ಕ್ರೈಂ

ಕೋಟೆ ಮಾರಿಯಮ್ಮ ದೇವಾಲಯದಲ್ಲಿ ಕಳ್ಳತನ: ಅಸ್ಸಾಂ ರಾಜ್ಯದವರ ಬಂಧನ

ಕುಶಾಲನಗರ, ಆ 23: ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀ ಕೋಟೆ ಮಾರಿಯಮ್ಮ ದೇವಾಲಯದಲ್ಲಿ ದಿನಾಂಕ: 16-08-2024 ರ ಮಧ್ಯ ರಾತ್ರಿಯಲ್ಲಿ ಅಪರಿಚಿತ ವ್ಯಕ್ತಿಗಳು ದೇವಸ್ಥಾನದ ಮುಖ್ಯ ದ್ವಾರದ ಬೀಗವನ್ನು ಮುರಿದು ದೇವಸ್ಥಾನದಲ್ಲಿ ಇದ್ದಂತಹ 2 ಬಂಡಾರದ ಹುಂಡಿಗಳನ್ನು ಒಡೆದು ಅಂದಾಜು ರೂ. 2,50,000/-ಗಳ ನಗದನ್ನು ಹಾಗೂ ದೇವಿಯ ಮೂರ್ತಿಗೆ ಅಳವಡಿಸಿದ್ದ ಸುಮಾರು ರೂ. 1,16,000/- ಬೆಲೆಬಾಳುವ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕಳ್ಳತನವಾಗಿರುವ ಕುರಿತು ಸೋಮಯ್ಯ ಟಿ.ಪಿ ಮ್ಯಾನೇಜಿಂಗ್ ಟ್ರಸ್ಟಿ, ಕೋಟೆ ಮಾರಿಯಮ್ಮ ದೇವಾಲಯ, ಮಡಿಕೇರಿ ರವರಿಂದ ದೂರು ಸ್ವೀಕರಿಸಿದ್ದು, ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 331(4), 305 ಬಿಎನ್ಎಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ.

ಸದರಿ ಪ್ರಕರಣದ ಘಟನೆ ಸ್ಥಳಕ್ಕೆ  ಕೆ.ರಾಮರಾಜನ್, ಐಪಿಎಸ್, ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ಹಾಗೂ  ಸುಂದರ್ ರಾಜ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ &  ಮಹೇಶ್‌ಕುಮಾ‌ರ್, ಡಿಎಸ್ ಪಿ, ಮಡಿಕೇರಿ ಉಪವಿಭಾಗ ಮಡಿಕೇರಿ ಉಪವಿಭಾಗ, ಮಡಿಕೇರಿ ನಗರ ವೃತ್ತದ ಅಧಿಕಾರಿ/ಸಿಬ್ಬಂದಿಯವರುಗಳು ಭೇಟಿ ನೀಡಿ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿ ಆರೋಪಿಗಳನ್ನು ಪತ್ತೆ ಹಚ್ಚಲು  ಮಹೇಶ್ ಕುಮಾರ್, ಡಿ.ಎಸ್.ಪಿ ಮಡಿಕೇರಿ ಉಪವಿಭಾಗ, ರಾಜು ಪಿ.ಕೆ. ಸಿ.ಪಿ.ಐ. ಮಡಿಕೇರಿ ನಗರ ವೃತ್ತ,  ಲೋಕೇಶ್ ಪಿ.ಎಸ್.ಐ ಮಡಿಕೇರಿ ನಗರ ಠಾಣೆ ಹಾಗೂ ಉಪವಿಭಾಗ ಮಟ್ಟದ ಅಪರಾಧ ಪತ್ತೆ ಸಿಬ್ಬಂದಿಗಳು, ಡಿಸಿಆರ್‌ಬಿ & ತಾಂತ್ರಿಕ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿ ತನಿಖೆಯನ್ನು ಕೈಗೊಳ್ಳಲಾಗಿರುತ್ತದೆ.

ಸದರಿ ಪ್ರಕರಣದ ಆರೋಪಿಗಳನ್ನು ದಿನಾಂಕ: 22-08-2024 ರಂದು ಕಾಂತೂರು-ಮೂರ್ನಾಡು ಗ್ರಾಮದ ತೆಕ್ಕಡ ಪ್ರಸನ್ನರವರ ತೋಟದ ಲೈನು ಮನೆಯಲ್ಲಿ ವಾಸವಿರುವ ಅಲ್ತಾಬ್ ಆಲಿ, 27 ವರ್ಷ, ಮೂಲತಃ ಅಸ್ಸಾಂ ರಾಜ್ಯ ಮತ್ತು ಕೃತ್ಯ ನಡೆಸುವ ಉದ್ದೇಶದಿಂದ ಅಸ್ಸಾಂನಿಂದ ಬಂದಂತಹ ಮೀರ್ ಹುಸೇನ್ @ ನೂರ್ ಹುಸೇನ್, 36 ವರ್ಷ, ಆಸ್ಲಾಂ ರಾಜ್ಯ ಎಂಬುವವರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ ಹಾಗೂ ಕಳವು ಮಾಡಿದ್ದ 3 ಗ್ರಾಂ ಚಿನ್ನದ ಮಾಂಗಲ್ಯ, 111 ಗ್ರಾಂ ಬೆಳ್ಳಿಯ ಕಿರೀಟ, 59 ಗ್ರಾಂ ಬೆಳ್ಳಿಯ ದೃಷ್ಟಿ ಬೊಟ್ಟು ಆಭರಣಗಳನ್ನು & ರೂ. 95,501/- ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಸದರಿ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿ ಕಳವು ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿರವರುಗಳನ್ನು  ಕೆ. ರಾಮರಾಜನ್, ಐಪಿಎಸ್, ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ, ಮಡಿಕೇರಿ ರವರು ಶ್ಲಾಘಿಸಿರುತ್ತಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!