ಕುಶಾಲನಗರ, ಜೂ10: ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.
ಸಂಘದ ಕಛೇರಿಯಲ್ಲಿ ನಡೆಸ ಪತ್ರಕರ್ತರೊಂದಿಗಿನ ಸಂವಾದದಲ್ಲಿ ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳು, ಸಮಸ್ಯೆಗಳ ಬಗ್ಗೆ ಪತ್ರಕರ್ತರು ಶಾಸಕರ ಗಮನ ಸೆಳೆದರು.
ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಅವುಗಳ ಅನುಷ್ಠಾನಕ್ಕೆ ಒತ್ತಾಯಿಸಲಾಯಿತು. ಪ್ರಮುಖ ಸಮಸ್ಯೆಗಳಿಗೆ ಶೀಘ್ರ ಒರಿಹಾರ ಒದಗಿಸಲು ಆಗ್ರಹಿಸಲಾಯಿತು.
ಎಲ್ಲಾ ವಿಚಾರಗಳನ್ನು ಆಲಿಸಿದ ಶಾಸಕರು ತಮ್ಮದೇ ಆದ ಯೋಜನೆಗಳನ್ನು ವಿವರಿಸಿ ಸಮಸ್ಯೆ ನಿವಾರಣೆಗೆ ಅಗತ್ಯವಿರುವೆಡೆ ಸ್ಥಳ ಪರಿಶೀಲಿಸಿ ಕ್ರಮ ವಹಿಸುವ ಬಗ್ಗೆ ಭರವಸೆ ನೀಡಿದರು.
ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತಾಲ್ಲೂಕು ಮಟ್ಟದಲ್ಲಿ ಕ್ರೀಡಾಂಗಣ ನಿರ್ಮಾಣ, ಸೋಮವಾರಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ, ಪ್ರವಾಸಿ ತಾಣಗಳಾದ ಮಲ್ಲಳ್ಳಿ ಫಾಲ್ಸ್ , ಹೊನ್ನಮ್ಮನ ಕೆರೆ, ಮಕ್ಕಳ ಗುಡಿ ಬೆಟ್ಟ, ಭತ್ತದ ರಾಶಿ ಬೆಟ್ಟ ಮುಂತಾದ ಪ್ರಮುಖ ಪ್ರವಾಸಿ ತಾಣಗಳ ಅಭಿವೃದ್ಧಿ, ಕೊಡಗಿನಲ್ಲಿ ಆನೆ ಮಾನವ ಸಂಘರ್ಷಕ್ಕೆ ಕಡಿವಾಣ,ದುಬಾರೆಯಲ್ಲಿ ತೂಗು ಸೇತುವೆ ನಿರ್ಮಾಣ, ನೆನೆಗುದಿಗೆ ಬಿದ್ದಿರುವ ಯುಜಿಡಿ ಲೋಕಾರ್ಪಣೆ, ಬಸ್ ಡಿಪೋ ಸ್ಥಾಪನೆ, ಜಿಲ್ಲೆಗೆ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆಯ ಅಗತ್ಯತೆ, ಕುಶಾಲನಗರದಲ್ಲಿ ಟ್ರಾಫಿಕ್ ವ್ಯವಸ್ಥೆ, ಪಾರ್ಕಿಂಗ್ ಸಮಸ್ಯೆ, ಪ್ರವಾಹ ಪರಿಸ್ಥಿತಿ ನಿವಾರಣೆ ಕ್ರಮಗಳು ಸೇರಿದಂತೆ ಮತ್ತಿತರ ವಿಚಾರಗಳ ಬಗ್ಗೆ ಸಂವಾದದಲ್ಲಿ ಚರ್ಚೆ ನಡೆಯಿತು.
ಕೊಡಗಿಗೆ ಮಲ್ಟಿ ಸ್ಪೆಷಾಲಿಸಿ ಆಸ್ಪತ್ರೆ ಅಗತ್ಯವಿದ್ದು ಈ ನಿಟ್ಟಿನಲ್ಲಿ ಪ್ರಥಮ ಆದ್ಯತೆ ನೀಡಿ ಮುಖ್ಯಮಂತ್ರಿಗಳ ಗಮನ ಸೆಳೆಯಲಿದ್ದೇನೆ. ಕುಶಾಲನಗರದಲ್ಲಿ ಟ್ರಾಫಿಕ್ ಸಮಸ್ಯೆ, ಪಾರ್ಕಿಂಗ್ ವ್ಯವಸ್ಥೆಗೆ ಮಲ್ಟಿ ಲೆವೆಲ್ ಪಾರ್ಕಿಂಗ್ ಸಿಸ್ಟಂ ಯೋಜನೆ ಹಾಗೂ ಪ್ರಮುಖ ಜಂಕ್ಷನ್ ಗಳಲ್ಲಿ ಸಿಸಿ ಕ್ಯಾಮೆರಗಳ ಅಳವಡಿಕೆ ಮೂಲಕ ಸಮಸ್ಯೆ ನಿವಾರಣೆಗೆ ತಾಂತ್ರಿಕತೆ ಬಳಕೆಯಿಂದ ಸಾಧ್ಯ. ಆನೆ-ಮಾನವ ಸಂಘರ್ಷದ ಬಗ್ಗೆ ಅರಣ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮವಹಿಸಲಾಗುವುದು, ಗುಂಡುರಾವ್ ಬಡಾವಣೆಯಲ್ಲಿ ಈಗಾಗಲೆ ಗುರುತಿಸಿರುವ ಸ್ಥಳದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು, ಹಾರಂಗಿ, ಕಾವೇರಿ ನದಿ ಹೂಳೆತ್ತುವ ಪ್ರಕ್ರಿಯೆಗಳ ಬಗ್ಗೆ ಪರಿಶೀಲಿಸಿ ಕ್ರಮವಹಿಸಲಾಗುವುದು ಎಂದು ತಿಳಿಸಿದ ಶಾಸಕರು, ನೂರಾರು ಜನಸಾಮಾನ್ಯರು ದಿನನಿತ್ಯ ಭೇಟಿ ಮಾಡುವ ಹಿನ್ನಲೆಯಲ್ಲಿ ಫೊನ್ ಕರೆಗಳ ಸ್ವೀಕಾರ ಕೆಲವೊಮ್ಮೆ ಸಾಧ್ಯವಾಗುವುದಿಲ್ಲ. ಈ ಕಾರಣದಿಂದ ನನ್ನ ಆಪ್ತ ಕಾರ್ಯದರ್ಶಿಯ ದೂರವಾಣಿ ಸಂಖ್ಯೆಗೆ ಸಂಪರ್ಕಿಸುವಂತೆ ಕೋರಿದರು.
ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿ, ಸಿಬ್ಬಂದಿಗಳು ಲಂಚ ಕೇಳಿದ್ದರೆ ನನ್ನ ಗಮನಕ್ಕೆ ತಂದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಕೆಲಸ ಮಾಡಲಾಗುವುದು.
ಏನೇ ಸಮಸ್ಯೆ ಇದ್ದರೂ ನೇರವಾಗಿ ನನ್ನನ್ನು ಭೇಟಿಯಾಗಿ ಎಂದು ಮಂಥರ್ ಗೌಡ ಸಂವಾದದ ಮೂಲಕ ಸಾರ್ವಜನಿಕರಿಗೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಪತ್ರಕರ್ತರ ಸಂಘದ ವತಿಯಿಂದ ಶಾಸಕ ಮಂಥರ್ ಗೌಡ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸಂಘದ ತಾಲ್ಲೂಕು ಅಧ್ಯಕ್ಷ ಎಂ.ಎನ್ .ಚಂದ್ರಮೋಹನ್ , ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಕೆಪಿಸಿಸಿ ಸದಸ್ಯ ನಟೇಶ್ ಗೌಡ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ರಾಜು ರೈ, ಪ್ರಧಾನ ಕಾರ್ಯದರ್ಶಿ ವನಿತಾ ಚಂದ್ರ ಮೋಹನ್ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.
Back to top button
error: Content is protected !!