ಶಿಕ್ಷಣ

ವಾಲ್ನೂರು-ತ್ಯಾಗತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲೀಷ್ ಫೆಸ್ಟ್

ಕುಶಾಲನಗರ, ಫೆ 20: ಕುಶಾಲನಗರ ತಾಲೂಕಿನ ವಾಲ್ನೂರು-ತ್ಯಾಗತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಫೆಸ್ಟ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸರಕಾರಿ ಶಾಲಾ ವಿದ್ಯಾರ್ಥಿಗಳು ತಮ್ಮ ಆಂಗ್ಲಭಾಷಾ ಜ್ಞಾನವನ್ನು ನಿರಾತಂಕವಾಗಿ‌ ಪೋಷಕರು ಹಾಗೂ ಶಿಕ್ಷಕರ ಮುಂದೆ ಪ್ರದರ್ಶಿಸಿ ತಾವು ಕೂಡ ಆಂಗ್ಲ‌ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಕಡಿಮೆಯಿಲ್ಲ ಎಂದು ಸಾಬೀತುಪಡಿಸಿ ಕಾರ್ಯಕ್ರಮದಲ್ಲಿ ಸಂಭ್ರಮಿಸಿದರು.

ಮಕ್ಕಳಲ್ಲಿ ಅಡಗಿರುವ ವಿಶೇಷ ಪ್ರತಿಭೆಗಳನ್ನು ಅನಾವರಣಗೊಳಿಸುವ ವಿವಿಧ ಕಾರ್ಯಚಟುವಟಿಕೆಗಳಿಗೆ ಭಿನ್ನವಾಗಿ ಇಂತಹ ಒಂದು ಹೊಸ ಪ್ರಯತ್ನಕ್ಕೆ ಶಾಲಾ ಶಿಕ್ಷಕ‌ ವೃಂದ ವೇದಿಕೆ‌ ಕಲ್ಪಿಸಿ ವಿದ್ಯಾರ್ಥಿಗಳಲ್ಲಿನ ಆಂಗ್ಲಭಾಷೆಯ ಬಗ್ಗೆ ಆತಂಕ ದೂರಮಾಡಿ ಕಲಿಕೆಗೆ ಪ್ರೋತ್ಸಾಹ ನೀಡುವ ಪ್ರಯತ್ನ ಮಾಡಲಾಯಿತು.

ವಿದ್ಯಾರ್ಥಿಗಳಿಂದ ಆಂಗ್ಲ ಭಾಷಾ ಪ್ರದರ್ಶನ ನಡೆಯಿತು. ಆಂಗ್ಲ‌ಭಾಷೆಯ ವ್ಯಾಕರಣ ಮತ್ತಿತರ ವಿಷಯಗಳ‌ ಬಗ್ಗೆ ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆ ಮೂಲಕ ಆಂಗ್ಲಭಾಷೆಯಲ್ಲಿ ನೀಡಿದ ವಿವರಣೆ ಪೋಷಕರು, ಶಿಕ್ಷಕರು ಹಾಗೂ ನೆರೆದಿದ್ದವರನ್ನು ಚಕಿತಗೊಳಿಸಿತು.

ಈ ವಿನೂತನ ಕಾರ್ಯಕ್ರಮವನ್ನು ಗ್ರಾಮದ ಯೂನಿಯನ್ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಸುಹಾಸ್ ಸೆಲ್ಪಿ ಗ್ಯಾಲೆರಿ ಉದ್ಘಾಟಿಸುವ ಮೂಲಕ ಚಾಲನೆ‌ ನೀಡಿದರು.

ಈ ಸಂದರ್ಭ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಬಿ.ಎನ್.ವಸಂತ್ ಕುಮಾರ್, ಆಂಗ್ಲ‌ ಮಾಧ್ಯಮ ಶಾಲೆಗಳಂತೆ ಸರಕಾರಿ ಶಾಲೆಗಳಲ್ಲಿ ಕೂಡ ಇಂಗ್ಲೀಷ್ ಕಲಿಕೆಗೆ ಪ್ರಾಧ್ಯಾನತೆ ಇದೆ ಎಂಬುದಕ್ಕೆ ಇಂದಿನ ಈ‌ ಕಾರ್ಯಕ್ರಮವೇ ನಿದರ್ಶನ. ಸರಕಾರಿ ಶಾಲಾ ವಿದ್ಯಾರ್ಥಿಗಳು ಆಂಗ್ಲ ಭಾಷೆಯ ಉಚ್ಚರಣೆ, ಗ್ರಾಮರ್ ಗಳ ಬಗ್ಗೆ ಜ್ಞಾನವನ್ನು ಮುಕ್ತವಾಗಿ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ್ದಾರೆ. ಇಂತಹ ಕಾರ್ಯಕ್ರಮಗಳ‌ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿಸುವ ಪ್ರಯತ್ನ‌ ಮಾಡಲಾಗುತ್ತಿದೆ. ಮುಂದಿನ ಶೈಕ್ಷಣಿಕ ಸಾಲಿನಿಂದ ಶಾಲೆಯಲ್ಲಿ 1ನೇ ತರಗತಿ ಆಂಗ್ಲ ಮಾಧ್ಯಮ ಆರಂಭಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದ್ದೇವೆ ಎಂದರು.

ಕಾರ್ಯಕ್ರಮದ ಸಂಯೋಜಕಿ ಶಾಲೆಯ ಆಂಗ್ಲ‌ಭಾಷಾ ಶಿಕ್ಷಕಿ ಮುಬೀನ ಕೌಸರ್ ಕಾರ್ಯಕ್ರಮದ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿ ವಿವರಣೆ ನೀಡಿದರು.

ಈ ಸಂದರ್ಭ ಶಾಲಾಭಿವೃದ್ದಿ‌ ಸಮಿತಿ ಉಪಾಧ್ಯಕ್ಷೆ ಅಫ್ಸತ್, ಸಿಆರ್ಪಿಗಳಾದ ವೈಶಾಲಿ, ಆಶಾ, ಶೃತಿಶ್ರೀ, ಸೀಮಾ, ರಂಗಸಮುದ್ರ ಶಾಲಾ ಮುಖ್ಯ ಶಿಕ್ಷಕಿ ಲೀಲಾವತಿ, ಸಹ ಶಿಕ್ಷಕಿ ಸುನಿತಾ, ಕುಶಾಲನಗರ ಉರ್ದು ಶಾಲಾ ಶಿಕ್ಷಕ ಜಂಶೀದ್ ಅಹಮ್ಮದ್ ಖಾನ್ ಸೇರಿದಂತೆ ಶಾಲಾ ಶಿಕ್ಷಕ ವೃಂದ ಹಾಗೂ ಪೋಷಕರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!