ಕಾರ್ಯಕ್ರಮ
ಕುಶಾಲನಗರದಲ್ಲಿ ಕಾವೇರಿ ನದಿಗೆ 142ನೇ ಮಹಾ ಆರತಿ ಕಾರ್ಯಕ್ರಮ
ಕುಶಾಲನಗರ, ಮಾ 10:
ನದಿ, ಪ್ರಕೃತಿ ಆರಾಧನೆ ಮೂಲಕ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಮಾಡುವ ಜವಾಬ್ದಾರಿ ನಿಭಾಯಿಸಬೇಕಾಗಿದೆ ಎಂದು ಕುಶಾಲನಗರ ಗಣಪತಿ ದೇವಾಲಯದ ಪ್ರಧಾನ ಅರ್ಚಕ ಆರ್ ಕೆ ನಾಗೇಂದ್ರ ಬಾಬು ತಿಳಿಸಿದ್ದಾರೆ.
ಅವರು ಕುಶಾಲನಗರ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ಅರ್ಚಕರ ಸಂಘದ ಸಹಯೋಗದೊಂದಿಗೆ ನಡೆದ 142 ನೇ ತಿಂಗಳ ಕಾವೇರಿ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಜಲಮೂಲ, ನದಿ ಮೂಲಗಳನ್ನು ಕಲುಷಿತಗೊಳಿಸಬಾರದು . ಪ್ರತಿಯೊಬ್ಬರು ನದಿಯ ಸ್ವಚ್ಛತೆ ವಿಷಯದಲ್ಲಿ ನಿತ್ಯ ಜಾಗೃತರಾಗಬೇಕಾಗಿದೆ ಎಂದರು.
ಕಳೆದ 12 ವರ್ಷಗಳಿಂದ ನಿರಂತರವಾಗಿ ನದಿ ಸ್ವಚ್ಛತೆಯ ಬಗ್ಗೆ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುವ ಬಳಗದೊಂದಿಗೆ ಎಲ್ಲರೂ ಕೈಜೋಡಿಸುವಂತೆ ಅವರು ಕರೆ ನೀಡಿದರು.
ಶಿವಮೊಗ್ಗದ ಖ್ಯಾತ ಪಾರಂಪರಿಕ ನಾಟಿ ವೈದ್ಯ ಸುಮನ ಮಳಲಗದ್ದೆ ಮಾತನಾಡಿ, ದೈವಿ ಸ್ವರೂಪದ ನದಿ ತೊರೆಗಳನ್ನು ತಾಯಿಯಂತೆ ನೋಡಿಕೊಂಡಲ್ಲಿ ಅದು ನಮ್ಮನ್ನು ಕಾಪಾಡುತ್ತದೆ ಎಂದರು.
ಅರ್ಚಕ ಕೃಷ್ಣಮೂರ್ತಿ ಭಟ್ ಅವರು ಕುಂಕುಮಾರ್ಚನೆ ಅಷ್ಟೋತ್ತರ ನಂತರ ನದಿಗೆ ಮಹಾ ಆರತಿ ಬೆಳಗಿದರು.
ಈ ಸಂದರ್ಭ ಕೊಡಗು ಜಿಲ್ಲಾ ಅರ್ಚಕರ ಮತ್ತು ಪುರೋಹಿತರ ಸಂಘದ ಅಧ್ಯಕ್ಷ ರಾಘವೇಂದ್ರ ಭಟ್, ಕುಶಲ ಅರ್ಚಕರ ಸಂಘದ ಅಧ್ಯಕ್ಷ ಪರಮೇಶ್ವರ ಭಟ್, ಸೋಮಶೇಖರ ಭಟ್, ಆದಿತ್ಯ ಭಟ್, ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ನಿವೃತ್ತ ಅಧಿಕಾರಿ ಕೆಂಚಪ್ಪ, ಗ್ರಾಮೀಣಾಭಿವೃದ್ಧಿ ಸಂಘದ ವಲಯ ಮೇಲ್ವಿಚಾರಕಿ ಪೂರ್ಣಿಮಾ, ಸೇವಾ ಪ್ರತಿನಿಧಿಗಳು ಮತ್ತು ಬಳಗದ ಸದಸ್ಯರು ಇದ್ದರು.