ಕೂಡುಮಂಗಳೂರು ಗ್ರಾ.ಪಂ ಸಾಮಾನ್ಯ ಸಭೆ ಗ್ರಾ.ಪಂ ಅಧ್ಯಕ್ಷೆ ಇಂದಿರಾ ರಮೇಶ್ ಅಧ್ಯಕ್ಷತೆಯಲ್ಲಿ ಬುಧವಾರ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಸಭೆಯ ಪ್ರಾರಂಭದಲ್ಲಿ ಎಂದಿನಂತೆ ಕಳೆದ ತಿಂಗಳ ಗ್ರಾಮ ಪಂಚಾಯಿತಿಯ ಜಮಾ ಖರ್ಚಿನ ಬಗ್ಗೆ ಚರ್ಚೆ ನಡೆಸಲಾಯಿತು.
೨೦೨೨-೨೩ ನೇ ಸಾಲಿನ ವರ್ಗ ೧ ರ ಕ್ರಿಯಾಯೋಜನೆ ತಯಾರಿಸುವ ಬಗ್ಗೆ ಪಿಡಿಓ ಸಂತೋಷ್ ಸಭೆಗೆ ಮಾಹಿತಿ ನೀಡಿದರು. ಈಗಾಗಲೇ ವರ್ಗ ೧ ರ ಕ್ರಿಯಾಯೋಜನೆ ತಯಾರಿಸುವ ವಿಷಯದಲ್ಲಿ ಕೆಲವರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದರಿಂದ ಉಳಿದವರಿಗೆ ವಾರ್ಡ್ ಅಭಿವೃದ್ಧಿ ಪಡಿಸುವ ವಿಷಯದಲ್ಲಿ ತೊಂದರೆಯಾಗುತ್ತದೆ. ಆದ್ದರಿಂದ ಕೂಡಲೇ ತಮ್ಮ ತಮ್ಮ ವಾರ್ಡ್ ಗಳಲ್ಲಿ ಆಗಬೇಕಾದ ಕೆಲಸಗಳ ವಿವರ ನೀಡುವಂತೆ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಅವರು ಮನವಿ ಮಾಡಿದರು. ವಾರ್ಡ್ ವಾರು ಕೆಲಸಗಳ ವಿವರ ಕೂಡಲೆ ನೀಡಲು ಸೂಚಿಸಿದ ಕೆ.ಬಿ.ಶಂಶುದ್ಧೀನ್ ವಿರುದ್ದ ಸದಸ್ಯ ದಿನೇಶ್ ಹರಿಹಾಯ್ದರು. ತಮ್ಮ ಜವಾಬ್ದಾರಿ ನಿರ್ವಹಿಸಲು ಆದೇಶ ನೀಡದಂತೆ ತಿಳಿಸಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು.
ಊರನ್ನು ಅಭಿವೃದ್ಧಿ ಪಡಿಸುವ ವಿಷಯದಲ್ಲಿ ತೊಂದರೆಯಾಗುತ್ತಿದೆ ಎಂದು ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಆಕ್ರೋಶ್ ವ್ಯಕ್ತಪಡಿಸಿದರು. ಕೂಡಲೆ ಆಯಾ ವಾರ್ಡ್ ಸದಸ್ಯರು ಕಾಮಗಾರಿಗಳ ಪಟ್ಟಿ ನೀಡಲು ಅಧ್ಯಕ್ಷೆ ಇಂದಿರಾ ರಮೇಶ್ ಹಾಗೂ ಪಿಡಿಒ ಸಂತೋಷ್ ಸೂಚಿಸಿದರು.
ಸದಸ್ಯರಾದ ಫಿಲೋಮಿನಾ ಮಾತನಾಡಿ, ಬಸವನತ್ತೂರಿನಲ್ಲಿ ವಾಟರ್ ಮ್ಯಾನ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರ ಬಗ್ಗೆ ವಾಟರ್ ಮ್ಯಾನ್ ಗೆ ಒಮ್ಮೆ ತಿಳಿಹೇಳುವಂತೆ ತಿಳಿಸಿದರು. ಇದಕ್ಕೆ ಸದಸ್ಯರಾದ ಗೌರಮ್ಮ, ಗಿರೀಶ್ ಹಾಗೂ ದಿನೇಶ್ ಇನ್ನಿತರರು ಸಾಥ್ ನೀಡಿದರು. ಈಗಾಗಲೇ ಇದರ ಬಗ್ಗೆ ಸಾಕಷ್ಟು ದೂರು ಬಂದಿದ್ದು, ಕೂಡಲೇ ಸರಿಪಡಿಸುವುದಾಗಿ ಪಿಡಿಓ ಪ್ರತಿಕ್ರಿಯಿಸಿದರು.
ನಂತರ ಸಾರ್ವಜನಿಕರ ಅರ್ಜಿ ಮಂಡಿಸಲಾಯಿತು. ಕಂದಾಯ ನಿಗದಿ ಪಡಿಸುವ ಬಗ್ಗೆ, ಕಟ್ಟಡ ಪರವಾನಗಿ, ವ್ಯಾಪಾರ ಪರವಾನಗಿ ಬಗ್ಗೆ ಬಂದ ಅರ್ಜಿಗಳನ್ನು ಪಿಡಿಓ ಸಭೆಗೆ ಮಂಡಿಸಿದರು.
ಚಿಕ್ಕತ್ತೂರಿನ ಕನಕ ಬಡಾವಣೆಯಲ್ಲಿರುವ ಹೋಂ ಸ್ಟೇ ಯಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ, ಹೋಂ ಸ್ಟೇ ರದ್ದುಪಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸದಸ್ಯರಾದ ದಿನೇಶ್ ಹಾಗೂ ಭಾಗ್ಯರವರು ಒತ್ತಾಯಿಸಿದರು. ಈ ಸಂದರ್ಭ ದಿನೇಶ್ ಹಾಗೂ ಸದಸ್ಯ ಭೊಗಪ್ಪರವರ ನಡುವೆ ವಾಗ್ವಾದ ನಡೆಯಿತು. ಏಕವಚನ ಪದಪ್ರಯೋಗ ನಡೆಯಿತು.
ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಮುನ್ನ ಪಿಡಿಓ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಸಿಗೊಳಿಸಿದರು. ಹೋಂ ಸ್ಟೇ ಗೆ ಸಂಬಂಧಿಸಿದಂತೆ ಕಳೆದ ಸಭೆಯಲ್ಲಿ ತೀರ್ಮಾನ ಕೈಗೊಂಡಂತೆ ಸಂಬಂಧಪಟ್ಟವರಿಗೆ ಪತ್ರ ವ್ಯವಹಾರ ಮಾಡಲಾಗಿದೆ. ಮತ್ತೊಮ್ಮೆ ಈ ಬಗ್ಗೆ ತಹಶೀಲ್ದಾರ್ ಗಮನಕ್ಕೆ ತರಲಾಗುವುದು ಎಂದು ಪಿಡಿಓ ಉತ್ತರಿಸಿದರು.
ಸುಂದರನಗರ, ವಿನಾಯಕ ಬಡಾವಣೆ ಹಾಗೂ ಬಸವೇಶ್ವರ ಬಡಾವಣೆಯಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಇತ್ತೀಚೆಗೆ ಓರ್ವ ವಿದ್ಯಾರ್ಥಿಗೆ ಬಸವೇಶ್ವರ ಬಡಾವಣೆಯಲ್ಲಿ ನಾಯಿ ಕಚ್ಚಿದೆ. ಸುಂದರನಗರದ ಮಹಿಳೆಯೋರ್ವರಿಗೆ ನಾಯಿ ಕಚ್ಚಿದ್ದು, ಕೂಡಲೇ ಬೀದಿ ನಾಯಿಗಳ ಸಮಸ್ಯೆಗೆ ಪರಿಹಾರ ಒದಗಿಸಿಕೊಡಬೇಕು ಎಂದು ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಆಗ್ರಹಿಸಿದರು. ಇದಕ್ಕೆ ಸದಸ್ಯರಾದ ಮಣಿ ಧ್ವನಿಗೂಡಿಸಿದರು.
ನಂತರ ಅಧ್ಯಕ್ಷರ ಅನುಮತಿ ಮೇರೆಗೆ ಇತರೆ ಚರ್ಚೆಗಳು ನಡೆದವು. ಪಿಡಿಓ ಸಂತೋಷ್ ಅವರು ಸಭೆಯಲ್ಲಿ ಹಾಜರಿದ್ದವರಿಗೆ ಸ್ವಾಗತಿಸಿ, ವಂದಿಸಿದರು.
ಈ ಸಂದರ್ಭ ಗ್ರಾ.ಪಂ ಸದಸ್ಯರು ಹಾಗೂ ಪಂಚಾಯಿತಿ ಸಿಬ್ಬಂದಿಗಳು ಇದ್ದರು.
Back to top button
error: Content is protected !!