ಕುಶಾಲನಗರ, ಅ 06:: ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಲೆನಾಡ ಸಿರಿಯ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಸ್ಥಳಗಳಿಗೆ ಎರಡು ದಿನಗಳ ಸಾಹಿತ್ಯ ಪ್ರವಾಸವನ್ನು ಹಮ್ಮಿಕೊಳ್ಳಲಾಗಿತ್ತು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಪ್ರವಾಸದಲ್ಲಿ ದೇಶದ ಎರಡನೇ ಅತೀ ದೊಡ್ಡ ಪರ್ವತ ಶಿಖರ ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ, ಮುಳ್ಳಯ್ಯನ ಗಿರಿ, ಬಾಬಾ ಬುಡನ್ ಗಿರಿ, ದೇವೀರಮ್ಮನ ಬೆಟ್ಟ, ಹಾಸನ ಜಿಲ್ಲೆಯ ಹಳೇಬೀಡು ಬಳಿಯ ಪುಷ್ಪಗಿರಿ ಬೆಟ್ಟಗಳಿಗೆ ತೆರಳಿ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯಲಾಯಿತು.
ಚಿಕ್ಕಮಗಳೂರಿನ ಶಿಕ್ಷಕರಾದ ಓಂಕಾರಪ್ಪ ಅವರು ಕಸಾಪ ತಂಡದೊಂದಿಗೆ ಸೇರ್ಪಡೆಯಾಗಿ ಚಾರಣವನ್ನು ಕೈಗೊಳ್ಳುವ ಮೂಲಕ ಮೇಲಾಕಾಶಕ್ಕೆ ಮುತ್ತಿಡುವಂತಿದ್ದ ಅಲ್ಲಿನ ಕೆಲವು ಶಿಖರಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.
ರಾತ್ರಿ ನಡೆದ ಕಸಾಪ ಪ್ರವಾಸಿ ತಂಡದ ಸದಸ್ಯರ ಕವಿಗೋಷ್ಠಿಯಲ್ಲಿ ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮಹೇಶ್ ಪಾಲ್ಗೊಂಡು ಶುಭ ಹರಸಿದರು.
ತಂಡದ ಸದಸ್ಯೆಯೂ ಆದ ಕವಯತ್ರಿ ಲೀಲಾಕುಮಾರಿ ತೊಡಿಕಾನ ಶಿಖರಗಳ ಕುರಿತು ಕವನ ಬರೆದು ವಾಚಿಸಿದರು. ಹಿರಿಯ ಸದಸ್ಯೆ ಸೂದನ ರತ್ನಾವತಿ ಗೀತೆ ಹಾಡಿದರು.
ಎರಡು ದಿನಗಳ ಪ್ರವಾಸವನ್ನು ಶಿಸ್ತುದ್ಧವಾಗಿ ರೂಪಿಸಿದ್ದಕ್ಕಾಗಿ ಪರಿಷತ್ತು ವತಿಯಿಂದ ಕಸಾಪ ನಿರ್ದೇಶಕಿ ಟಿ.ವಿ.ಶೈಲಾ ಅವರನ್ನು ಗೌರವಿಸಲಾಯಿತು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ, ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ನಾಗರಾಜ, ಕೋಶಾಧಿಕಾರಿ ಕೆ.ವಿ.ಉಮೇಶ್, ನಿರ್ದೇಶಕರಾದ ಹೇಮಲತಾ, ಎಂ.ಎನ್.ಕಾಳಪ್ಪ, ಶಿಕ್ಷಕಿ ಉಷಾ ಇದ್ದರು.
Back to top button
error: Content is protected !!