ಕಾರ್ಯಕ್ರಮ
ಕುಶಾಲನಗರದ ಫಾತಿಮ ಕಾನ್ವೆಂಟ್ ನಲ್ಲಿ ನಡೆದ ವಿಜ್ಞಾನ ಮೇಳ
ಕುಶಾಲನಗರ, ಜ 05: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯಲು ವಿಜ್ಞಾನ ಮೇಳಗಳು ಪೂರಕವಾಗಿವೆ ಎಂದು ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಗೀತಾ ಅಭಿಪ್ರಾಯಪಟ್ಟರು.
ಕುಶಾಲನಗರದ ಫಾತಿಮ ಕಾನ್ವೆಂಟ್ ನಲ್ಲಿ ನಡೆದ ವಿಜ್ಞಾನ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪ್ರತಿಭಾವಂತರಿದ್ದಾರೆ. ಅವರಲ್ಲಿರುವ ಪ್ರತಿಭೆ ಹೊರತರಲು ಇಂತಹ ವಿಜ್ಞಾನ ಮೇಳ ಆಯೋಜಿಸುವುದು ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ವಿಜ್ಞಾನ ಮೇಳ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬುತ್ತಿದೆ. ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ವಿಜ್ಞಾನದೆಡೆಗೆ ಆಸಕ್ತಿಯನ್ನು ಮೂಡಿಸುತ್ತವೆ’ ಎಂದರು.
ಫಾತಿಮಾ ಕಾನ್ವೆಂಟ್ ಶಾಲೆಯ ವ್ಯವಸ್ಥಾಪಕಿ ಸಿಸ್ಟರ್ ಸ್ಪಂದನ ಮಾತನಾಡಿ, ಮಕ್ಕಳಲ್ಲಿ ಚಿಕ್ಕಂದಿನಲ್ಲಿಯೇ ವಿಜ್ಞಾನ ಚಿಂತನೆಗಳನ್ನು ಮೂಡಿಸುವಂತದ್ದು ಅವಶ್ಯಕತೆ ಇದೆ.
ಮಕ್ಕಳಲ್ಲಿ ಪಾಠ್ಯದ ಜೊತೆಗೆ ಪ್ರಾಯೋಗಿಕವಾಗಿ ಜ್ಞಾನ ದೊರೆಯಲು ವಿಜ್ಞಾನ ಮೇಳ ಮಕ್ಕಳ ಭವಿಷ್ಯಕ್ಕೆ ಸಹಕಾರಿ ಯಾಗುತ್ತದೆ. ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಯುಗದಲ್ಲಿ ವೈಜ್ಞಾನಿಕವಾಗಿ ಮಕ್ಕಳಲ್ಲಿ ಹೆಚ್ಚಿನ ಜ್ಞಾನಮೂಡಿಸಲು ವಿಜ್ಞಾನ ವಸ್ತು ಪ್ರದರ್ಶನ ಆಯೋಜಿಸಲಾಗಿದೆ ಎಂದರು.
ಇದೇ ಸಂದರ್ಭ ವಿದ್ಯಾರ್ಥಿಗಳು ತಯಾರಿಸಿಕೊಂಡು ಬಂದ ವಿಜ್ಞಾನ ವಸ್ತುಗಳ ಮಾದರಿ ಪ್ರದರ್ಶಿಸಿ, ಅವುಗಳಿಗೆ ವಿವರಣೆ ನೀಡಿದರು. ವಿಜ್ಞಾನ ಮೇಳದಲ್ಲಿ ನರ್ಸರಿ ತರಗತಿಯಿಂದ ಪದವಿಪೂರ್ವ ಕಾಲೇಜಿನ ಹಲವಾರು ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಸೌರವ್ಯೂಹ, ಹನಿ ನೀರಾವರಿ, ಅಣೆಕಟ್ಟು, ಮಾನವನ ದೇಹದ ಭಾಗಗಳು ಸೇರಿದಂತೆ ವಿವಿಧ ಮಾದರಿಗಳನ್ನು ಪ್ರದರ್ಶಿಸಿದರು. ನಮಿತಾ ಹಾಗೂ ಹೇಮಾವತಿ ತೀರ್ಪುಗಾರರಾಗಿದ್ದರು. ಈ ಸಂದರ್ಭ ಫಾತಿಮಾ ಕಾನ್ವೆಂಟ್ ಶಾಲೆಯ ಡಾ. ಸಿಸ್ಟರ್ ಜೆಸ್ವಿನಾ, ಸಿಸ್ಟರ್ ತೆರೇಸ್ ಆ್ಯನ್, ಹಾಗೂ ಶಾಲಾ ಆಡಳಿತ ಮಂಡಳಿಯವರು ಮತ್ತು ಶಾಲಾ ಶಿಕ್ಷಕ ವೃಂದದವರು ಹಾಜರಿದ್ದರು.