ಕುಶಾಲನಗರ ಅ 30: ಕೂಡಿಗೆಯಲ್ಲಿರುವ ಕೊಡಗು ಸೈನಿಕ ಶಾಲೆಯಲ್ಲಿ ೧೦ದಿನಗಳ ಕಾಲ ಹಮ್ಮಿಕೊಂಡಿದ್ದ ಎನ್ ಸಿ ಸಿ ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ಪ್ರಸ್ತುತ ಶಿಬಿರದಲ್ಲಿ ಒಟ್ಟು ೧೩೧ ಶಿಬಿರಾರ್ಥಿಗಳು, ೦೪ ಎನ್ ಸಿ ಸಿ ಅಧಿಕಾರಿಗಳು ಹಾಗೂ ೦೪ ಎನ್ ಸಿ ಸಿ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಶಿಬಿರದ ಕುರಿತು ಉಪ ಪ್ರಾಂಶುಪಾಲ ಹಾಗೂ ಶಿಬಿರದ ಕಮಾಂಡೆಂಟ್ ಆದ ಸ್ಕ್ವಾಡ್ರನ್ ಲೀಡರ್ ಮನ್‌ಪ್ರೀತ್ ಸಿಂಗ್ ಮಾತನಾಡಿ, ಎನ್ ಸಿ ಸಿ ಘಟಕದಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬ ಶಿಬಿರಾರ್ಥಿಯು ತಮ್ಮ ಭವಿಷ್ಯದ ಬದುಕಿನಲ್ಲಿ ಶಿಸ್ತು, ಸಂಯಮ ಮತ್ತು ಯೋಜನೆಯನ್ನು ಯಾವ ರೀತಿ ರೂಢಿಸಿಕೊಳ್ಳಬೇಕೆಂಬುದನ್ನು ಈ ಶಿಬಿರದ ಕಲಿಸಿಕೊಟ್ಟಿದೆ. ಇದರೊಂದಿಗೆ ಮಾನವೀಯ ಮೌಲ್ಯ ಮತ್ತು ಸಮಾಜ ಸೇವೆಯ ಮಹತ್ವವನ್ನು ಶಿಬಿರಾರ್ಥಿಗಳು ಮನಗಾಣಲು ಇಂಥಹ ಎನ್ ಸಿ ಸಿ ಶಿಬಿರಗಳು ಉತ್ತಮ ವೇದಿಕೆಯಾಗಿದೆ ಎಂದರು.
ಶಿಬಿರದಲ್ಲಿ ಕ್ವಾರ್ಟರ್ ಗಾರ್ಡ್ ಪರಿಶೀಲನೆ, ಅಂತರ ಕಂಪನಿ ಸ್ಪರ್ಧೆಗಳು, ಪುಟ್‌ಬಾಲ್, ವಾಲಿಬಾಲ್, ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆ ಹಾಗೂ ಕವಾಯತ್ತು ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಶಿಬಿರದ ಅವಧಿಯಲ್ಲಿ ಶಿಬಿರಾರ್ಥಿಗಳಿಗೆ ಹಿರಿಯ ವಕೀಲ ಮೋಹನ್ ಅವರಿಂದ ಕಾನೂನಿನ ಅರಿವು, ವಾಹನ ಸವಾರಿಯ ನಿಯಮಗಳು, ಸಂಚಾರಿ ಪೋಲೀಸ್ ಉಪ ನಿರೀಕ್ಷಕ ಕಾಶೀನಾಥ್ ಅವರಿಂದ ಟ್ರಾಫಿಕ್ ನಿಯಮಗಳು, ಕುಶಾಲನಗರದ ಸರ್ಕಾರಿ ಇಂಜಿನಿಯರ್ ಕಾಲೇಜಿನ ಪ್ರಾಧ್ಯಾಪಕ ಡಾ ರಂಗನಾಥ್ ಅವರಿಂದ ಕೆರಿಯರ್ ಗೈಡೆನ್ಸ್ ಇನ್ ಕಂಪ್ಯೂಟರ್ ಸೈನ್ಸ್’, ಡಾ ಅಶೋಕ್ ಅವರಿಂದ ‘ಆರೋಗ್ಯ ಮತ್ತು ಸ್ವಚ್ಛತೆ’ ಹೀಗೆ ಹಲವು ವಿಷಯಗಳನ್ನಾಧಿರಿಸಿ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತ. ಜೊತೆಗೆ ಶಿಬಿರಾರ್ಥಿಗಳಿಗೆ ಶಸ್ತ್ರಾಸ್ತ್ರ ತರಬೇತಿಯನ್ನು ಸಹ ನೀಡಲಾಯಿತು.
ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಹಲವು ಸ್ಪರ್ಧೆಗಳಲ್ಲಿ ವಿಜೇತರಾದ ಶಿಬಿರಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ‘ಬ್ರಾವೋ ಕಂಪನಿ’ಯು ಶಿಬಿರದ ಚಾಂಪಿಯನ್ ಕಂಪನಿಯಾಗಿ ಪಾರಿತೋಷಕವನ್ನು ಸ್ವೀಕರಿಸಿತು.
ಪ್ರಸ್ತುತ ಶಿಬಿರದಲ್ಲಿ ಶಿಬಿರದ ಅಧಿಕಾರಿ ಸ್ಕ್ವಾಡ್ರನ್ ಲೀಡರ್ ಮನ್‌ಪ್ರೀತ್ ಸಿಂಗ್, ಕ್ಯಾಪ್ಟನ್ ಎನ್ ವಿಬಿನ್ ಕುಮಾರ್, ಲೆಫ್ಟಿನೆಂಟ್ ಕೆ ಗೋವಿಂದರಾಜ, ಫಸ್ಟ್ ಆಫೀಸರ್‌ಗಳಾದ ವೈ ವಿ ವೆಂಕಟರಮಣ ಹಾಗೂ ಮಂಜಪ್ಪ ಜಿ ಕೆ, ಸುಬೇದಾರ್ ಜಿತೇಂದರ್ ಸಿಂಗ್, ಮುಖ್ಯ ಲೆಕ್ಕಾಧಿಕಾರಿ ಅಯ್ಯಪ್ಪ ಹಾಗೂ ಶಾಲೆಯ ಆಡಳಿತ ವರ್ಗದ ಸಿಬ್ಬಂದಿಗಳು ಭಾಗವಹಿಸಿದ್ದರು.
Back to top button
error: Content is protected !!