ಕುಶಾಲನಗರ, ಸೆ 08: : ಯುಗದ ಕವಿ, ಜಗದ ಕವಿ ಕುವೆಂಪು ಪುತ್ರ ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನವನ್ನು ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕೂಡಿಗೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಗುರುವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಪೂರ್ಣ ಚಂದ್ರ ತೇಜಸ್ವಿ ಕುಟುಂಬದ ಸದಸ್ಯರೂ ಆದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕುವೆಂಪು, ತೇಜಸ್ವಿ ಕಾಲಘಟ್ಟದ ಸಾಹಿತ್ಯ ವಲಯ ಇಂದು ಮರೀಚಿಕೆಯಾಗುತ್ತಿದೆ. ವಿದ್ಯಾರ್ಥಿಗಳು ಹೆಚ್ಚು ಹೆಚ್ವು ಅಧ್ಯಯನ ಮಾಡುವ ಮೂಲಕ ಸಾಹಿತಿಗಳ ಬದುಕು ಬರಹ ಅರಿತು ಲೋಕಜ್ಞಾನಿಗಳಾಗುವ ಮೂಲಕ ಕವಿ ಸಾಹಿತಿಗಳಾಗಬೇಕೆಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರು
ಪೂರ್ಣಚಂದ್ರ ತೇಜಸ್ವಿ ಅವರ ಬದುಕು – ಬರಹದ ಕುರಿತು ಉಪನ್ಯಾಸ ನೀಡಿದ ಕುಶಾಲನಗರದ ಸರ್ಕಾರಿ ಜೂನಿಯರ್ ಕಾಲೇಜಿನ ಉಪನ್ಯಾಸಕರೂ ಆದ ಕಸಾಪ ಸದಸ್ಯ ಉ.ರಾ.ನಾಗೇಶ್ ಮಾತನಾಡಿ, ಅದ್ಭುತವಾದ ವಿಚಾರಶೀಲ, ವಿಭಿನ್ನ ಆಲೋಚನಾ ಶೀಲಾ, ದೂರದೃಷ್ಟಿತ್ವದ ವ್ಯಕ್ತಿತ್ವ ಪೂರ್ಣಚಂದ್ರ ತೇಜಸ್ವಿಯವರದು. ಮತ್ತೊಬ್ಬರ ಬಗ್ಗೆ ದುರಾಲೋಚನೆ ಗೈಯದ ಮತ್ತು ಸಾಹಿತ್ಯ, ಕೃಷಿ ಹಾಗು ಪ್ರಕೃತಿಯ ಬಗ್ಗೆ ದೂರಾಲೋಚನೆಗೈದ ಸಾರ್ಥಕ ಜೀವನ ತೇಜಸ್ವಿ ಅವರದು.
ಕುವೆಂಪು ಪ್ರಕೃತಿಯನ್ನು ದೇವರಾಗಿ ಕಂಡರೆ, ತೇಜಸ್ವಿ ಪ್ರಕೃತಿಯನ್ನು ಆರಾಧಿಸಿದವರು. ಇಂತಹ ಶ್ರೇಷ್ಟ ಸಾಹಿತಿಗಳ ಸ್ಮರಣೆ ನಿತ್ಯವೂ ನಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರು.
ಅಧ್ಯಕ್ಷತೆ ವಹಿಸಿದ್ದ ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಮೂರ್ತಿ ಮಾತನಾಡಿ, ಪೂರ್ಣಚಂದ್ರ ತೇಜಸ್ವಿ ಅವರು ಮೂಢನಂಬಿಕೆಗಳನ್ನು ಮೆಟ್ಟಿ ನಿಲ್ಲುವ ಮೂಲಕ ಅಸ್ವಾಭಾವಿಕ ರೀತಿಗಳ ಬದುಕಿನಿಂದ ಹೊರನಿಂತು ತಮ್ಮ ಜೀವನವನ್ನು ಸೃಜನಶೀಲಗೊಳಿಸಿದ ಕನ್ನಡ ನಾಡಿನ ಅಪರೂಪದ ಕವಿ ಎಂದರು. ಅಧ್ಯಕ್ಷತೆ ವಹಿಸಿದ್ದ
ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಕೆ.ಪ್ರಕಾಶ್ ಮಾತನಾಡಿ, ಪೂರ್ಣಚಂದ್ರ ತೇಜಸ್ವಿ ಯವರು ತಮ್ಮ ತಂದೆ ಕುವೆಂಪು ಅವರ ನೆರಳನ್ನು ಸಾಹಿತ್ಯ ಕ್ಷೇತ್ರಕ್ಕೆ ಬಳಸಿಕೊಳ್ಳದೇ ವಿಶಿಷ್ಟವಾದ ಪ್ರತಿಭೆಯಿಂದ ಸಾಹಿತ್ಯ ಕ್ಷೇತ್ರಕ್ಕೆ ತೆರೆದುಕೊಂಡ ಕನ್ನಡ ಸಾಹಿತ್ಯದ ತೀರಾ ಅಪರೂಪದ ಕವಿ ಎಂದು ಶ್ಲಾಘಿಸಿದರು.
ಜಿಲ್ಲಾ ಕಸಾಪ ನಿರ್ದೇಶಕ ಮೆ.ನಾ.ವೆಂಕಟನಾಯಕ್,
ಕಾರ್ಯಕ್ರಮದಲ್ಲಿ ಕೂಡಿಗೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ.ಹೇಮಂತಕುಮಾರ್, ಹೆಬ್ಬಾಲೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಎನ್.ಮೂರ್ತಿ, ತಾಲ್ಲೂಕು ಕಸಾಪ ಕೋಶಾಧಿಕಾರಿ ಕೆ.ವಿ.ಉಮೇಶ್, ನಿರ್ದೇಶಕ ಎಂ.ಎನ್.ಕಾಳಪ್ಪ ಇದ್ದರು.
ಪ್ರಾಂಶುಪಾಲ ಪ್ರಕಾಶ್ ಸ್ವಾಗತಿಸಿ ಶಿಕ್ಷಕ ದಿನೇಶಾಚಾರಿ ವಂದಿಸಿದರು.
Back to top button
error: Content is protected !!