ಕುಶಾಲನಗರ, ಡಿ 29: ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲೇ ಶಿಕ್ಷಣದ ಜೊತೆಯಲ್ಲೇ ಸಾಹಿತ್ಯದ ಬಗ್ಗೆಯೂ ಆಸಕ್ತಿ ಬೆಳಸಿಕೊಳ್ಳಬೇಕು ಎಂದು ಕೂಡಿಗೆ ಸೈನಿಕ ಶಾಲೆಯ ಪ್ರಾಂಶುಪಾಲ ಕರ್ನಲ್ ಅಮರ ಜೀತ್ ಸಿಂಗ್ ಕರೆ ನೀಡಿದರು.
ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಕೂಡಿಗೆ ಸೈನಿಕ ಶಾಲೆಯ ಕುವೆಂಪು ವಿವಿದ್ದೋದೇಶ ಸಭಾಂಗಣದಲ್ಲಿ ರಾಷ್ಟ್ರಕವಿ ಕುವೆಂಪು ಅವರ 119ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, ಮಾತೃಭಾಷೆಯ ಬಗ್ಗೆ ಪ್ರತಿಯೊಬ್ಬರಿಗೂ ಪ್ರೀತಿ, ಗೌರವ, ಅಭಿಮಾನ ಇರುತ್ತೆ. ಅದರ ಜೊತೆಯಲ್ಲಿ ಬೇರೆ ಭಾಷೆಗಳನ್ನು ಗೌರವಿಸುವುದು ಅವಶ್ಯ. ಕುವೆಂಪು ಅವರ ಅದ್ಬುತ ಬರಹಗಳಿಂದಲ್ಲೇ ಅವರಿಗೆ ರಾಷ್ಟ್ರಕವಿ ಎನ್ನಲು ಸಾಧ್ಯವಾಗಿದ್ದು. ಅವರ ಆದರ್ಶ ಮತ್ತು ಚಿಂತನೆಗಳನ್ನು ಇಂದಿನ ಯುವ ಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಯಶಸ್ಸು ಕಾಣಬೇಕೆಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕುವೆಂಪು ಅವರ ಬಗ್ಗೆ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಉಪನ್ಯಾಸ ನೀಡುತ್ತ, ಸಮಾಜದಲ್ಲಿ ಬೇರೂರಿರುವ ಮೌಢ್ಯ, ಕಂದಾಚಾರದ ವಿರುದ್ಧ ದ್ವನಿಯೆತ್ತಿ, ವೈಚಾರಿಕತೆ ಬೆಳಸುವಲ್ಲಿ ತಮ್ಮ ಸಾಹಿತ್ಯ ರಚನೆಯಲ್ಲಿ ಹೆಚ್ಚಿನ ಬೆಳಕು ಚೆಲ್ಲಿದ ಕುವೆಂಪು ಅವರ ಸಾಹಿತ್ಯ ಹಾಗೂ ವಿಚಾರಧಾರೆಗಳು ನಮ್ಮ ಸಮಾಜಕ್ಕೆ ದಾರಿದೀಪವಾಗಿದೆ ಎಂದು ಬಣ್ಣಿಸಿದರು. ಸೈನಿಕ ಶಾಲೆಯಲ್ಲಿ ಕನ್ನಡ ಸಾಹಿತ್ಯದ ಕಾರ್ಯಕ್ರಮ ಉತ್ತಮವಾಗಿ ನಡೆಯುತ್ತಿದ್ದು, ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿ ಬೆಳಸಲು ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಕುವೆಂಪು ಅವರ ಸಾಹಿತ್ಯವನ್ನು ಅಭ್ಯಾಸ ಮಾಡುವ ಮೂಲಕ ತಾವು ಕೂಡ ಉತ್ತಮ ಸಾಹಿತಿಯಾಗಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು. ಕುವೆಂಪು ಅವರ ಸಾಹಿತ್ಯವು ಕನ್ನಡ ಸಾಹಿತ್ಯಕ್ಕೆ ಹೆಮ್ಮೆ ತರುತ್ತದೆ. ಅವರ ಬರವಣಿಗೆಗೆ ಜ್ಞಾನಪೀಠ ಸೇರಿದಂತೆ ಹಲವಾರು ಪ್ರಶಸ್ತಿಗಳು ದೊರೆತ್ತಿವೆ. ಅವರ ಅನೇಕ ಕಾದಂಬರಿಗಳು ಯಶಸ್ವಿ ಚಲನಚಿತ್ರವಾಗಿದೆ ಎಂದು ತಿಳಿಸಿದರು.
ಕೊಡಗಿನ ತ್ರಿಭಾಷಾ ಸಾಹಿತಿ, ಶಿಕ್ಷಣ ತಜ್ ದಿ.ವಿ.ಎಸ್.ರಾಮಕೃಷ್ಣ ಅವರ ಹೆಸರಿನ ಧತ್ತಿ ಕಾರ್ಯಕ್ರಮ ಅಂಗವಾಗಿ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕುಶಾಲನಗರ ಕಸಾಪ ಅಧ್ಯಕ್ಷ ಕೆ.ಎಸ್.ನಾಗೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲ ಕ್ಯಾಪ್ಟನ್ ಕ್ವ್ಯಡರ್ನ್ ಲೀಡರ್ ಮನ್ ಪ್ರೀತ್ ಸಿಂಗ್, ಕೂಡುಮಂಗಳೂರು ರಾಮೇಶ್ವರ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ.ಹೇಮಂತಕುಮಾರ್, ಸಮಾಜ ಸೇವಕ ನಟೇಶ್ ಗೌಡ, ಕಸಾಪ ಕಾರ್ಯದರ್ಶಿ ಟಿ.ವಿ.ಶೈಲಾ, ಖಜಾಂಚಿ ಕೆ.ವಿ.ಉಮೇಶ್, ಸಂಘಟನಾ ಕಾರ್ಯದರ್ಶಿ ಸೂದನ ರತ್ನಾವತಿ, ಸೋಮಶೇಖರ್, ಕಾಳಪ್ಪ, ಚಿತ್ರ ರಮೇಶ್ ಇತರರು ಹಾಜರಿದ್ದರು.
Back to top button
error: Content is protected !!