ಕುಶಾಲನಗರ ಮಾ 22: ತೊರೆನೂರು ಗ್ರಾಮದಲ್ಲಿ ಯುಗಾದಿ ಅಂಗವಾಗಿ ಸಾಂಪ್ರದಾಯಿಕ ಹೊನ್ನಾರು ಉತ್ಸವ ಆಚರಿಸಲಾಯಿತು.
ಗ್ರಾಮದ ಶ್ರೀ ಬಸವೇಶ್ವರ ದೇವಾಲಯ ಸಮಿತಿಯ ವತಿಯಿಂದ ಸಾಂಪ್ರದಾಯಿಕವಾಗಿ ನಡೆದುಕೊಂಡು ಬರುತ್ತಿರುವ ಹೊನ್ನಾರು ಉತ್ಸವದ ಅಂಗವಾಗಿ ಯುಗಾದಿ ದಿನದಂದು ಗ್ರಾಮದ ಗ್ರಾಮಸ್ಥರು ಒಂದೆಡೆ ಸೇರಿ ವಾಡಿಕೆಯಂತೆ ವರ್ಷದ ಹೊಸ ಪಂಚಾಂಗ ನೋಡಿದ ನಂತರ ಹೊನ್ನಾರು (ಚಿನ್ನದಸಾಲು) ಉತ್ಸವ ಆಚರಣೆಗೆ ಚಾಲನೆ ನೀಡಲಾಯಿತು. ಗ್ರಾಮದಲ್ಲಿರುವ ಜೋಡಿ ಎತ್ತುಗಳನ್ನು ಸಿಂಗರಿಸಿ ದೇವಾಲಯ ಆವರಣಕ್ಕೆ ಬಂದು ಶ್ರೀ ಬಸವೇಶ್ವರ ದೇವರಿಗೆ ಪೂಜೆ ಸಲ್ಲಿಸಿದ ನಂತರ ದೇವರ ಭೂಮಿಯಲ್ಲಿ ಸಂಪ್ರದಾಯದಂತೆ ಪೂರ್ವದಿಂದ ಪಶ್ಚಿಮಕ್ಕೆ ಜೋಡೆತ್ತಿನ ಮೂಲಕ ಉಳುಮೆ ಮಾಡಲಾಯಿತು. ದೇವಾಲಯದ ಅರ್ಚಕ ಸೋಮಶೇಖರ್ ಪೂಜೆ ಸಲ್ಲಿಸಿದ ನಂತರ ಹೊನ್ನಾರು ಉತ್ಸವವು ಚಾಲನೆಗೊಂಡಿತು.
ಈ ಬಾರಿಯ ಪಂಚಾಂಗ ಪ್ರಕಾರ ಮೀನಾ ರಾಶಿಯ ರೈತ ಟಿ. ಎಂ. ಚಿದಾನಂದ ಎಂಬುವರ ಜೋಡಿ ಎತ್ತುಗಳನ್ನು ನೇಗಿಲು, ನೊಗವನ್ನು ಪೂಜೆ ಮಾಡಿ ದೇವರ ಭೂಮಿಯಲ್ಲಿ ಉಳುಮೆ ಮಾಡಿ ಉಳುಮೆ ಕಾರ್ಯಕ್ಕೆ ಚಾಲನೆ ನೀಡಿದರು.
ಉತ್ಸವದಲ್ಲಿ ಗ್ರಾಮದ 50 ಕ್ಕೂ ಹೆಚ್ಚು ಜೋಡಿ ಎತ್ತುಗಳನ್ನು ಸಿಂಗರಿಸಿ ವಾದ್ಯಗೋಷ್ಠಿಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ತೊರೆನೂರು ಗ್ರಾಮದ ಹೆದ್ದಾರಿಯ ಸಮೀಪದಲ್ಲಿರುವ ಜೋಡಿ ಬಸವೇಶ್ವರ ದೇವಾಲಯಕ್ಕೆ ಮೆರವಣಿಗೆಯಲ್ಲಿ ತರಲಾಯಿತು. ಬಸವೇಶ್ವರನಿಗೆ ಪೂಜೆ ಸಲ್ಲಿಸಿ ನಂತರ ಉತ್ಸವದಲ್ಲಿ ಭಾಗವಹಿಸಿದ ಜೋಡಿ ಎತ್ತಿನ ಮಾಲೀಕರು ಅವರವರ ಜಮೀನಿಗೆ ತೆರಳಿ ಹೊನ್ನಾರು (ಚಿನ್ನದ ಸಾಲು) ಉಳುಮೆ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮವು ತಳಿರು ತೋರಣಗಳಿಂದ ಸಿಂಗಾರಗೊಂಡಿತು. ಗ್ರಾಮದ ಮಹಿಳೆಯರು ಗ್ರಾಮದ ಬೀದಿಗಳಲ್ಲಿ ವಿವಿಧ ರಂಗೋಲಿಗಳ ಮೂಲಕ ಹೊನ್ನಾರು ಉತ್ಸವವನ್ನು ಸ್ವಾಗತಿಸಿದರು.
ಹೊನ್ನಾರು ಉತ್ಸವದಲ್ಲಿ ಭಾಗವಹಿಸಿದ್ದ ಎಲ್ಲಾ ಜೋಡಿ ಎತ್ತಿನ ರೈತರುಗಳಿಗೆ ನೆನಪಿನ ಕಾಣಿಕೆಯನ್ನು ನೀಡಲಾಯಿತು.
ಈ ಪದ್ದತಿಯನ್ನು ಕಳೆದ 55 ವರ್ಷಗಳಿಂದಲೂ ಈ ಗ್ರಾಮದಲ್ಲಿ ವೈಭವದಿಂದ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ ಎಂದು ಶ್ರೀ ಬಸವೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಹೆಚ್.ಬಿ.ಚಂದ್ರಪ್ಪ ತಿಳಿಸಿದರು.ಸಂಜೆ ಶ್ರೀ ಬಸವೇಶ್ವರ ಮೂರ್ತಿಯ ವಿದ್ಯುತ್ ಅಲಂಕೃತವಾದ ಮಂಡಲದಲ್ಲಿ ಮೆರವಣಿಗೆಯ ಅದ್ದೂರಿ ನೆಡಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ಶ್ರೀ ಬಸವೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಹೆಚ್.ಬಿ.ಚಂದ್ರಪ್ಪ, ಕಾರ್ಯದರ್ಶಿ ಟಿ.ಎಸ್. ಸೋಮಶೇಖರಾಚಾರಿ, ಉಪಾಧ್ಯಕ್ಷ ಪ್ರಕಾಶ್, ಗ್ರಾಮ ಪಂಚಾಯತಿ ಸದಸ್ಯ ಟಿ.ಸಿ. ಶಿವಕುಮಾರ್, ನಿರ್ದೇಶಕರಾದ ದೇವರಾಜ್, ಟಿ.ಎಸ್.ಪ್ರಕಾಶ್, ಟಿ.ಟಿ.ಗೋವಿಂದ, ಗಣೇಶ್, ಕುಮಾರ್, ಟಿ.ಎನ್.ಶಿವನಾಂದ, ಟಿ.ಎಸ್. ಚಂದ್ರಶೇಖರ್, ತ್ರೀನೇಶ್,ರವಿಚಂದ್ರ ಸೇರಿದಂತೆ ಸಮಿತಿಯ ಸದಸ್ಯರು ಹಾಗೂ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.
Back to top button
error: Content is protected !!