ವಿಶೇಷ

ಕುಶಾಲನಗರದ ವಿವೇಕಾನಂದ ಕಾಲೇಜಿನಲ್ಲಿ ಅಮ್ಮನ ದಿನ ಆಚರಣೆ

ಕುಶಾಲನಗರ, ಮೆ 14: ಇಲ್ಲಿನ ವಿವೇಕಾನಂದ ಪಿಯು ಕಾಲೇಜಿನಲ್ಲಿ ವಿಶ್ವ ಅಮ್ಮನ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾಲೇಜಿನಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಹಾಗು ಭೋದಕ ವರ್ಗದವರೆಲ್ಲರು ತಮ್ಮ ತಮ್ಮ ತಾಯಂದಿರನ್ನು ಅಮ್ಮನ ದಿನೋತ್ಸವಕ್ಕೆ ಕರೆತಂದು ಕಾರ್ಯಕ್ರಮಕ್ಕೆ ಕಳೆ ತಂದು ಅವರನ್ನೆಲ್ಲಾ ಮನದುಂಬಿ ಗೌರವಿಸಿ ನಮಿಸಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರಿನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕೇಶವ ಬಂಗೇರ ಈ ಸಂದರ್ಭ ಮಾತನಾಡಿ, ಅಮ್ಮನ ಪ್ರೀತಿಗೆ ಗೌರವ ತೋರುವ ಈ ಸುದಿನದಲ್ಲಿ ಅಮ್ಮನ ಮಮತೆಯನ್ನು ಸ್ಮರಿಸಿ ಸದಾ ಕಾಲ ಆ ತಾಯಿಗೆ ಪ್ರೀತಿಯ ಗೌರವಗಳನ್ನು ತೋರುವ ಸಂಸ್ಕಾರ ಅತ್ಯಂತ ಅಗತ್ಯವಿದೆ. ಇಂದು ಶಾಲಾ ಕಾಲೇಜುಗಳಲ್ಲಿ ವ್ಯಾಸಾಂಗ ಮಾಡುವ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಉತ್ತಮ ಸಂಸ್ಕಾರಗಳನ್ನು ಕಲಿಯುವ ಮೂಲಕ ಭಾರತೀಯ ಸನಾತನ ಪರಂಪರೆಯನ್ನು ಸಂರಕ್ಷಿಸಬೇಕಿದೆ ಎಂದರು.
ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಂ.ನಾಗೇಶ್ ಮಾತನಾಡಿ, ಭಾರತೀಯ ಸನಾತನ ಪರಂಪರೆಯಲ್ಲಿ ಮಹಿಳೆಗೆ ವಿಶೇಷ ಸ್ಥಾನ ಮಾನವಿದೆ. ಪಾಶ್ಚಿಮಾತ್ಯ ಸಂಸ್ಕ್ರತಿ ಮೇಳೈಸುತ್ತಿರುವ ಇಂದಿನ ದಿನಮಾನಗಳಲ್ಲಿ ಹೆಣ್ಣು ಮಕ್ಕಳಿಗೆ ಉತ್ತಮ ಸಂಸ್ಕಾರಗಳು ಅತಿ ಮುಖ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ ಕಾರಣಗಳಿಗಾಗಿ ವಿವಾಹ ವಿಚ್ಛೇದನಗಳು ಹೆಚ್ಚುತ್ತಿವೆ ಎಂದು ವಿಷಾದಿಸಿದ ನಾಗೇಶ್, ಕೇವಲ ಹಣ ಅಥವಾ ಆಸ್ತಿಗಾಗಿ ಹುಡುಗರನ್ನು ವರಿಸಿ ವಿವಾಹವಾಗಿ ನಂತರ ಕೈಕೊಟ್ಟು ಹೋಗುವಂತಹ ಕೆಟ್ಟ ಪರಂಪರೆ ಸನಾತನ ಸಮಾಜಕ್ಕೆ ಮಾರಕವಾಗಿದೆ.
ಆದ್ದರಿಂದ ಅಮ್ಮನ ದಿನದ ಆಚರಣೆ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳಬೇಕೆಂದು ಅವರು ಕರೆಕೊಟ್ಟರು.
ಮುಖ್ಯ ಅತಿಥಿಗಳಾಗಿ ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಎನ್.ಎನ್. ಶಂಭುಲಿಂಗಪ್ಪ ಅವರ ತಾಯಿ ಶಿವಮ್ಮ, ಕಾಲೇಜಿನ ಸಂಸ್ಥಾಪಕರಾದ ಎಂ.ಜಿ.ಪ್ರಭುದೇವ್ ಅವರ ತಾಯಿ ಸರೋಜಮ್ಮ, ಚಂದ್ರಕಲಾ ಬಡಿಗೇರ್ ಮತ್ತಿತರರ ತಾಯಂದಿರನ್ನು ಕಾರ್ಯಕ್ರಮದಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ಇದೇ ಸಂದರ್ಭ ಸರಿಗಮಪ ಪ್ರಶಸ್ತಿ ವಿಜೇತೆ ಪ್ರಗತಿ ಬಡಿಗೇರ್ ಅವರು ಅಮ್ಮನ ಕುರಿತಾದ ಹಾಡು ಹಾಡಿ ನೆರೆದವರನ್ನು ರಂಜಿಸಿದರು. ಕಾಲೇಜಿನ ಟ್ರಸ್ಟಿ ಎನ್.ಎನ್.ನಂಜಪ್ಪ, ಮಹೇಶ್ ಅಮೀನ್ ಇದ್ದರು.
ಮಹಾತ್ಮ ಗಾಂಧಿ ಕಾಲೇಜಿನ ಪ್ರಾಂಶುಪಾಲರಾದ ಲಿಖಿತಾ ಸ್ವಾಗತಿಸಿದರು.
ವಿದ್ಯಾರ್ಥಿನಿ ಭೂಮಿಕಾ ನಿರೂಪಿಸಿದರು.
ಉಪನ್ಯಾಸಕಿ ಹೇಮಾವತಿ ಅಮ್ಮನ ದಿನದ ಕುರಿತು ಮಾತನಾಡಿದರು.
ವಿವೇಕಾನಂದ ಪಿಯು ಕಾಲೇಜು ಪ್ರಾಂಶುಪಾಲೆ ಕ್ಲಾರಾ ರೇಷ್ಮಾ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!