ಪ್ರಕಟಣೆ
ಹೊಸ ವರ್ಷಕ್ಕೆ ಪ್ರವಾಸಿ ತಾಣಗಳ ಎಂಟ್ರಿ ಫೀಸ್ ಹೆಚ್ಚಳ
ಕುಶಾಲನಗರ, ಡಿ 30:ಹೊಸ ವರ್ಷಕ್ಕೆ ಕೊಡಗಿನ ಪ್ರಮುಖ ಪ್ರವಾಸಿ ತಾಣಗಳ ಪ್ರವೇಶ ಶುಲ್ಕ ಏರಿಕೆಯಾಗಲಿದೆ.
ನಿರ್ವಹಣೆ ಉದ್ದೇಶದಿಂದ ಆದಾಯ ಕ್ರೋಡೀಕರಣಕ್ಕೆ ಮುಂದಾಗಿರುವ ಕೊಡಗು ವೃತ್ತದ ಅರಣ್ಯ ಇಲಾಖೆ ಕುಶಾಲನಗರ ತಾಲೂಕಿನ ಪ್ರಮುಖ ಪ್ರವಾಸಿ ತಾಣಗಳಾದ ಕಾವೇರಿ ನಿಸರ್ಗಧಾಮ, ದುಬಾರೆ ಹಾಗೂ ಹಾರಂಗಿ ಸಾಕಾನೆ ಶಿಬಿರಗಳ ಎಂಟ್ರೀ ಫೀಸ್ ನಲ್ಲಿ ಏರಿಕೆ ಮಾಡಿದೆ.
ಕಾವೇರಿ ನಿಸರ್ಗಧಾಮ ಪ್ರವೇಶ ಶುಲ್ಕ ಪ್ರಸ್ತುತ ಇದ್ದ 30 ರೂ 60 ರೂಗಳಿಗೆ ಏರಿಕೆ ಮಾಡಲಾಗಿದೆ.
ದುಬಾರೆಗೆ ಪ್ರವೇಶ ಶುಲ್ಕ 50 ರಿಂದ 100 ಹಾಗೂ ಹಾರಂಗಿ ಸಾಕಾನೆ ಶಿಬಿರಕ್ಕೆ 30 ರಿಂದ 50 ರೂಗಳಿಗೆ ಏರಿಕೆ ಮಾಡಲಾಗಿದೆ. 2023 ಜನವರಿ 1 ಭಾನುವಾರದಿಂದ ಈ ಶುಲ್ಕಗಳು ಅನ್ವಯವಾಗಲಿದೆ.
ನಿರ್ವಹಣೆ ಉದ್ದೇಶ: ಈಗಾಗಲೆ ಕಾವೇರಿ ನಿಸರ್ಗಧಾಮದಲ್ಲಿರುವ ಹಳೆಯ ತೂಗು ಸೇತುವೆ ಶಿಥಿಲಾವಸ್ಥೆಯಲ್ಲಿರುವ ಕಾರಣ ಈ ಸೇತುವೆ ಮೇಲಿನ ಓಡಾಟವನ್ನು ಬಂದ್ ಮಾಡಲಾಗಿದೆ. ಸೇತುವೆ ದುರಸ್ಥಿಗೆ ಅಂದಾಜು 45 ಲಕ್ಷ ಅಗತ್ಯವಿದೆ. ಸೇತುವೆ ದುರಸ್ಥಿ ಸೇರಿದಂತೆ ಮಾನವ ಪ್ರಾಣಿ ಸಂಘರ್ಷದ ಪರಿಹಾರ ಮೊತ್ತ ಕೂಡ ಏರಿಕೆಯಾಗಿರುವ ಕಾರಣ ಇದರ ನಿರ್ವಹಣೆ ಉದ್ದೇಶದಿಂದ ಪ್ರವೇಶ ದರ ಏರಿಕೆ ಮಾಡಿ ಹಣ ಕ್ರೋಡೀಕರಣಕ್ಕೆ ಅರಣ್ಯ ಇಲಾಖೆ ಮುಂದಾಗಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ಪ್ರವಾಸಿ ತಾಣಗಳ ಪ್ರವೇಶ ಶುಲ್ಕ ಕೊಂಚ ಕಡಿಮೆಯಿದೆ. ಹೀಗಾಗಿ ಶುಲ್ಕ ಏರಿಕೆ ಮಾಡಲಾಗಿದೆ. ಇದರಿಂದ ಬರುವ ಆದಾಯವನ್ನು ಕೊಡಗು ಮಾನವ ಪ್ರಾಣಿ ಸಂಘರ್ಷ ಉಪಶಮನ ನಿಧಿಗಳಿಗೆ ಬಳಕೆ ಮಾಡಲಾಗುತ್ತದೆ.