ಪ್ರತಿಭಟನೆ

ಹಕ್ಕುಪತ್ರ ಒದಗಿಸಲು ಆಗ್ರಹಿಸಿ ಸುಂದರನಗರ ನಿವಾಸಿಗಳಿಂದ ಪ್ರತಿಭಟನೆ

ಕುಶಾಲನಗರ, ಫೆ 10: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಸುಂದರನಗರ ಕೋರೆ ರಸ್ತೆ ಭಾಗದಲ್ಲಿ ನೆಲೆಕಂಡಿರುವ ಹಲವು ಕುಟುಂಬಗಳು ಹಕ್ಕುಪತ್ರದಿಂದ ವಂಚಿತರಾಗಿರುವ ಹಿನ್ನೆಲೆಯಲ್ಲಿ ಸೌಲಭ್ಯ ವಂಚಿತ ನಿವಾಸಿಗಳು ಹಕ್ಕುಪತ್ರಕ್ಕೆ ಒತ್ತಾಯಿಸಿ ಕುಶಾಲನಗರದಲ್ಲಿ ಪ್ರತಿಭಟನೆ ನಡೆಸಿದರು.

ದಲಿತ ಸಂಘರ್ಷ ಸಮಿತಿ ಭೀಮಘರ್ಜನೆ ಜಿಲ್ಲಾಧ್ಯಕ್ಷ ಎಲ್.ಎಂ.ನಾಗರಾಜು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಹಕ್ಕುಪತ್ರ ವಂಚಿತರು ಪ್ರವಾಸಿ ಮಂದಿರ ಬಳಿಯಿಂದ ಮೆರವಣಿಗೆಯಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತಕ್ಕೆ ಧಾವಿಸಿ ಘೋಷಣೆಗಳನ್ನು ಕೂಗಿದರು. ಬಳಿಕ ಅಲ್ಲಿಂದ ತಹಸೀಲ್ದಾರ್ ಕಛೇರಿಗೆ ತೆರಳಿ ಕಛೇರಿ ಮುಂಭಾಗ ಕೆಲಕಾಲ ಪ್ರತಿಭಟನೆ ನಡೆಸಿದರು. ಕೂಡಲೆ ಹಕ್ಕುಪತ್ರ ವಿತರಣೆಗೆ ಕ್ರಮಕೈಗೊಳ್ಳುವಂತೆ ವಿನಂತಿಸಿ ತಹಸೀಲ್ದಾರ್ ಕಿರಣ್ ಜಿ ಗೌರಯ್ಯ ಅವರ ಮೂಲಕ ಜಿಲ್ಲಾಧಿಕಾರಿ ಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ತಹಸೀಲ್ದಾರ್ ಗೆ ಮನವಿ ಸಲ್ಲಿಸಲಾಯಿತು

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಎಲ್.ಎಂ.ನಾಗರಾಜು, ಸುಂದರನಗರದ 31/1 ರಲ್ಲಿ ಇತ್ತೀಚೆಗೆ ನೆಲೆ‌ಕಂಡ ಕೆಲವರಿಗೆ ಹಕ್ಕುಪತ್ರ ದೊರೆತಿದೆ. ಆದರೆ ಹಲವು ದಶಕಗಳಿಂದ ವಾಸಿಸುತ್ತಿರುವ 50 ಕ್ಕೂ ಅಧಿಕ ಕುಟುಂಬಗಳು ಹಕ್ಕುಪತ್ರದಿಂದ ವಂಚಿತರಾಗಿದ್ದಾರೆ. ಈ ನಡುವೆ ಅರಣ್ಯ ಇಲಾಖೆಯಿಂದ ಕೂಡ ತೊಂದರೆ ಎದುರಾಗುತ್ತಿದೆ. ಕೂಡಲೆ ಫಲಾನುಭವಿಗಳಿಗೆ ಹಕ್ಕುಪತ್ರ ಒದಗಿಸಬೇಕಿದೆ. ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿ ಕಛೇರಿ ಮುಂಭಾಗ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ನಿವಾಸಿಗಳಾದ ಮಂಜುಳಾ‌ ಮತ್ತು ರಶಿಕಲಾ ಮಾತನಾಡಿ ತಮ್ಮ ಸಮಸ್ಯೆ ತೋಡಿಕೊಂಡರು.
ನಿವೇಶನ‌ ಹೊಂದಿರುವವರು ಮನೆ ನಿರ್ಮಿಸಲು ಅರಣ್ಯ ಇಲಾಖೆಯವರು ಅಡ್ಡಿಪಡಿಸುತ್ತಿದ್ದಾರೆ, ರಸ್ತೆ, ಚರಂಡಿ, ಬೀದಿ ದೀಪ ವ್ಯವಸ್ಥೆ ಇಲ್ಲದೆ ಈಗಿರುವ ನಿವಾಸಿಗಳು ಸಂಕಷ್ಟ ಅನುಭವಿಸುತ್ತದ್ದೇವೆ.
ಚುನಾವಣೆ ಸಂದರ್ಭ ಮಾತ್ರ ಆಶ್ವಾಸನೆ ನೀಡುವವರು ನಂತರದ ದಿನಗಳಲ್ಲಿ ನಮ್ಮ ಬೇಡಿಕೆ ಈಡೇರಿಸುವಲ್ಲಿ ಆಸಕ್ತಿ ತೋರುತ್ತಿಲ್ಲ. ಮೂಲಸೌಕರ್ಯಗಳಿಂದ ವಂಚಿತರಾಗಿ, ಅರಣ್ಯ ಇಲಾಖೆಯವರ ಭಯದಲ್ಲಿ ಬದುಕು ಸಾಗಿಸುವ ಸ್ಥಿತಿ ಎದುರಾಗಿದೆ ಎಂದರು.
ಪ್ರತಿಭಟನೆಯಲ್ಲಿ ಸಂಧ್ಯಾ ಕಾವೇರಪ್ಪ, ಕವಿತಾ, ಶ್ವೇತಾ, ಪುಟ್ಟಮ್ಮ, ದೇವಿಕಾ, ವೀಣಾ, ರುಕಿಯಾ, ಲಕ್ಷ್ಮಿ ಚಂದ್ರಯ್ಯ, ಕುಸುಮ, ಶಾರದ, ಸುಚಿತ್ರ, ರೂಪ, ನಿರ್ಮಲಾ ಸುಬ್ರಮಣಿ, ಯೋಗೇಶ್, ಗಂಗಾಧರ, ಸತೀಶ್, ದಿನೇಶ್, ಪುನೀತ್ ಮಂಜುನಾಥ್ ಮತ್ತಿತರರು ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!