ಕುಶಾಲನಗರ, ನ 10; ಮಕ್ಕಳು ಬೆಳೆಯುವ ಹಂತದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಆಸಕ್ತಿ ಮೂಡಿಸುವಂತೆ ಕೆಲಸಗಳಲ್ಲಿ ತೊಡಗಬೇಕು, ಕೇವಲ ಪಠ್ಯಕ್ಕೆ ಸೀಮಿತವಾದಾಗ ಆಗ ಅದರಲ್ಲಿ ಏಕತಾನತೆ ಉಂಟಾಗಿ ಆಸಕ್ತಿ ಕಳೆದುಕೊಳ್ಳುತ್ತಾರೆ ಆದ್ದರಿಂದ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡು ತನ್ನ ಆಸಕ್ತಿದಾಯಕ ಕ್ಷೇತ್ರದಲ್ಲಿ ಮುಂದುವರಿಯಲು ಅವಕಾಶ ಸಿಕ್ಕಾಗ ಅವರಲ್ಲಿ ಸವ೯ತೋಮುಖ ಬೆಳವಣಿಗೆ ಉಂಟಾಗುತ್ತದೆ ಎಂದು ಆಕ್ಸಿಲಿಯಂ ಶಾಲೆಯ ವ್ಯವಸ್ಥಾಪಕರಾದ ಸಿಸ್ಟರ್ ಡಯಾನ ರಾಡ್ರಿಗಸ್ ಹೇಳಿದರು.
ಕುಶಾಲನಗರ ಸಮೀಪದ ಮರಡಿಯೂರಿನ ಆಕ್ಸಿಲಿಯಂ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ನಾಳಿನ ಭವಿಷ್ಯ ಎಂದು ಚಾಚಾ ನೆಹರು ಯಾವಾಗಲೂ ನಂಬಿದ್ದರು. ಭವಿಷ್ಯದ ಕುರಿತು ಉತ್ತಮ ಕನಸು ಕಾಣುವಂತಹ ದಿನವಾಗಿ ರೂಪಿಸಬೇಕು. ನಾವು ನಮ್ಮ ಮಕ್ಕಳಿಗೆ ನೀಡುವ ಪ್ರೀತಿ ಮತ್ತು ಕಾಳಜಿಯು ನಾಳೆ ನಮ್ಮ ದೇಶದ ಭವಿಷ್ಯವಾಗಿ ಅರಳುತ್ತದೆ. ನಾವು ಮಕ್ಕಳ ಕಲ್ಯಾಣದ ಬಗ್ಗೆ ಕಾಳಜಿ ವಹಿಸಿ ಬದ್ಧತೆಯಿಂದ ಚಾಚಾ ನೆಹರೂ ಅವರ ಕನಸಿನಂತೆ ಮಕ್ಕಳು ಉತ್ತಮ ಗುಣಮಟ್ಟದ ಜೀವನ ನಡೆಸಲು ಅನುವಾಗುವಂತೆ ಮಾಡಬೇಕು ಎಂದರು.
ಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸತೀಶ್ ಮಾತನಾಡಿ, ಜವಾಹರ ಲಾಲ್ ನೆಹರೂ ಅವರಿಗೆ ಮಕ್ಕಳೆಂದರೆ ತುಂಬಾ ಇಷ್ಟ. ಮಕ್ಕಳ ಮೇಲಿನ ಅವರ ಪ್ರೀತಿ ಅಪಾರವಾಗಿತ್ತು.
ಪ್ರತಿ ಮಗುವು ಮುಗ್ಧತೆ, ಕ್ಷಮಾಗುಣ, ಸ್ನೇಹ, ಕಾಳಜಿ, ಕ್ರಿಯಾಶೀಲತೆ ಮತ್ತು ಅಪರಿಮಿತ ಪ್ರೀತಿಯ ಪ್ರತೀಕವಾಗಿರುತ್ತಾರೆ. ಒಂದು ಮಗು ಕನಸು ಕಂಡರೆ ಅದರಿಂದಾಗಿ ಇಡೀ ರಾಜ್ಯವು ಪ್ರಗತಿ ಕಾಣುತ್ತದೆ ಹಾಗಾಗಿ ಶಿಕ್ಷಕರು ಹಾಗೂ ಪೋಷಕರು ಮಕ್ಕಳ ಮನಸ್ಸಿನಲ್ಲಿ ಒಳ್ಳೆಯ ಭಾವನೆಗಳನ್ನು ಬಿತ್ತಬೇಕು, ಭವಿಷ್ಯದ ಬಗ್ಗೆ ಕನಸನ್ನು ಕಾಣುವಂತೆ ಪೋತ್ಸಹಿಸಬೇಕು ಎಂದು ಕಿವಿಮಾತು ಹೇಳಿದರು.
ನಂತರ ವಿದ್ಯಾರ್ಥಿಗಳಿಂದ ನಾಟಕ,ನೃತ್ಯ ಗಾಯನ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಈ ಸಂದರ್ಭ ಆವರ್ತಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಶಿವ, ಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯ ಕೆ.ಎಸ್. ಸುರೇಶ್, ಆಕ್ಸಿಲಿಯಂ ಶಾಲೆಯ ಸಿಸ್ಟರ್ ವೆನಿಲ್ಲಾ, ಸಿಸ್ಟರ್ ಬ್ರಿಜೀಟ್, ಆಕ್ಸಿಲಿಯಂ ಶಾಲೆಯ ಮುಖ್ಯ ಶಿಕ್ಷಕಿ ಜಿನ್ಸಿ ಪೆಟ್ರಾ, ತೀರ್ಪುಗಾರರಾದ ಶೈಬಿ ಹಾಗೂ ವಿಲ್ಸಿ ಸೇರಿದಂತೆ ಮತ್ತಿತರರು ಹಾಜರಿದ್ದರು.
Back to top button
error: Content is protected !!