ಪ್ರಕಟಣೆ

ಪರೀಕ್ಷೆ : ಭಯ ಬಿಡಿ – ಹೆಮ್ಮೆಪಡಿ

ಹತ್ತು ಹಾಗೂ ಹನ್ನೆರಡನೇ ತರಗತಿಯಲ್ಲಿ ಶೇ 100 ಫಲಿತಾಂಶ ಗಳಿಸಿ ವೈದ್ಯಕೀಯ ಶಿಕ್ಷಣ ಪೂರೈಸಿದ ವಿದ್ಯಾರ್ಥಿನಿಯ ಕಿವಿಮಾತು

ಕುಶಾಲನಗರ, ಫೆ 19: ವಿದ್ಯಾರ್ಥಿಗಳ ಪಾಲಿಗೆ ವಾರ್ಷಿಕ ಪರೀಕ್ಷೆ ಎಂಬುದು ಹೆಮ್ಮೆಯಿಂದ ತಮ್ಮ ಪ್ರತಿಭೆಗಳ ಪ್ರದರ್ಶನ ಮಾಡಬೇಕಾದ ವೇದಿಕೆಯಾಗಬೇಕೇ ಹೊರತು ಭಯ ಪಟ್ಟು ವರ್ಷವಿಡೀ ಕಲಿತದ್ದನ್ನು ಮರೆಯುವಂತಾಗಬಾರದು.
ಈಗಾಗಲೇ ವಿದ್ಯಾರ್ಥಿಗಳ ಪಾಲಿನ ಕೆಲವು ವಾರ್ಷಿಕ ಪರೀಕ್ಷೆಗಳು ಮುಕ್ತಾಯದಲ್ಲಿವೆ.ಇನ್ನು ಹತ್ತನೇ ತರಗತಿ ಪರೀಕ್ಷೆಗಳು ಆರಂಭವಾಗಲಿವೆ. ಆದರೆ, ವಿದ್ಯಾರ್ಥಿಗಳ ಪಾಲಿಗೆ ಪರೀಕ್ಷೆ ಎಂಬುದು ವರ್ಷಗಟ್ಟಲೇ ಕಲಿತ ವಿದ್ಯೆಯನ್ನು ಓರೆಗೆ ಹಚ್ಚುವ ಕೆಲಸವಾಗಬೇಕೇ ಹೊರತು ಪರೀಕ್ಷೆಗೆ ಹೆದರಿ ಬೆಚ್ಚಿಬೀಳುವಂತಹದ್ದಲ್ಲ.
ಕೆಲವು ಪೋಷಕರು ಹಾಗೂ ಪರೀಕ್ಷಾರ್ಥಿಗಳ ನೆರೆ ಹೊರೆಯವರು, ಅಯ್ಯೋ ಪರೀಕ್ಷೆ ಬಂತು. ರೆಡಿಯಾಗಿದ್ದೀಯಾ ಇಲ್ಲವಾ…? ಅಯ್ಯೋ ಊಟ, ತಿಂಡಿ, ನಿದ್ರೆ ಕಡಿಮೆ ಮಾಡಿ ಹೆಚ್ಚು ಹೊತ್ತು ಪುಸ್ತಕ ಹಿಡಿದು ಓದು. ಬೇರೆ ಯಾರ ಜೊತೆನೂ ಮಾತನಾಡೋಕೆ ಹೋಗಬೇಡ. ಟಿವಿ ನೋಡಲೇ ಬೇಡ. ಮೊಬೈಲ್ ಮುಟ್ಟಲೇ ಬೇಡ ಎಂದೆಲ್ಲಾ ಅರ್ಧ ಹೆದರಿಸಿಯೇ ಆ ಮಕ್ಕಳ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಕೆಲಸ ಮಾಡಿರುತ್ತಾರೆ.
ವರ್ಷ ಇಡೀ ಕಲಿತ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಮೀಪಿಸುತ್ತಿದ್ದಂತೆ ಭಯ, ಸಂಕೋಚ, ಖಿನ್ನತೆ ಯಾವುದೂ ಕೂಡದು.
ಎಲ್ಲವನ್ನು ಸಮಚಿತ್ತದಿಂದಲೇ ಸ್ವೀಕರಿಸಿ ಎದುರಿಸಬೇಕು. ವಿದ್ಯಾರ್ಥಿಗಳ ಪಾಲಿಗೆ ಪುಸ್ತಕದ ಓದಿನ ಜೊತೆಗೆ ಲೋಕ ಜ್ಞಾನವೂ ಮುಖ್ಯ.
ಪೌಷ್ಠಿಕ ಆಹಾರ ಸೇವನೆ, ಹಿತ ಮಿತವಾದ ನಿದ್ರೆ ಎಲ್ಲವೂ ಮುಖ್ಯವೇ.
ನನ್ನ ಓದು ಹಾಗೂ ನನ್ನ ಪರೀಕ್ಷೆ ನನ್ನ ಮುಂದಿನ ಭವಿಷ್ಯಕ್ಕೆ ಮೈಲಿಗಲ್ಲು ಎಂದು ತಿಳಿಯಬೇಕೇ ವಿನಃ, ಮನಸಿನಲ್ಲಿ ವ್ಯಕ್ತವಾಗುವ ವ್ಯತಿರಿಕ್ತವಾದ ಭಾವನೆಗಳನ್ನು ದೂರಮಾಡಿಕೊಳ್ಳಬೇಕಿದೆ ವಿದ್ಯಾರ್ಥಿಗಳು.
ಸ್ವತಃ ನಾನು ಕುಶಾಲನಗರದ ಫಾತಿಮಾ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದಾಗ ಪರೀಕ್ಷೆ ಸಮೀಪಿಸಿದಾಗ ಮತ್ತು ಪರೀಕ್ಷೆಯ ದಿನಗಳಲ್ಲಿ ಆರಾಮವಾಗಿ ಟಿವಿಯಲ್ಲಿ ಬರುವ ನ್ಯೂಸ್ ಗಳನ್ನು ಆಲಿಸಿಯೇ ಓದುತ್ತಿದ್ದೆ. ಓದಿನಲ್ಲಿ ಏಕಾಗ್ರತೆ ಹೊಂದಿದ್ದೆ. ಹಾಗಾಗಿ ಹತ್ತನೇ ತರಗತಿ ಹಾಗೂ ದ್ವಿತೀಯಾ ಪಿಯುಸಿಯಲ್ಲಿ ಶೇ. 100 ಫಲಿತಾಂಶ ಬಂತು.
ಹಾಗಾಗಿ ಯಾರಿಗೂ ಪರೀಕ್ಷೆಯ ಭಯ ಬೇಡ.
ಪರೀಕ್ಷೆಯ ಸಂದರ್ಭದಲ್ಲಿ ಆಯಾಯ ಶಾಲೆಗಳ ಶಿಕ್ಷಕರು ಹಾಗೂ ಮಕ್ಕಳ ಪಾಲಕರು ಪರೀಕ್ಷಾರ್ಥಿಗಳ ಮನಸ್ಥಿತಿಯನ್ನು ಅರಿತು ಅವರಿಗೆ ನೈತಿಕ ಸ್ಥೈರ್ಯ ತುಂಬಬೇಕಿದೆ.
ಡಾ. ದೀಪಿಕಾ ಮೂರ್ತಿ ಎಂಬಿಬಿಎಸ್
ಕುಶಾಲನಗರ

Related Articles

Leave a Reply

Your email address will not be published. Required fields are marked *

Back to top button
error: Content is protected !!