ಕಾರ್ಯಕ್ರಮ
ದಿವಂಗತ ಇ.ಕೆ.ಸುಬ್ರಾಯ ಅವರಿಗೆ ನುಡಿನಮನ ಕಾರ್ಯಕ್ರಮ
ವಾಸವಿ ಮಹಲ್ ಸಭಾಂಗಣದಲ್ಲಿ ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ
ಕುಶಾಲನಗರ, ಜ 23: ಸಮೀಪದ ಹೆಬ್ಬಾಲೆ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾಗಿದ್ದ ದಿವಂಗತ.ಇ.ಕೆ.ಸುಬ್ರಾಯ ಅವರಿಗೆ ಭಾನುವಾರ ಇಲ್ಲಿನ ವಾಸವಿ ಮಹಲ್ ಸಭಾಂಗಣದಲ್ಲಿ ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಭೆಯಲ್ಲಿ ಸುಬ್ರಾಯ ಅವರ ಭಾವಚಿತ್ರಕ್ಕೆ ಪುಷ್ಪಾನಮನ ಸಲ್ಲಿಸಿದ ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎಚ್.ಎಲ್.ವೆಂಕಟೇಶ್ ಮಾತನಾಡಿ, ಹೆಬ್ಬಾಲೆ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ಅಪಾರ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿದ್ದ ಇ.ಕೆ.ಸುಬ್ರಾಯ ಅವರು ಶಿಸ್ತುಬದ್ಧ ಜೀವನ ನಡೆಸುವ ಮೂಲಕ ಅರ್ಪಣಾ ಮನೋಭಾವದಿಂದ ಮಾದರಿ ಮುಖ್ಯೋಪಾಧ್ಯಾಯರಾಗಿದ್ದರು ಎಂದು ಬಣ್ಣಿಸಿದರು.
ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಚ್.ವಿ.ಶಿವಪ್ಪ ಮಾತನಾಡಿ, ಜಿಲ್ಲೆಯ ಗಡಿ ಗ್ರಾಮಗಳ ಅಸಂಖ್ಯಾತ ವಿದ್ಯಾರ್ಥಿಗಳ ಆಶಾಕಿರಣರಾಗಿದ್ದು, ವಿದ್ಯಾರ್ಥಿಗಳಲ್ಲಿ ಬದುಕಿನ ಶಿಕ್ಷಣ, ಶಿಸ್ತು ಬದ್ದ ಜೀವನ ಕಲಿಸಿದ್ದಾರೆ ಎಂದರು.
ಸಾಹಿತಿ ಭಾರದ್ಚಜ್ ಕೆ.ಆನಂದ ತೀರ್ಥ ಮಾತನಾಡಿ,ಹೆಬ್ಬಾಲೆ ಪ್ರೌಢಶಾಲೆಯ ಶೈಕ್ಷಣಿಕ ಪ್ರಗತಿ ಮತ್ತು ಶಾಲೆಯ ಕೀರ್ತಿ ಇ.ಕೆ.ಸುಬ್ರಾಯ ಅವರಿಗೆ ಸಲ್ಲುತ್ತದೆ ಎಂದರು.
ಈ ಸಂದರ್ಭ ಪ್ರೊ.ಎಚ್.ಡಿ.ಲಿಂಗರಾಜು,ನಿವೃತ್ತ ಕೇಂದ್ರೀಯ ತೆರಿಗೆ ಮತ್ತು ಸುಂಕ ಇಲಾಖೆ ಸಹಾಯಕ ಆಯುಕ್ತ ಎಚ್.ಡಿ.ನೀಲಕಂಠರಾಯ,ಜಿ.ಪಂ.ಮಾಜಿ ಅಧ್ಯಕ್ಷ ಎಚ್.ಎಅ್.ಅಶೋಕ್,ಕಸಾಪ ಅಧ್ಯಕ್ಷ ಕೆ.ಎಸ್.ಮೂರ್ತಿ,ಮುಖಂಡರಾದ ಎಚ್.ಎಚ್.ವಿಜಯ,ಕೆ.ವಿ.ಉಮೇಶ್,ಎಚ್.ಟಿ.ಪ್ರಸನ್ನ,ಎಚ್.ಬಿ.ಜಯಮ್ಮ, ಎಚ್.ಎಸ್.ಲೋಕೇಶ್, ಕೆ.ವರದ,ಟಿ.ಜಿ.ಪ್ರೇಮಕುಮಾರ್ ಇದ್ದರು.