ಕಾರ್ಯಕ್ರಮ

ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನದ ಪ್ರಯುಕ್ತ ‘ವ್ಯಸನ ಮುಕ್ತ ದಿನಾಚರಣೆ

ಜಿಲ್ಲೆಯಲ್ಲಿ ಗಾಂಜಾ 61 ಪ್ರಕರಣ ದಾಖಲು, 157 ಜನರ ಮೇಲೆ ಮೊಕದ್ದಮೆ: ಕೆ.ರಾಮರಾಜನ್.

ಕುಶಾಲನಗರ, ಆ 01:: ಜಿಲ್ಲೆಯಲ್ಲಿ ಕಳೆದ ಏಳು ತಿಂಗಳಲ್ಲಿ ಗಾಂಜಾ ಸಂಬಂಧಿಸಿದಂತೆ 61 ಪ್ರಕರಣಗಳು ದಾಖಲಾಗಿದ್ದು, 157 ಜನರ ಮೇಲೆ ಮೊಕದ್ದಮೆ ಹೂಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ತಿಳಿಸಿದ್ದಾರೆ.

ಜಿಲ್ಲಾಡಳಿತ, ಪೊಲೀಸ್ ಇಲಾಖೆ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸಮಾಜ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಇವರ ವತಿಯಿಂದ ನಗರದ ಸರ್ಕಾರಿ ಜೂನಿಯರ್ ಕಾಲೇಜು ಸಭಾಂಗಣದಲ್ಲಿ ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನದ ಪ್ರಯುಕ್ತ ಮಂಗಳವಾರ ನಡೆದ ‘ವ್ಯಸನ ಮುಕ್ತ ದಿನಾಚರಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೊಡಗು ಜಿಲ್ಲೆಯಲ್ಲಿ 36 ಕೆ.ಜಿ.ಯಷ್ಟು ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಸುಮಾರು 6 ಕಡೆಗಳಲ್ಲಿ ಗಾಂಜಾ ಬೆಳೆಯುತ್ತಿರುವುದನ್ನು ಪತ್ತೆ ಹಚ್ಚಲಾಗಿದೆ. ಹಾಗೆಯೇ 99 ಗ್ರಾಂ ಎಂಡಿಎಂಎ(ಮೀಥೈಲ್ ಎಡಿಯಾಕ್ಸಿ ಮೆಥಾಂಫೆಟಮೈನ್) ಮತ್ತು 9 ಬ್ಲಾಕ್‍ಗಳಲ್ಲಿ ಸ್ಟ್ರಿಪ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಯುವಜನರು ಮದ್ಯ ಅಥವಾ ಮಾದಕ ವಸ್ತುಗಳಿಗೆ ತುತ್ತಾಗದೆ ವಿದ್ಯಾರ್ಜನೆಯತ್ತ ಗಮನಹರಿಸಬೇಕು. ಲಭ್ಯವಿರುವ ಸಮಯವನ್ನು ಸರಿಯಾಗಿ ಬಳಸಿಕೊಂಡಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಸಲಹೆ ನೀಡಿದರು.

ಡಾ.ಮಹಾಂತ ಶಿವಯೋಗಿಗಳು ಮದ್ಯ ಹಾಗೂ ಮಾದಕ ವಸ್ತುಗಳ ವಿರುದ್ಧ 70 ರ ದಶಕದಲ್ಲಿಯೇ ಜಾಗೃತಿ ಮೂಡಿಸಿದರು. ಡಾ.ಮಹಾಂತ ಶಿವಯೋಗಿಗಳ ಆದರ್ಶಗಳನ್ನು ತಿಳಿದುಕೊಂಡು ಮುನ್ನಡೆಯಬೇಕು ಎಂದರು.

ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿ, ಉದ್ಯೋಗ ಪಡೆಯುವತ್ತ ಗಮನಹರಿಸಬೇಕು. ಸಂಗೀತ, ಸಾಹಿತ್ಯ, ಕ್ರೀಡೆ ಹೀಗೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದಾಗಿದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮನೋವೈದ್ಯ ಡಾ.ಡೆವಿನ್ ಕರ್ಕಡ ಅವರು ಮಾತನಾಡಿ, ಮದ್ಯ ಹಾಗೂ ಮಾದಕ ವಸ್ತುಗಳ ಸೇವನೆಯಿಂದ ನೆನಪಿನ ಶಕ್ತಿ ಕಡಿಮೆಯಾಗುತ್ತದೆ. ಜೊತೆಗೆ ದೈಹಿಕ ಮತ್ತು ಮಾನಸಿಕವಾಗಿ ಕುಗ್ಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮದ್ಯ ಹಾಗೂ ಮಾದಕ ವಸ್ತುಗಳಿಗೆ ತುತ್ತಾದರೆ ಕುಟುಂಬ ಹಾಗೂ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಇದರಿಂದ ರಾಷ್ಟ್ರದ ಅಭಿವೃದ್ಧಿಗೆ ಹಿನ್ನೆಡೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಡೆವಿನ್ ಕರ್ಕಡ ಹೇಳಿದರು.

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಪೋನ್ ಹೆಚ್ಚು ಬಳಸುವುದು ಸಹ ಒಂದು ರೀತಿ ವ್ಯಸನವಾಗಿದೆ. ರಾತ್ರಿ ವೇಳೆ ಹೆಚ್ಚು ಮೊಬೈಲ್ ನೋಡುವುದರಿಂದ ಒಂದು ರೀತಿ ಗೀಳು ಉಂಟಾಗಲಿದೆ. ಆದ್ದರಿಂದ ಯಾವುದೇ ರೀತಿಯ ಚಟಕ್ಕೂ ದಾಸರಾಗದಂತೆ ಎಚ್ಚರವಹಿಸುವುದು ಅತ್ಯಗತ್ಯ ಎಂದು ಡಾ.ಡೆವಿನ್ ಕರ್ಕಡ ಅವರು ಪ್ರತಿಪಾದಿಸಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಜಯ, ವಾರ್ತಾಧಿಕಾರಿ ಚಿನ್ನಸ್ವಾಮಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪಾಲಾಕ್ಷ ಅವರು ಮಾತನಾಡಿದರು.

ಕರ್ನಾಟಕ ರಾಜ್ಯಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ನಿರ್ದೇಶಕಿ ಸ್ಮಿತಾ ಸುಬ್ಬಯ್ಯ, ಉಪನ್ಯಾಸಕ ಚಿದಾನಂದ, ರಾಜಸುಂದರಂ, ಇತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!