ಕುಶಾಲನಗರ, ಮೇ 31; ಬೇಸಿಗೆ ರಜೆ ಮುಗಿಸಿದ ಶಾಲಾ ವಿದ್ಯಾರ್ಥಿಗಳು ಇಂದು ಶಾಲೆಗೆ ಹಾಜರಾದರು. ಶಾಲಾ ಮಕ್ಕಳನ್ನು ಸಂಭ್ರಮದಿಂದ ಶಿಕ್ಷಕರು ಸ್ವಾಗತಿಸಿದರು. ರಜೆ ಬಳಿಕ ಆರಂಭಗೊಂಡ 2024-25 ರ ಶೈಕ್ಷಣಿಕ ವರ್ಷದ ಮೊದಲ ದಿನ ಶಾಲೆಗೆ ಹಾಜರಾದ ವಿದ್ಯಾರ್ಥಿಗಳ ಮೊಗದಲ್ಲಿ ಮಂದಹಾಸ, ಶಾಲೆಗಳ ಆವರಣದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.
ಫಾತೀಮಾ ಕಾನ್ವೆಂಟ್ ಶಾಲೆ ಹಾಗೂ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಸೇರಿದಂತೆ ನಗರದ ಎಲ್ಲಾ ಶಾಲೆಗಳಲ್ಲೂ ಮಕ್ಕಳನ್ನು ಆತ್ಮೀಯವಾಗಿ ಶಾಲೆಗೆ ಬರಮಾಡಿಕೊಳ್ಳಲಾಯಿತು.
ಮೊದಲ ದಿನದ ಸಂಭ್ರಮದಲ್ಲಿದ್ದ ವಿದ್ಯಾರ್ಥಿಗಳು ತಮ್ಮ ಸ್ನೇಹಿತರೊಂದಿಗೆ ಸಂತೋಷದಿಂದ ಬೆರೆತರು. ಮೊದಲ ದಿನ ಉತ್ತಮ ಹಾಜರಿ ಕಂಡು ಬರದಿದ್ದರೂ ವಿದ್ಯಾರ್ಥಿಗಳು ಸಂತೋಷದಿಂದಲೇ ಪಾಠ ಪ್ರವಚನಗಳಲ್ಲಿ ತೊಡಗಿಸಿಕೊಂಡರು.
ಶಿಕ್ಷಕ ಸಿಬ್ಬಂದಿಯಲ್ಲೂ ಸಂಭ್ರಮ ಮನೆ ಮಾಡಿತ್ತು. ಮುಂಜಾನೆಯೇ ಶಾಲಾ ಆವರಣಕ್ಕೆ ತೆರಳಿ ಸ್ವಚ್ಛಗೊಳಿಸಿ, ರಂಗೋಲಿ ಬಿಡಿಸಿ, ತಳಿರು-ತೋರಣಗಳಿಂದ ಅಲಂಕರಿಸಿ, ವಿದ್ಯಾರ್ಥಿಗಳನ್ನು ಸ್ವಾಗತಿಸಿ, ಸಿಹಿ ತಿನ್ನಿಸಿದ ದೃಶ್ಯಾವಳಿ ಗೋಚರಿಸಿತು.
ಫಾತೀಮ ಕಾನ್ವೆಂಟ್ ಶಾಲೆಯ ವ್ಯವಸ್ಥಾಪಕರಾದ ಸಿಸ್ಟರ್ ಸ್ಪಂದನಾ ಮಾತನಾಡಿ, ಶಾಲೆಯು ಕೇವಲ ಪಠ್ಯ ಶಿಕ್ಷಣ ಮಾತ್ರವಲ್ಲದೆ ಜೀವನ ಮೌಲ್ಯಾಧಾರಿತ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುತ್ತದೆ. ಇದರಿಂದಾಗಿ ಉತ್ತಮ ನಾಗರಿಕ ಸಮಾಜ ನಿರ್ಮಿಸಲು ಸಾಧ್ಯ. ಯಾರೂ ವಿದ್ಯಾರ್ಥಿ ಜೀವನದಲ್ಲಿ ದೊರೆತ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುತ್ತಾರೋ ಅವರು ಖಂಡಿತವಾಗಿ ಯಶಸ್ಸು ಸಾಧಿಸುತ್ತಾರೆ ಎಂದರು.
ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರಾಣಿ ಮಾತನಾಡಿ, ಇಂದು ಶಾಲೆ ಶುಭಾರಂಭಗೊಂಡಿದ್ದು. ಮೊದಲ ದಿನವಾದ ಇಂದು ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿದ್ದು, ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸ ಮಾಡಲಿ. ನಾವು ಅವರೊಂದಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತೇವೆ. ಮಧ್ಯಾಹ್ನದ ಬಿಸಿಯೂಟಕ್ಕೆ ಸಿಹಿ ನೀಡಲಾಗುತ್ತಿದೆ.
ಶಾಲೆಗೆ ಬರುವ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಲಾಗುತ್ತದೆ. ಬಾರದ ಮಕ್ಕಳನ್ನು ಅವರ ಮನೆಗಳಿಗೆ ತೆರಳಿ ಕರೆತರಲು ಶಿಕ್ಷಕರ ತಂಡಗಳು ಸಜ್ಜಾಗಿವೆ ಎಂದು ಹೇಳಿದರು.
ಇನ್ನು ಶಾಲಾ ಪ್ರಾರಂಭೋತ್ಸವಕ್ಕೆ ಮಕ್ಕಳೂ ಕೂಡ ಸಂತಸ ವ್ಯಕ್ತಪಡಿಸಿದರು.
Back to top button
error: Content is protected !!