ಪಿರಿಯಾಪಟ್ಟಣ, ಆ 17 : ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ನನ್ನನ್ನು ಕಾಯಬೇಡಿ ಬದಲಾಗಿ ಪಂಚಾಯಿತಿ ವತಿಯಿಂದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮುಂದಾಗಬೇಕು ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ಪಿಡಿಒಗಳಿಗೆ ಎಚ್ಚರಿಕೆ ನೀಡಿದರು.
ತಾಲೂಕಿನ ಕಿತ್ತೂರು ಕೆಂಪೇಗೌಡನ ಕೊಪ್ಪಲು, ರಾವಂದೂರು, ಭೋಗನಹಳ್ಳಿ ಹಾಗೂ ಆರ್.ಹೊಸಹಳ್ಳಿ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಅವರು, ತಾಲ್ಲೂಕಿನಲ್ಲಿ ಈ ಬಾರಿ ಹೆಚ್ಚಿನ ಮಳೆ ಸುರಿದ ಹಿನ್ನೆಲೆಯಲ್ಲಿ ಗ್ರಾಮಗಳಲ್ಲಿನ ರಸ್ತೆ, ಚರಂಡಿ, ಬೀದಿ ದೀಪಗಳ
ಸಮಸ್ಯೆಗಳು ತಲೆದೋರಿವೆ. ಹೀಗಿರುವಾಗ ಪಿಡಿಒ ಹಾಗೂ ಸದಸ್ಯರು ಗ್ರಾಮಗಳಿಗೆ ತೆರಳಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಟೊಂಕಕಟ್ಟಿ ನಿಲ್ಲಬೇಕು ಅದು ಬಿಟ್ಟು ನನ್ನನ್ನೇಕೆ ಕಾಯುತ್ತಿದ್ದೀರಿ, ನನ್ನ ವ್ಯಾಪ್ತಿಯಲ್ಲಿ ಬರುವ ಕೆಲಸಗಳನ್ನು ನಾನು ಮಾಡುತ್ತೇನೆ ಅನಗತ್ಯವಾಗಿ ಸಾರ್ವಜನಿಕರನ್ನು ಗೋಳಡಿಸಬೇಡಿ ಕೂಡಲೇ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿ ಎಂದರು.
ಈ ಸಂದರ್ಭದಲ್ಲಿ
ಭೋಗನಹಳ್ಳಿ ಹಾಗೂ ಆರ್.ಹೊಸಹಳ್ಳಿ ಗ್ರಾಮಸ್ಥರು ಮಾತನಾಡಿ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆ ಹಳ್ಳ ಹಿಡಿದಿದೆ, ಗುತ್ತಿಗೆದಾರರು ಬೇಕಾಬಿಟ್ಟಿ ಕೆಲಸ ಮಾಡುತ್ತಿದ್ದಾರೆ ಸಂಭಂದ ಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ, ಗುತ್ತಿಗೆದಾರ ಕೆಲಸ ಪೂರ್ಣಗೊಳಿಸದಿದ್ದರೂ ಅಧಿಕಾರಿಗಳು ಅಕ್ರಮವಾಗಿ ಬಿಲ್ ಮಾಡಿಕೊಡುವ ಮೂಲಕ ಸರ್ಕಾರದ ಅನುದಾನವನ್ನು ನುಂಗಿ ನೀರು ಕುಡಿಯುತ್ತಿದ್ದಾರೆ ನೀವೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಬೇಕು ಎಂದು ಸಚಿವರಲ್ಲಿ ಮೊರೆ ಇಟ್ಟರು. ಆಗ ಸಚಿವರು ಮಾತನಾಡಿ ಪೂರ್ಣಗೊಳ್ಳದ ಕಾಮಗಾರಿಗಳಿಗೆ ಬಿಲ್ ಮಾಡಿಕೊಟ್ಟರೆ ತಲೆದಂಡ ತೆತ್ತು ಬೇಕಾಗುತ್ತದೆ ಕೂಡಲೇ ಗ್ರಾಮದಲ್ಲಿ ಜೆಜೆಎಂ ಕೆಲಸ ಪೂರ್ಣಗೊಳಿಸಬೇಕು ಎಂದು ಎಚ್ಚರಿಕೆ ನೀಡಿದ ಅವರು, ಈಗಾಗಲೇ ಸರ್ಕಾರದ ವತಿಯಿಂದ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ತೆ, ಚರಂಡಿ, ಕುಡಿಯುವ ನೀರಿನ ಪೈಪ್ ಲೈನ್, ವಿದ್ಯುತ್ ಕಂಬ, ಉತ್ತಮ ದೀಪ ಅಳವಡಿಕೆಗೆ ಸಂಬಂಧಿಸಿದಂತೆ ಅನುದಾನ ಕಾಮಗಾರಿಗಳು ಪ್ರಗತಿಯಲ್ಲಿವೆ ತಾಲೂಕಿನಲ್ಲಿ ಕುಸುಮ್ ಸೋಲಾರ್ ಯೋಜನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಿ ಕೆಲಸ ಆರಂಭಿಸಲು ಸಮಯ ನಿಗದಿಪಡಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಜಮೀನಿಗೆ ತೆರಳುವ ರಸ್ತೆ, ವಿದ್ಯುತ್ ಸಮಸ್ಯೆ, ಶೌಚಾಲಯ ನಿರ್ಮಾಣ, ವಿವಿಧ ಇಲಾಖೆಗಳ ಯೋಜನೆಗಳಿಗೆ ಸಂಬಂಧಿಸಿದಂತೆ ಅಹವಾಲು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಇಒ ಸುನೀಲ್ ಕುಮಾರ್, ವಿವಿಧ ಇಲಾಖೆಗಳ ಅಧಿಕಾರಿಗಳಾದ ಪ್ರಸಾದ್, ಸೋಮಯ್ಯ, ಪುಟ್ಟಸ್ವಾಮಿ ಶೆಟ್ಟಿ, ನವೀನ್ ಕುಮಾರ್, ಮಲ್ಲಿಕಾರ್ಜುನ್ , ಕೃಷ್ಣ ಮೂರ್ತಿ, ಗ್ರಾಪಂ ಪಿಡಿಓ ಮಲ್ಲೇಶ್ , ನಾಗಶೆಟ್ಟಿ , ಕಾರ್ಯದರ್ಶಿ ಬಸವರಾಜು, ಅಧ್ಯಕ್ಷೆ ಸುಜಾತ ವಾಸು, ಮಾಜಿ ಅಧ್ಯಕ್ಷರಾದ ಆರ್.ಎಸ್. ವಿಜಯಕುಮಾರ್, ಸ್ವಾಮಿಗೌಡ, ಸದಸ್ಯರಾದ ಶಶಿಧರ್, ಮುಖಂಡರಾದ ಹೊಲದಪ್ಪ, ಡಿ.ಟಿ.ಸ್ವಾಮಿ, ರಹಮತ್ ಜಾನ್ ಬಾಬು, ನಂದೀಶ್, ಜೈಮರಿಗೌಡ, ಕಲ್ಯಾಣಯ್ಯ, ಸಂಪತ್ ಕುಮಾರ್, ಆರ್.ಹೊಸಹಳ್ಳಿ ಜಯಣ್ಣ, ವಿಜಯ್ ಕುಮಾರ್, ಮಂಜುನಾಥ್ ಸಾಗರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
Back to top button
error: Content is protected !!