ಧಾರ್ಮಿಕ
ಜೀವನದಿ ಕಾವೇರಿಗೆ 152 ನೇ ತಿಂಗಳ ಮಹಾ ಆರತಿ
ಕುಶಾಲನಗರ, ನ.29:
ರಾಜ್ಯ ರಾಷ್ಟ್ರಮಟ್ಟದಲ್ಲಿ ಜೀವನದಿ ಕಾವೇರಿ ಸಂರಕ್ಷಣೆಗೆ ಯೋಜನೆಗಳನ್ನು ರೂಪುಗೊಳಿಸಬೇಕಾಗಿದೆ ಎಂದು ಸೆಂಟರ್ ಫಾರ್ ಎಜುಕೇಶನ್ ಎನ್ವಿರಾನ್ಮೆಂಟ್ ಅಂಡ್ ಕಮ್ಯೂನಿಟಿ (ಸೀಕೋ) ಸಂಸ್ಥೆಯ ಮುಖ್ಯಸ್ಥರಾದ ಡಾ ಬಿ ಕೆ ಹರೀಶ್ ಕುಮಾರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ಕಾವೇರಿ ಮಹಾ ಆರತಿ ಬಳಗದ ಆಶಯದಲ್ಲಿ ನಡೆದ 152 ನೆಯ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ನದಿಗಳು ಜೀವನದ ಸ್ಪೂರ್ತಿಯ ಸೆಲೆಯಾಗಿವೆ. ಸಂಸ್ಕೃತಿಯ ಮೂಲ ಸ್ಥಾನಗಳಾಗಿವೆ. ನದಿಯನ್ನು ಜನರು ಹಲವು ದೃಷ್ಟಿಕೋನಗಳಿಂದ ನೋಡುತ್ತಿದ್ದು, ಜಲ ಮೂಲಗಳ ಸಂರಕ್ಷಣೆ ಪ್ರತಿಯೊಬ್ಬರ ಆಧ್ಯ ಕರ್ತವ್ಯವಾಗಿದೆ ಎಂದರು.
ನದಿಗಳನ್ನು ಪೂಜಿಸುವ ಮೂಲಕ ಪ್ರಕೃತಿಯ ಅಸ್ತಿತ್ವ ಉಳಿಯಲು ಸಾಧ್ಯ ಎಂದ ಅವರು, ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಕಳೆದ 13 ವರ್ಷಗಳಿಂದ ಪ್ರತಿ ಹುಣ್ಣಿಮೆಯಂದು ಕಾವೇರಿಗೆ ಮಹಾ ಆರತಿ ಬೆಳಗಲಾಗುತ್ತಿದೆ. ಗಂಗಾ ಆರತಿ ರೀತಿಯಲ್ಲಿ ಕಾವೇರಿಗೆ ನಿತ್ಯ ನಿರಂತರ ಆರತಿ ಬೆಳಗುವ ಕಾರ್ಯ ನಡೆಯಬೇಕಾಗಿದೆ ಎಂದರು.
ಅರ್ಚಕರಾದ ಕೃಷ್ಣಮೂರ್ತಿ ಭಟ್ ಕುಂಕುಮಾರ್ಚನೆ ಅಷ್ಟೋತ್ತರ ನಂತರ ನದಿಗೆ ಸಾಮೂಹಿಕವಾಗಿ ಆರತಿ ಬೆಳಗಲಾಯಿತು.
ಈ ಸಂದರ್ಭ ಬಳಗದ ಸಂಚಾಲಕರಾದ ವನಿತಾ ಚಂದ್ರಮೋಹನ್, ಮಂಡೆಪಂಡ ಬೋಸ್ ಮೊಣ್ಣಪ್ಪ, ವೈಶಾಕ್, ಕೆಂಚಪ್ಪ, ಚೈತನ್ಯ ಮತ್ತಿತರರು ಇದ್ದರು.
ಕಾರ್ತಿಕ ಹುಣ್ಣಿಮೆ ಅಂಗವಾಗಿ ಕುಶಾಲನಗರ ವಾಸವಿ ಯುವತಿಯರ ಸಂಘದ ಆಶ್ರಯದಲ್ಲಿ ನದಿ ತಟದಲ್ಲಿ ಪೂಜೆ ಸಲ್ಲಿಸಿ ನದಿಗೆ ಆರತಿ ಬಿಡಲಾಯಿತು.
ಸಂಘದ ಅಧ್ಯಕ್ಷೆ ಕವಿತಾ ಪ್ರವೀಣ್, ಮಾಜಿ ಅಧ್ಯಕ್ಷ ಪ್ರತಿಭಾ ರಾಘವೇಂದ್ರ, ಕಾರ್ಯದರ್ಶಿ ಸ್ನೇಹ ನಿತಿನ್ ಮತ್ತು ಸದಸ್ಯರುಗಳು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.