ಕ್ರೈಂ
ಶಿರಂಗಾಲ : ಅಕ್ರಮ ಬೀಟೆ ನಾಟಾ ಸಾಗಾಟ : ಮಾಲು ವಶ,ಆರೋಪಿಗಳು ಪರಾರಿ
ಶಿರಂಗಾಲ ಅರಣ್ಯ ಚೆಕ್ ಪೋಸ್ಟ್ ಬಳಿ ಅರಣ್ಯ ಸಿಬ್ಬಂದಿಗಳು ಅಕ್ರಮವಾಗಿ ಮಾರಾಟ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿ ಎರಡು ಲಕ್ಷ ಮೌಲ್ಯದ ಮಾಲು ಹಾಗೂ ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕರಿಕೆಯಿಂದ ಟಾಟಾ ಏಸು ವಾಹನ (ಕೆಎಲ್ 79, ಎ 2834) ದಲ್ಲಿ ಎಂಟು ಬೀಟೆ ನಾಟಾಗಳನ್ನು ಹಾಕಿಕೊಂಡು ಅದರ ಮೇಲೆ ಶುಂಠಿಯನ್ನು ತುಂಬಿಸಿಕೊಂಡು ಹಾಸನ ಜಿಲ್ಲೆಯ ಕಡೆಗೆ ಹೋಗುತ್ತಿದ್ದ ವೇಳೆಯಲ್ಲಿ ಕೊಡಗಿನ ಗಡಿ ಶಿರಂಗಾಲ ಅರಣ್ಯ ತಪಾಸಣೆ ಗೇಟ್ ನಲ್ಲಿ ವಾಹನ ತಡೆದು ಸಿಬ್ಬಂದಿಗಳು ಪರಿಶೀಲನೆ ನಡೆಸಿದರು.
ಕೊಳೆತ ಶುಂಠಿಯನ್ನು ನೋಡಿ ಅನುಮಾನಗೊಂಡ ಅರಣ್ಯ ಸಿಬ್ಬಂದಿಗಳು ವಾಹನವನ್ನು ಹತ್ತಿ ಶುಂಠಿ ಚೀಲಗಳನ್ನು ತೆರವುಗೊಳಿಸಿದಾಗ ಬೀಟೆ ನಾಟಾ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಸಂದರ್ಭ ವಾಹನ ಚಾಲಕ ಕರಿಕೆಯ ಉಳ್ಳುಕೊಚ್ಚೆ ಕೆ.ಉಮ್ಮರ್ ಅವರ ಮಗ ಕೆ.ಯು.ಆಸ್ಕರ್ ಹಾಗೂ ಕ್ಲಿನರ್ ಕರಿಕೆಯ ಹರೀಶ್ ವಾಹನವನ್ನು ಬಿಟ್ಟು ಅಲ್ಲಿಂದ ಓಡಿ ಪರಾರಿಯಾಗಿದ್ದಾರೆ.
ವಲಯ ಅರಣ್ಯಾಧಿಕಾರಿ ಚೇತನ್ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಎಂ.ಕೆ.ಭರತ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಎರಡು ಲಕ್ಷ ಮೌಲ್ಯ ಬೀಟೆ ನಾಟಾ ಹಾಗೂ 14 ಲಕ್ಷ ಮೌಲ್ಯದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.ಈ ಕುರಿತು ಆಸ್ಕರ್,ಹರೀಶ್ ವಿರುದ್ಧ ಮೊಕದ್ದಮೆ ದಾಖಲು ಮಾಡಿಕೊಂಡು ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಡಿಆರ್ಎಫ್ ಸುರೇಶ್, ಅರಣ್ಯ ಸಿಬ್ಬಂದಿಗಳಾದ ಬೀಮಣ್ಣಗೌಡ,ಲೋಕೇಶ್ ಆರ್ಆರ್ಟಿ ವರುಣ್ ಪಾಲ್ಗೊಂಡಿದ್ದರು.