ರಾಜಕೀಯ
ಕುಶಾಲನಗರದಲ್ಲಿ ಕಾಂಗ್ರೆಸ್ ರೋಡ್ ಶೋ, ಬಹಿರಂಗ ಪ್ರಚಾರ ಕಾರ್ಯಕ್ರಮ
ಕುಶಾಲನಗರ, ಮೇ 02: ಕುಶಾಲನಗರ ಬ್ಲಾಕ್ ಮತ್ತು ನಗರ ಕಾಂಗ್ರೆಸ್ ಆಶ್ರಯದಲ್ಲಿ ಕುಶಾಲನಗರದ ಕಾರು ನಿಲ್ದಾಣದಲ್ಲಿ ಬಹಿರಂಗ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವೆ, ಚಲನಚಿತ್ರ ನಟಿ ಉಮಾಶ್ರೀ ಮಾತನಾಡಿ, ಬಿಜೆಪಿ ಜನರಲ್ಲಿ ಗೊಂದಲಮಯ, ದ್ವಂದ್ವ ವಿಚಾರಗಳನ್ನು ಬಿತ್ತಿ ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿದೆ. ಈ ಬಾರಿ ಬಿಜೆಪಿಯನ್ನು ಬದಿಗೆ ಸರಿಸಿ ಕಾಂಗ್ರೆಸ್ ಆರಿಸುವ ಕೆಲಸವನ್ನು ಮತದಾರರು ಮಾಡಬೇಕಿದೆ ಎಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೆಪಿಸಿಸಿ ಮುಖಂಡ ಮಂಜುನಾಥ್ ಗುಂಡುರಾವ್, ಸತತ ಐದು ಬಾರಿ ಶಾಸಕರಾದ ಅಪ್ಪಚ್ಚುರಂಜನ್ ಅವರ ಕೊಡುಗೆ ಶೂನ್ಯ. ಈ ಬಾರಿಯ ಚುನಾವಣೆ ಅವರಿಗೆ ಮೋಡ ಕವಿದ ವಾತಾವರಣವಾಗಿದೆ ಎಂದು ಹರಿಹಾಯ್ದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಮಾತನಾಡಿ, ರಾಜ್ಯದಲ್ಲಿ ಮನೆಮಾತಾದ ಕೊಡಗಿಗೆ ದೊರಕಬೇಕಾದ ಮಾನ್ಯತೆ ದೊರಕಿಸುವಲ್ಲಿ ಇಂದಿನ ಶಾಸಕರು ಯಾವುದೇ ರೀತಿಯ ಪ್ರಯತ್ನ ಮಾಡಿಲ್ಲ. ಗುಂಡುರಾಯರು ಮುಖ್ಯಮಂತ್ರಿಯಾಗಿ ಜಾರಿಗೊಳಿಸಿದ ಅಭಿವೃದ್ಧಿ ಯೋಜನೆಗಳನ್ನು ಹೊರತುಪಡಿಸಿ ಕಳೆದವ 20 ವರ್ಷಗಳಿಂದ ಯಾವುದೇ ರೀತಿಯಲ್ಲಿ ಕುಶಾಲನಗರ ಅಭಿವೃದ್ಧಿ ಕಂಡಿಲ್ಲ ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಬರೀ ಸುಳ್ಳು ಹೇಳುವಲ್ಲಿಯೇ ಮಗ್ನರಾಗಿದ್ದಾರೆ ಹೊರತು ಜನಪರ ಆಡಳಿತ ನೀಡುವಲ್ಲಿ ವಿಫಲರಾಗಿದ್ದಾರೆ. ಬಡವರ ಕಾಂಗ್ರೆಸ್ ಹೊರತಂದ ಯೋಜನೆಗಳಿಗೆ ಬಿಜೆಪಿ ಅಡ್ಡಗಾಲು ಹಾಕುತ್ತಿದೆ. ಕಾಂಗ್ರೆಸ್ ಪಕ್ಷ ಬಡವರ ಪರವಾದ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ. ದೇಶದ ಉಜ್ವಲ ಭವಿಷ್ಯಕ್ಕಾಗಿ ಕಾಂಗ್ರೆಸ್ ಬೆಂಬಲಿಸಬೇಕಿದೆ ಎಂದರು.
ಮಡಿಕೇರಿ ಕ್ಷೇತ್ರ ಅಭ್ಯರ್ಥಿ ಡಾ.ಮಂಥರ್ ಗೌಡ ಮಾತನಾಡಿದರು.
ಪ್ರಚಾರ ಕಾರ್ಯಕ್ರಮಕ್ಕೆ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ರೋಡ್ ಶೋ ನಡೆಯಿತು.
ಮಡಿಕೇರಿ ಕ್ಷೇತ್ರ ಅಭ್ಯರ್ಥಿ ಡಾ.ಮಂಥರ್ ಗೌಡ, ಕಾಂಗ್ರೆಸ್ ಪಕ್ಷದ ಮುಖಂಡರೊಂದಿಗೆ ತೆರೆದ ವಾಹನದಲ್ಲಿ ಅಪಾರ ಸಂಖ್ಯೆಯ ಕಾರ್ಯಕರ್ತರೊಂದಿಗೆ ರೋಡ್ ಶೋ ನಡೆಸಿದರು.
ಈ ಸಂದರ್ಭ ಪಕ್ಷದ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಪ್ರಮುಖರಾದ
ಪ್ರಮೋದ್ ಮುತ್ತಪ್ಪ, ಇಬ್ರಾಹಿಂ ಮಾಸ್ಟರ್, ಶಾಹಿರ, ಕೆ.ಪಿ.ಚಂದ್ರಕಲಾ
ಲೋಕೇಶ್,
ಸುರಯ್ಯ ಅಬ್ರಾರ್,
ಲತೀಫ್, ಕೆ.ಕೆ.ಮಂಜುನಾಥ್
ಉಸ್ಮಾನ್, ಸುನಿತಾ ಮಂಜುನಾಥ್, ಶೇಖ್ ಖಲೀಮುಲ್ಲಾ ಮತ್ತಿತರರು ಇದ್ದರು.