷ್ಟ ಅಧಿಕಾರಿಗಳಿಗೆ ಇಲ್ಲಿ ಜಾಗವಿಲ್ಲ. ಹಿಂದಿನ ಶಾಸಕರ ಕೈಗೊಂಬೆಯಂತೆ ವರ್ತಿಸಿದ ಅಧಿಕಾರಿಗಳು ಬದಲಾಗಬೇಕಿದೆ. ಮಾಜಿ ಶಾಸಕರ ಅವಧಿಯಲ್ಲಿ ನಡೆದ ಕೆಲವು ಕಾಮಗಾರಿಗಳ ಬಗ್ಗೆ ಅಗತ್ಯ ಬಿದ್ದಲ್ಲಿ ತನಿಖೆಗೆ ಒಳಪಡಿಸಲಿದ್ದೇವೆ ಎಂದು ಎಚ್ಚರಿಸಿದರು.
ಕಲಾಭವನ, ಯುಜಿಡಿ ಲೋಕಾರ್ಪಣೆ, ತಾಲೂಕು ಕೇಂದ್ರಕ್ಕೆ ಮೂಲಸೌಕರ್ಯ, ಆಡಳಿತ ಭವನ ನಿರ್ಮಾಣ, ಪ್ರವಾಹ ಪರಿಸ್ಥಿತಿಗೆ ಸಂಭಂದಿಸಿದ ವೈಜ್ಞಾನಿಕ ಚಿಂತನೆ, ಕುಡಿವ ನೀರಿನ ಸಮಸ್ಯೆ ನಿವಾರಣೆ ಸೇರಿದಂತೆ ಎಲ್ಲಾ ರೀತಿಯ ಅಭಿವೃದ್ದಿಗೆ ನೂತನ ಶಾಸಕರು ಕ್ರಮವಹಿಸಲಿದ್ದಾರೆ ಎಂದರು.
ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಮಾತನಾಡಿ, ನೂತನ ಶಾಸಕರ ಗೆಲುವಿಗೆ ಪ್ರತ್ಯೇಕ್ಷ ಹಾಗೂ ಪರೋಕ್ಷವಾಗಿ ಶ್ರಮಿಸಿ ಸಹಕರಿಸಿದವರಿಗೆ ಧನ್ಯವಾದ ಸಲ್ಲಿಸಿದರು.
ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡುರಾವ್ ಮಾತನಾಡಿ, 25 ವರ್ಷಗಳ ಬಳಿಕವಾದರೂ ಮತದಾರರು ಬದಲಾವಣೆ, ಅಭಿವೃದ್ಧಿ ಬಯಸಿ ಕಾಂಗ್ರೆಸ್ ಗೆ ಮತ ನೀಡಿದ್ದಾರೆ. ಜನಸಾಮಾನ್ಯರಿಗೆ, ವ್ಯಾಪಾರಸ್ಥರಿಗೆ, ಪ್ರವಾಸೋದ್ಯಮಕ್ಕೆ ಪೂರಕವಾಗಿ ಬೇಕಾದ ವಿಶೇಷ ಯೋಜನೆಗಳನ್ನು ಸರಕಾರದ ಮೂಲಕ ಜಾರಿಗೊಳಿಸಲು ಶಾಸಕರು ಪ್ರಯತ್ನಿಸಲಿದ್ದಾರೆ. ಕೊಡಗಿಗೆ ದೊರೆಯಬೇಕಾದ ಮಾನ್ಯತೆ ದೊರಕಲಿದೆ ಎಂದರು.
ಗೋಷ್ಠಿಯಲ್ಲಿ ಪ್ರಮುಖರಾದ ಜೋಸೆಫ್ ವಿಕ್ಟರ್ ಸೋನ್ಸ್, ಶೇಖ್ ಖಲೀಮುಲ್ಲಾ, ಶಿವಶಂಕರ್, ಕಿರಣ್, ಅಬ್ದುಲ್ ಖಾದರ್, ಚಂದ್ರು ಇದ್ದರು.
Back to top button
error: Content is protected !!