ಕಾರ್ಯಕ್ರಮ

ಕೂಡ್ಲೂರು ಗ್ರಾಮದ ವಿವಿಧ ಸ್ತ್ರೀ ಶಕ್ತಿ ಸಂಘಗಳ ಸಂಯುಕ್ತಾಶ್ರಯದಲ್ಲಿ ಮಹಿಳಾ ದಿನಾಚರಣೆ

ಕುಶಾಲನಗರ,ಮಾ 21: ಕೂಡ್ಲೂರು ಗ್ರಾಮದ ಶ್ರೀ ಮಂಜುನಾಥ ಸ್ತ್ರೀಶಕ್ತಿ ಸಂಘ, ತುಳಸಿ ವರಲಕ್ಷ್ಮಿ ಸ್ತ್ರೀಶಕ್ತಿ ಸಂಘ, ಅನ್ನಪೂರ್ಣೇಶ್ವರಿ ಸ್ತ್ರೀ ಶಕ್ತಿ ಸಂಘ, ರಾಜರಾಜೇಶ್ವರಿ ಸ್ತ್ರೀ ಶಕ್ತಿ ಸಂಘ, ಸರಸ್ವತಿ ಸ್ತ್ರೀ ಶಕ್ತಿ ಸಂಘಗಳ ಸಂಯುಕ್ತಾಶ್ರಯದಲ್ಲಿ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಮಡಿಕೇರಿ ಕ್ಷೇತ್ರ ಶಾಸಕ‌ ಅಪ್ಪಚ್ಚುರಂಜನ್ ಕಾರ್ಯಕ್ರಮ‌ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮಹಿಳೆಯರು ಜಗತ್ತನ್ನೇ ಆಳಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಸಮಯ, ಕುಟುಂಬ, ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವ ಚಾಕಚಕ್ಯತೆ, ತಾಳ್ಮೆ ಹೊಂದಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು ತಮ್ಮ ಛಾಪು ಮೂಡಿಸಿ ಕೀರ್ತಿ‌ ಪತಾಕೆ ಹಾರಿಸಿದ್ದಾರೆ ಎಂದು ಶ್ಲಾಘಿಸಿದರು. ಇಂದಿನ‌ ಕಾಲಘಟ್ಟದ ಮಹಿಳೆಯರು ತಮ್ಮ ಮನೆಯಲ್ಲಿ ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗುವ ಗುಣ ಅಳವಡಿಸಿಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.
ಜಿಪಂ ಮಾಜಿ ಸದಸ್ಯೆ ಕೆ.ಪಿ.ಚಂದ್ರಕಲಾ ಮಾತನಾಡಿ, ಇಂದಿಗೂ‌ ಕೂಡ ಪುರುಷರು ಪ್ರಾಧಾನ್ಯತೆ ವಹಿಸಿರುವುದು ಕಂಡುಬರುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಸಮಾನತೆ ಎಂಬುದು ಕೇವಲ ಹೆಸರಿಗೆ ಎಂಬಂತೆ ಭಾಸವಾಗುತ್ತಿದೆ. ಇಂದಿಗೂ‌ ಮಹಿಳೆ ಹಲವು ವಿಚಾರಗಳಲ್ಲಿ‌ ನಲುಗಿ ಕಣ್ಣೀರಿಡುತ್ತಿದ್ದಾರೆ ಎಂದರು.
ಸ್ತ್ರೀ ಶಕ್ತಿ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷೆ ರೆಹನಾ ಸುಲ್ತಾನ್ ಮಾತನಾಡಿದರು. ಕುಟುಂಬ ನಿರ್ವಹಣೆಯೊಂದಿಗೆ ಮಹಿಳೆಯರು ಸಮಾಜಮುಖಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮಹಿಳೆಯರಿಗೆ ಸಹಾನುಭೂತಿಯ ಅವಶ್ಯಕತೆಯಿಲ್ಲ. ಆಕೆ ಸಬಲರಾಗಲು ಅಗತ್ಯ ಸಹಕಾರ ದೊರೆಯುವಂತಾಗಬೇಕಿದೆ ಎಂದರು.

ಕೂಡುಮಂಗಳೂರು ಗ್ರಾಪಂ ಅಧ್ಯಕ್ಷೆ ಇಂದಿರಾ ರಮೇಶ್,ಸದಸ್ಯರಾದ ಕೆ.ಕೆ.ಭೋಗಪ್ಪ, ಶಶಿಕಲಾ, ಶಿವಮ್ಮ ಗಣೇಶ್, ದೊಡ್ಡಮ್ಮ ತಾಯಿ ದೇವಾಲಯ ಸೇವಾ ಸಮಿತಿ ಅಧ್ಯಕ್ಷ ಪವನ್ ಕುಮಾರ್, ಒಕ್ಕೂಟದ ತಾಲೂಕು ಅಧ್ಯಕ್ಷೆ ಎಂ.ಕೆ.ಸುಮತಿ, ಕಾರ್ಯದರ್ಶಿ ಹೇಮಲತಾ, ಪ್ರಮುಖರಾದ ವೀಣಾ ಪವನ್, ಗಣೇಶ್ ಸೇರಿದಂತೆ ಸದಸ್ಯರು ಇದ್ದರು.ಕಾರ್ಯಕ್ರಮದಲ್ಲಿ ಸಾಧಕ ಮಹಿಳೆಯರು, ವಿದ್ಯಾರ್ಥಿನಿಯನ್ನು ಸನ್ಮಾನಿಸಿ ಗೌರವಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!