ಕಾರ್ಯಕ್ರಮ

ಕುಶಾಲನಗರದ ವಿವಿಧೋದ್ದೇಶ ಮಹಿಳಾ ಸಹಕಾರ ಸಂಘದಿಂದ ಮಹಿಳಾ ದಿನಾಚರಣೆ

ಕುಶಾಲನಗರ ಮಾ 11 : ಹೆಣ್ಣು ಸಮಾಜದ ಕಣ್ಣು, ಬದುಕಿನ ಎಲ್ಲಾ ಸವಾಲಗಳನ್ನು ಎದುರಿಸಿ ನಿಲ್ಲುವ ಗಟ್ಟಿಗಿತ್ತಿ ಆಕೆ. ಎಲ್ಲಾ ಕಷ್ಟದ ದಿನಗಳನ್ನು ಎದುರಿಸಿ ಇಂದು ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಛಾಪು ಮೂಡಿಸಿದ ಆಕೆಯ ಸ್ಥೈರ್ಯದ ವಿವರಣೆಗೆ ಬೇರೆ ಪದಗಳು ಬೇಕಿಲ್ಲ. ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಯೋಗೇಂದ್ರ ನಾಯಕ್ ಹೇಳಿದರು.
ನಂ.470 ನೇ ವಿವಿಧೋದ್ದೇಶ ಮಹಿಳಾ ಸಂಘದ ಆಶ್ರಯದಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಎಂದರೆ ಸ್ವಾಭಿಮಾನದ ಭಾವನೆ ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ಗುರಿ ಸಾಧಿಸುವುದಾಗಿದೆ. ಅದಲ್ಲದೆ, ಮಹಿಳೆಯರು ಜೀವನದ ಎಲ್ಲಾ ಕ್ಷೇತ್ರಗಳಲ್ಲಿನ ಎಲ್ಲಾ ಅಡೆತಡೆಗಳನ್ನು ದಾಟಿ ಅಗಾಧವಾದ ಸುಧಾರಣೆಯನ್ನು ಮಾಡಲು ಧೈರ್ಯವನ್ನು ಸಂಗ್ರಹಿಸಬೇಕು ಎಂದರು.
ಕುಶಾಲನಗರದ ಸರ್ಕಾರಿ ಸಮುದಾಯ ಆರೋಗ್ಯ ಕೆಂದ್ರದ ವೈದ್ಯ ಶಿವಕುಮಾರ್ ಮಾತನಾಡಿ, ಇಂದು ಮಹಿಳೆಯರು ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಸಂಘಟಿತರಾಗಿ ತನ್ನನ್ನು ತಾನು ತೊಡಗಿಸಿಕೊಂಡು ಸಾಧನೆಗಳ ಮೂಲಕ ಉತ್ತಮ ಸಮಾಜವನ್ನು ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ತನ್ನ ಜೀವದಿಂದ ಮತ್ತೊಂದು ಜೀವವನ್ನು ಕೊಡುವ ಮೂಲಕ ಅದರ ಆರೈಕೆ ಮತ್ತು ಬೆಳವಣಿಗೆಯಲ್ಲಿಯೂ ಕೂಡ ತನ್ನ ಸಂಪೂರ್ಣ ಶಕ್ತಿಯನ್ನು ನೀಡುವ ಕಾರ್ಯವನ್ನು ಒಂದು ಹೆಣ್ಣಿಗೆ ಮಾತ್ರ ಕೊಡಲು ಸಾಧ್ಯ ಎಂದರು.
ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಪುಷ್ಪ ಮಾತನಾಡಿ, ಮಹಿಳೆಯರು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಆತ್ಮವಿಶ್ವಾಸ ಮತ್ತು ಸ್ವಾಭಿಮಾನದಿಂದ ತಮ್ಮ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ. ಮಹಿಳೆ ಮಗಳಾಗಿ, ಪತ್ನಿಯಾಗಿ, ತಾಯಿಯಾಗಿ, ಸ್ನೇಹಿತೆಯಾಗಿ ಎಲ್ಲಾ ಪಾತ್ರಗಳನ್ನು ತುಂಬುವ ಆಕೆಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದು ದಿನ ಮೀಸಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವಿಧೋದ್ದೇಶ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಸೆಲಿನ ಡಿ ಕುನ್ನ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಂತರ ಮಕ್ಕಳಿಂದ ಛದ್ಮವೇಶ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು.
ಇದೇ ಸಂದರ್ಭ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ವಿವಿಧೋದ್ದೇಶ ಮಹಿಳಾ ಸಹಕಾರ ಸಂಘದ ಉಪಾಧ್ಯಕ್ಷೆ ಎನ್.ಎ.ಸುಶೀಲ, ನಿರ್ದೇಶಕರಾದ ಕಾವೇರಿ ಕಾಳಪ್ಪ, ನಳಿನಿ ನಂಜಪ್ಪ, ಹೆಚ್.ಎಂ.ಜಯಮ್ಮ, ಟಿ.ಪಿ.ಜಯ, ಹೆಚ್.ಡಿ.ಕಮಲ, ಟಿ.ಕೆ.ಅಜಿತ ಕುಮಾರಿ, ನಿರ್ಮಲ ಶಿವದಾಸ್, ಜಿ.ಟಿ.ಲಲಿತ, ಗೀತಾ, ಎಂ.ಕೆ.ಜರೀನಾ, ಪಿ.ಚೈತ್ರಾ, ಕಾರ್ಯದರ್ಶಿ ಬಿ.ಆರ್. ಶೈಲಾ ಕುಮಾರಿ, ಹೊಲಿಗೆ ಶಿಕ್ಷಕಿ ಶೋಭಾ, ಶಿಕ್ಷಕಿಯರಾದ ಎಂ.ಆರ್.ಸುಮ, ಎಂ.ಡಿ.ತನುಜಾ ಮತ್ತಿತರರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!