ಆರೋಪ

ಸಾಲ ಮರುಪಾವತಿಗೆ ಸತಾಯಿಸದೆ ಸಮಯಾವಕಾಶ ನೀಡಬೇಕಿದೆ: ತಹಸೀಲ್ದಾರ್ ಗೆ ಮನವಿ

ಕುಶಾಲನಗರ, ಜ 21: ವಿವಿಧ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದವರು ಸಾಲ ಮರುಪಾವತಿ ಸಾಧ್ಯವಾಗದೆ ಫೈನಾನ್ಸ್ ಗಳ ಕಿರುಕುಳದಿಂದ ಊರು ಬಿಟ್ಟ ಪ್ರಕರಣ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯಲ್ಲಿ ಕಂಡುಬಂದಿದೆ.

ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಮೀನುಕೊಲ್ಲಿ ಹಾಡಿ, ದಾಸವಾಳ ಪೈಸಾರಿ, ಬೆಳ್ಳಿ ಕಾಲೋನಿ ಈ ಭಾಗಗಳಲ್ಲಿ ಹಲವಾರು ಜನ ಕೂಲಿ ಕಾರ್ಮಿಕರಿದ್ದು, ಇಲ್ಲಿನ ಕೆಲವು ನಿವಾಸಿಗಳು ವಿವಿಧ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ಮರುಪಾವತಿಸಲು ಸಾಧ್ಯವಾಗದೆ ಊರು ಬಿಟ್ಟಿದ್ದಾರೆ ಎಂದು ನಂಜರಾಯಪಟ್ಟಣ ಗ್ರಾಪಂ ಅಧ್ಯಕ್ಷ ಸಿ.ಎಲ್. ವಿಶ್ವ ಮಾಹಿತಿ ಆರೋಪಿಸಿದ್ದಾರೆ.

ಸ್ಥಳೀಯ ಸಹಕಾರ ಸಂಘಗಳಿಂದ ಸಾಲ ನೀಡುವಾಗ ಕನಿಷ್ಠ ಮೂರು ಮಂದಿಯ ಜಾಮೀನು ಪಡೆದು ಸಾಲ ನೀಡಲಾಗುತ್ತದೆ. ಆದರೆ ಖಾಸಗಿ ಹಣಕಾಸು ಸಂಸ್ಥೆಗಳು ಸಾಲಗಾರರು ಸಾಲ ಮರುಪಾವತಿಸಲು ಶಕ್ತರಿದ್ದಾರೆಯೇ ಎಂಬುದನ್ನು ಪರಿಗಣಿಸದೆ ಕೇವಲ ಆಧಾರ್ ಕಾರ್ಡ್ ಆಧಾರವಾಗಿರಿಸಿ ಲಕ್ಷಲಕ್ಷ ಹಣ ಸಾಲ ನೀಡಿದ್ದು, ಇದೇ ರೀತಿ ಹಲವು ಸಂಸ್ಥೆಗಳಿಂದ ಸಾಲ‌ ಪಡೆದವರು ಇದೀಗ ಮರುಪಾವತಿ ಸಾಧ್ಯವಾಗದೆ ಊರು ಬಿಟ್ಟಿದ್ದಾರೆ.
ಈ ನಿಟ್ಟಿನಲ್ಲಿ ಸೂಕ್ತ ರೀತಿಯಲ್ಲಿ ಕ್ರಮವಹಿಸಿ ನೊಂದವರಿಗೆ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿ ತಾಲೂಕು ದಂಡಾಧಿಕಾರಿಗಳಿಗೆ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ, ಉಪಾಧ್ಯಕ್ಷೆ ಕುಸುಮಾ, ಸದಸ್ಯೆ ಸಮೀರಾ, ಜಾಜಿ ತಮ್ಮಯ್ಯ ಮನವಿ ಸಲ್ಲಿಸಿದರು.

ವಿವಿಧ ಖಾಸಗಿ ಫೈನಾನ್ಸ್ ಗಳು ಗ್ರಾಮ ವ್ಯಾಪ್ತಿಯಲ್ಲಿ ಕೂಲಿ‌ ಕಾರ್ಮಿಕ ಮಹಿಳೆಯರಿಗೆ ಲಕ್ಷ ಲಕ್ಷ ಸಾಲ ನೀಡಿದ್ದಾರೆ. ಆರ್ಥಿಕ ಮುಗ್ಗಟ್ಟಿನಿಂದ ಸಾಲ ಪಾವತಿಸದವರ ಮನೆಗಳಿಗೆ ಹಗಲು ರಾತ್ರಿ ಎನ್ನದೆ ದಾಳಿ ಮಾಡಿ ಸಾಲ ಪಾವತಿಸಲು ಒತ್ತಡ ಹೇರುತ್ತಿದ್ದಾರೆ. ಇದರಿಂದ ಒಂದಿಬ್ಬರು ಮಹಿಳೆಯರು ಆತ್ಮಹತ್ಯೆಗೆ ಕೂಡ ಶ್ರಮಿಸಿ ಬದುಕುಳಿದಿದ್ದಾರೆ. ಕಿರುಕುಳದಿಂದ ನೊಂದ 10 ಕ್ಕೂ ಅಧಿಕ ಮಹಿಳೆಯರು ರಾಜ್ಯವನ್ನೇ ತೊರೆದು ನೆರೆ ರಾಜ್ಯಕ್ಕೆ‌ ಕೆಲಸಕ್ಕೆ ತೆರಳಿದ್ದಾರೆ. ಮನೆ ತೊರೆದ ಮಹಿಳೆಯರ‌ ಪತಿಯಂದಿರು, ಮಕ್ಕಳು ತೀವ್ರ ಅನಾನುಕೂಲ ಹಾಗೂ ಅವಮಾನಕ್ಕೆ‌ ಒಳಗಾಗಿದ್ದಾರೆ. ಕೆಲವು ಮಹಿಳೆಯರು ಸಾಲ‌ ನೀಡಿದವರಿಗೆ ಹೆದರಿ ಅರಣ್ಯ ಹಾಗೂ ತೋಟದಲ್ಲೇ ಹೆಚ್ಚಿನ ಸಮಯ ಕಳೆಯುವಂತಾಗಿದೆ.
ಹಣಕಾಸು ಸಂಸ್ಥೆಗಳು ಸಾಲ ಮರು ಪಾವತಿಸಲು ಒತ್ತಡ ಹೇರದೆ ಕಾಲಾವಕಾಶ ನೀಡಬೇಕಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ತಹಸೀಲ್ದಾರ್ ಗೆ ಮನವಿ ಸಲ್ಲಿಸಲಾಗಿದೆ ಎಂದು ಸಿ.ಎಲ್.ವಿಶ್ವ ತಿಳಿಸಿದರು.

ಖಾಸಗಿ ಹಣಕಾಸು ಸಂಸ್ಥೆಯವರು ಸಾಲ ವಸೂಲಾತಿಗೆ ತಡರಾತ್ರಿ, ಮುಂಜಾನೆ ಎನ್ನದೆ ಮನೆಗೆ ಬರುತ್ತಿದ್ದು ಇದರಿಂದ ನಮಗೆ ತೀವ್ರ ತೊಂದರೆ ಉಂಟಾಗಿದೆ. ಆರ್ಥಿಕ ಮುಗ್ಗಟ್ಟಿನಿಂದ ಸಮಯಕ್ಕೆ ಸರಿಯಾಗಿ ಸಾಲದ ಕಂತು ಪಾವತಿಸಲು ಸಾಧ್ಯವಾಗದೆ ಕಾಲವಕಾಶ ಕೇಳಿದರೂ ನೀಡದೆ ಸತಾಯಿಸುತ್ತಾರೆ. ಇದರಿಂದ ಮನೆಯಲ್ಲಿ ಅಡುಗೆ ಮಾಡಲು, ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಮದ ಸುಮಿತ್ರಾ ಹಾಗೂ‌ ಮಣಿ ಅಳಲು ತೋಡಿಕೊಂಡಿದ್ದಾರೆ.
ಕೂಡಲೆ ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸಿ‌ ಮಧ್ಯಪ್ರವೇಶಿಸಿ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕಿದೆ ಎಂದು ಸಿ.ಎಲ್.ವಿಶ್ವ ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!