ಧಾರ್ಮಿಕ

ನ.25 ರಂದು ಹೆಬ್ಬಾಲೆ ಶ್ರೀ ಬನಶಂಕರಿ ಅಮ್ಮನ ಉತ್ಸವ: ಸಿದ್ದತೆ, ಸ್ವಚ್ಚತಾ ಕಾರ್ಯ

ಕುಶಾಲನಗರ, ನ 23: ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆ ಗ್ರಾಮದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಗ್ರಾಮ ದೇವತೆ ಶ್ರೀ ಬನಶಂಕರಿ ಅಮ್ಮನವರ ವಾರ್ಷಿಕ ಉತ್ಸವ ನ.25 ರಂದು ಶುಕ್ರವಾರ ವಿಜೃಂಭಣೆಯಿಂದ ನಡೆಯಲಿದೆ.
ಶ್ರೀ ಬನಶಂಕರಿ ಅಮ್ಮನವರ ದೇವಸ್ಥಾನ ಮತ್ತು ಶ್ರೀ ಬಸವೇಶ್ವರ ದೇವಸ್ಥಾನ ಹಾಗೂ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಸಮಿತಿ ಹಾಗೂ ಗ್ರಾಮಸ್ಥರ ವತಿಯಿಂದ ಶುಕ್ರವಾರ ರಾತ್ರಿ ಶಕ್ತಿ ಸ್ವರೂಪಿಣಿ ಬನಶಂಕರಿ ದೇವಿಗೆ ವಿಶೇಷ ಪೂಜೆ ನೆರವೇರಲಿದೆ ಎಂದು ಸಮಿತಿ ಪ್ರಮುಖರು ತಿಳಿಸಿದ್ದಾರೆ.
ಪ್ರತಿ ವರ್ಷದಂತೆ ಅಮ್ಮನವರ ಸನ್ನಿಧಿಯಲ್ಲಿ ಬೆಳಿಗ್ಗೆ 7 ಘಂಟೆಗೆ ಗಣಪತಿ ಪೂಜೆ,ಪುಣಾಹಃ ರಕ್ಷಾಬಂಧನ ಧ್ವಜಾರೋಹಣ ನವಗ್ರಹ ಸ್ಥಾಪನೆ, ನವಗ್ರಹ ಪೂಜೆ ಮಹಾ ಮಂಗಳಾರತಿ ಸೇರಿದಂತೆ ಇನ್ನಿತರ ಪೂಜಾ ಕೈಂಕರ್ಯಗಳು ದೇವಾಲಯದ ಪ್ರಧಾನ ಅರ್ಚಕ ಕೃಷ್ಣಮೂರ್ತಿ ನೇತೃತ್ವದಲ್ಲಿ ನಡೆಯಲಿವೆ.
ಗ್ರಾಮದಲ್ಲಿ ದೇವಿಯ ವಾರ್ಷಿ ಕ ಹಬ್ಬದ ಅಂಗವಾಗಿ ಪವಿತ್ರ ಬನದಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಬೆಳಿಗ್ಗೆ ಕಳಶ ಸ್ಥಾಪಿಸುವುದರೊಂದಿಗೆ ವಿವಿಧ ಕಾರ್ಯಗಳು ದೇವಸ್ಥಾನ ಸಮಿತಿ ಅಧ್ಯಕ್ಷ ಯಜಮಾನ್ ಎಚ್.ಎನ್.ಬಸವರಾಜು ಹಾಗೂ ಎಚ್.ಪಿ.ರಾಜಪ್ಪ ಹಾಗೂ ಸಮಿತಿ ಪದಾಧಿಕಾರಿಗಳು, ಸದಸ್ಯರ ನೇತೃತ್ವದಲ್ಲಿ ನಡೆಯಲಿವೆ. ಸಂಜೆ 4 ಗಂಟೆಗೆ ಕ್ಷೀರಾಭಿಷೇಕ, ಗಣಪತಿ ಪೂಜೆ ನಂತರ ದೇವಿಯನ್ನು ಅಲಂಕರಿಸಲಾಗುತ್ತದೆ. ರಾತ್ರಿ 8 ಗಂಟೆಗೆ ಬನದಲ್ಲಿ ಅಗ್ನಿಕುಂಡ ಸ್ಥಾಪಿಸಲಾಗುತ್ತದೆ. ಹರಕೆ ಹೊತ್ತ ಭಕ್ತಾದಿಗಳು ಅಗ್ನಿಕುಂಡ ತುಳಿದು ದೇವಿ ದರ್ಶನ ಪಡೆದು ಪೂಜೆ ಸಲ್ಲಿಸುತ್ತಾರೆ. ರಾತ್ರಿ 10.30 ಗಂಟೆ ವೇಳೆಗೆ ಗ್ರಾಮದ ಶ್ರೀ ಬಸವೇಶ್ವರ ದೇವಾಲಯದ ಬಳಿಯಿಂದ ವಿದ್ಯುತ್ ಅಲಂಕೃತ ಮಂಟಪದಲ್ಲಿ ಬನಶಶಂಕರಿ ದೇವಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ನಂತರ ಉತ್ಸವವನ್ನು ನೆರವಣಿಗೆ ಮೂಲಕ ಪವಿತ್ರ ಬನಕ್ಕೆ ಕೊಂಡೊಯ್ಯಲಾಗುತ್ತದೆ. ಮಡಿಕೇರಿ ದಸರಾ ಮಾದರಿಯಲ್ಲಿಯೇ ನಡೆಯುವ ಉತ್ಸವಗಳ ಮೆರವಣಿಗೆ ಗ್ರಾಮದೇವತೆ ಹಬ್ಬಕ್ಕೆ ವಿಶೇಷ ಮೆರಗು ನೀಡುತ್ತವೆ. ದೇವಸ್ಥಾನ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಹಬ್ಬದ ಸಿದ್ಧತಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಇಡೀ ಗ್ರಾಮವನ್ನು ಶುಚ್ಚಿಗೊಳಿಸುವ ಕಾರ್ಯವನ್ನು ಗ್ರಾ.ಪಂ.ವತಿಯಿಂದ ಕೈಗೊಳ್ಳಲಾಗಿದೆ. ಸ್ಥಳೀಯ ಕಾಲೇಜು ವಿದ್ಯಾರ್ಥಿಗಳು ಶ್ರಮದಾನ‌ ಮೂಲಕ ಸ್ವಚ್ಚತೆ ನಡೆಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!