ಸುದ್ದಿಗೋಷ್ಠಿ

ಆಗಸ್ಟ್ 31 ರಂದು ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಹೋಟೆಲ್ ಅಸೋಸಿಯೇಷನ್ ಸಭೆ

ಸಂಘಟನೆ ಹಿನ್ನಲೆಯಲ್ಲಿ ವಿವಿಧ ಜಿಲ್ಲೆಗಳಿಗೆ ಪ್ರವಾಸ ಹಮ್ಮಿಕೊಂಡಿರುವ ರಾಜ್ಯ ಘಟಕದ ಪ್ರಮುಖರು

ಕುಶಾಲನಗರ, ಆ 17: ಆಗಸ್ಟ್ 31 ರಂದು ಬೆಂಗಳೂರಿನಲ್ಲಿ
ಕರ್ನಾಟಕ ರಾಜ್ಯ ಹೋಟೆಲ್ ಅಸೋಸಿಯೇಷನ್ ವತಿಯಿಂದ ರಾಜ್ಯಮಟ್ಟದ ಸಭೆ ಹಮ್ಮಿಕೊಳ್ಳಲಾಗಿದ್ದು ಹೋಟೆಲ್ ಉದ್ಯಮಿಗಳ ಸಮಸ್ಯೆಗಳನ್ನು ಚರ್ಚಿಸಿ ಅದಕ್ಕೆ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು‌ ಮಾರ್ಗಸೂಚಿ ಸಿದ್ದಪಡಿಸಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಜಿ.ಕೆ.ಶೆಟ್ಟರ್ ತಿಳಿಸಿದರು.
ಕುಶಾಲನಗರದ ಹೋಟೆಲ್ ಕನ್ನಿಕಾ ಇಂಟರ್ ನ್ಯಾಷನಲ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲರಂತೆ ಹೋಟೆಲ್ ಉದ್ದಿಮೆದಾರರು ಕೂಡ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ‌ ನಿಟ್ಟಿನಲ್ಲಿ ರಾಜ್ಯ ಘಟಕದ ಪ್ರಮುಖರು ಪ್ರತಿ ಜಿಲ್ಲೆಗಳಿಗೂ ಪ್ರವಾಸ ಮಾಡಿ ಆಯಾ ಜಿಲ್ಲೆಗಳ ‌ಸಂಘಗಳ ಪ್ರಮುಖರನ್ನು ಭೇಟಿ ಮಾಡುತ್ತಿದ್ದೇವೆ. ಆ. 31 ರಂದು ಬೆಂಗಳೂರಿನಲ್ಲಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರು ಹಾಗೂ ಉದ್ದಿಮೆದಾರರನ್ನು ಒಗ್ಗೂಡಿಸಿ ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚರ್ಚಿಸಲಿದ್ದೇವೆ.‌ ಅಲ್ಲಿ ಸಿದ್ದಪಡಿಸುವ ಮಾರ್ಗಸೂಚಿಯನ್ವಯ ಸರಕಾರದಿಂದ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಮಹಾನಗರ ಪಾಲಿಕೆ, ನಗರ ಪ್ರದೇಶಗಳಂತೆ ಗ್ರಾಮಪಂಚಾಯಿತಿ‌ ಮಟ್ಟದಲ್ಲಿ ತೆರಿಗೆ ಕ್ರಮಗಳು ಏಕರೂಪವಾಗಿಲ್ಲ. ವಿವಿಧ ರೀತಿಯ
ಕಾನೂನುಗಳು, ಪರವಾನಗಿ ತೆರಿಗೆ ಕ್ರಮಗಳನ್ನು ಸರಳೀಕರಣಗೊಳಿಸುವ ಅಗತ್ಯವಿದೆ. ಇಲಾಖೆ ಹಾಗೂ ಸರಕಾರ ಮತ್ತು ಉದ್ದಿಮೆದಾರರ ನಡುವೆ ಸೇತುವೆಯಂತಿರುವ ಸಂಘ ಉದ್ದಿಮೆದಾರರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಪ್ರತಿ ತಾಲೂಕು ಮಟ್ಟದಿಂದ ಸಭೆಗೆ ಉದ್ದಿಮೆದಾರರನ್ನು ಆಹ್ವಾನಿಸಲಾಗುತ್ತಿದೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಲ್ಲಿ ಉದ್ಯಮ‌ ಬೆಳೆವಣಿಗೆಯೊಂದಿಗೆ ಪರೋಕ್ಷವಾಗಿ ಸಮಾಜದ ಆರ್ಥಿಕ ಮಟ್ಟ, ಉದ್ಯೋಗವಕಾಶ ಹೆಚ್ಚಿಸುವಲ್ಲಿ‌ ಕೂಡ ಸಹಕಾರಿಯಾಗಲಿದೆ ಎಂದರು.
ಸಂಘದ ಕಾರ್ಯದರ್ಶಿ ರಾಘವೇಂದ್ರ ಮಾತನಾಡಿ, ರೈತರ ಬಹುಪಾಲು ಉತ್ಪನ್ನಗಳನ್ನು ಬಳಸಿಕೊಳ್ಳುವ ಮೂಲಕ ಕೃಷಿಕರಿಗೆ ಸಹಕಾರಿಯಾಗಿರುವ ಹೋಟೆಲ್ ಉದ್ಯಮ ಶತಮಾನಗಳಿಂದಲೂ ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಾ ಬರುತ್ತಿದೆ. ಜಾತಿ ಬೇಧ ನೋಡದೆ ಉದ್ಯೋಗವಕಾಶ ಒದಗಿಸುವ ಹೋಟೆಲ್ ಉದ್ಯಮಕ್ಕೆ‌ ಸೇಫ್ಟಿ, ಸೆಕ್ಯೂರಿಟಿಯೊಂದಿಗೆ ಬೆಲೆ ಸಿಗುವಂತಾಗಬೇಕಿದೆ. ಹೂಡಿದ ಬಂಡವಾಳಕ್ಕಿಂತ ಗುಣಮಟ್ಟ ಕಾಪಾಡಿಕೊಂಡು ವ್ಯಾಪಾರ‌ ನಡೆಸುವಲ್ಲಿ ಪ್ರತಿದಿನ ಉದ್ದಿಮೆದಾರರು ಆತಂಕ ಎದುರಿಸುತ್ತಿದ್ದಾರೆ. ಈ ಕ್ಷೇತ್ರಕ್ಕೆ ಉತ್ತಮ ಬೆಲೆ ಸಿಗುವಂತಾಗಬೇಕಿದೆ. ಈ ನಿಟ್ಟಿನಲ್ಲಿ ಸ್ನೇಹ ಚಿಂತನೆ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಗೋಷ್ಠಿಯಲ್ಲಿ ಸಂಘದ
ಖಜಾಂಜಿ ಗುರುರಾಜ್, ವಿಭಾಗೀಯ ಅಧ್ಯಕ್ಷ ವಿಜಯ್ ಕುಮಾರ್, ಉಪಾಧ್ಯಕ್ಷ ರವಿ ಕುಮಾರ್, ಮೈಸೂರು ಜಿಲ್ಲಾಧ್ಯಕ್ಷ ನಾರಾಯಣ ಗೌಡ, ಕೊಡಗು ಜಿಲ್ಲಾ ಅಧ್ಯಕ್ಷ ನಾಗೇಂದ್ರ ಪ್ರಸಾದ್, ಪ್ರಮುಖರಾದ ಭಾಸ್ಕರ್ ಮತ್ತಿತರರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!