ಕುಶಾಲನಗರ, ಮಾ 17: ಬಿಜೆಪಿಯ ಈಶ್ವರಪ್ಪನವರು ಅಲ್ಲಾ ಹಾಗೂ ಅಜ಼ಾನ್ ನ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ನೀಡಿ, ಮುಸ್ಲಿಂ ಸಮುದಾಯವನ್ನು ಅಪಮಾನಿಸಿದ್ದಾರೆ ಎಂದು ಆರೋಪಿಸಿ, ಕುಶಾಲನಗರದಲ್ಲಿ ತಾಲ್ಲೂಕು ಮುಸ್ಲಿಂ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ೪೦% ಕಮಿಷನ್ ದಂಧೆಯ ಮಾಸ್ಟರ್, ಸಮುದಾಯದ ನಡುವೆ ಒಡಕನ್ನು ತರುವ ಈಶ್ವರಪ್ಪ ಎಂಬ ಹೇಳಿಕೆಯ ಪೋಸ್ಟರ್ ಗಳನ್ನು ಹಿಡಿದು, ಶಾಸಕ ಈಶ್ವರಪ್ಪನವರ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಈಶ್ವರಪ್ಪನವರನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಲು, ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ತಾಲ್ಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಅಬ್ದುಲ್ ಕರೀಂ, ಈಶ್ವರಪ್ಪನವರು ಅಲ್ಲಾಹನ ಹಾಗೂ ಅಜ಼ಾನ್ ನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಈಶ್ವರಪ್ಪನವರು, ಅಜ಼ಾನ್ ಎಂದರೇನು ಎಂದು ತಿಳಿಯಬೇಕಾಗಿದೆ. ಈಶ್ವರಪ್ಪನವರಿಗೆ ಈ ರೀತಿಯ ಹೇಳಿಕೆಗಳು, ಹೊಸತೇನಲ್ಲ. ಆದ್ದರಿಂದ ರಾಜ್ಯ ಸರ್ಕಾರ ಇವರನ್ನು ಬಂಧಿಸಬೇಕು. ಇನ್ನು ಮುಂದೆಯೂ ಕೂಡಾ ಇಂತಹ ಹೇಳಿಕೆಗಳನ್ನು ನೀಡಿದಲ್ಲಿ, ಆಹೋರಾತ್ರಿ ಹೋರಾಟವನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಾಲ್ಲೂಕು ಮುಸ್ಲಿಂ ಒಕ್ಕೂಟದ ಉಪಾಧ್ಯಕ್ಷ ಜ಼ಕ್ರಿಯಾ ಮಾತನಾಡಿ, ಈಶ್ವರಪ್ಪನವರ ಹೇಳಿಕೆ ಅತ್ಯಂತ ಖಂಡನೀಯ. ಈಶ್ವರಪ್ಪನವರು ನಾಲಿಕೆ ಚಪಲ ತೀರಿಸಲು ಇಂತಹ ಹೇಳಿಕೆಗಳನ್ನು ನೀಡಿ, ಸಮುದಾಯಗಳ ನಡುವೆ ಒಡಕು ಸೃಷ್ಟಿಸುತ್ತಿದ್ದಾರೆ. ಇದರ ವಿರುದ್ಧ ಸಂಬಂಧ ಪೊಲೀಸ್ ಇಲಾಖೆ ಕ್ರಮಕ್ಕೆ ಮುಂದಾಗಬೇಕು. ಹೇಡಿ ಸಾವರ್ಕರ್ ನ ಮನೋಭಾವನೆಯುಳ್ಳ ನಿಮ್ಮ ಇಂತಹ ಹೇಳಿಕೆಗಳನ್ನು, ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ ಅವರ ಸಂತತಿಗಳಾದ ನಾವು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ನಂತರ ಈಶ್ವರಪ್ಪನವರನ್ನು ಬಂದಿಸುವಂತೆ ಆಗ್ರಹಿಸಿ, ಕುಶಾಲನಗರ ತಾಲ್ಲೂಕು ತಹಸೀಲ್ದಾರ್ ಮೂಲಕ ಸರಕಾರಕ್ಕೆ ತಾಲ್ಲೂಕು ಮುಸ್ಲಿಂ ಒಕ್ಕೂಟದ ವತಿಯಿಂದ ಮನವಿ ಪತ್ರವನ್ನು ನೀಡಲಾಯಿತು.
ಪ್ರತಿಭಟನೆಯಲ್ಲಿ ಕುಶಾಲನಗರ ತಾಲ್ಲೂಕು ಮುಸ್ಲಿಂ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜ಼ಮೀರ್, ಖಜಾಂಜಿ ಇರ್ಫಾನ್ ಹಾಗೂ ಸ್ಥಳೀಯ ಮುಸ್ಲಿಂ ಸಮುದಾಯದ ಮುಖಂಡರುಗಳು, ಎಲ್ಲಾ ಮಸೀದಿ ಕಮಿಟಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಇದ್ದರು.
Back to top button
error: Content is protected !!