ಕುಶಾಲನಗರ, ಡಿ 21: ಸನಾತನ ಭಾರತೀಯ ಸಂಸ್ಕ್ರತಿ , ಸಂಪ್ರದಾಯ ಹಾಗೂ ಸದಾಚಾರಗಳಿಗೆ ಯಾವುದೇ ಅಡ್ಡಿ ಆತಂಕ ವಾಗದಂತೆ ಜೋಪಾನಗೊಳಿಸಬೇಕಾದ ಜವಬ್ದಾರಿ ಮಹಿಳೆಯರದ್ದಾಗಿದೆ ಎಂದು ಧಾರ್ಮಿಕ ಚಿಂತಕ
ಚಿ.ನಾ.ಸೋಮೇಶ್ ಕರೆ ಕೊಟ್ಟರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಕುಶಾಲನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಸತ್ಯನಾರಾಯಣ ಪೂಜಾ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಕ್ಕಳಿಗೆ ಉತ್ತಮ ಸಂಸ್ಕಾರಗಳು ಮನೆಯಿಂದಲೇ ಆರಂಭವಾಗಬೇಕಿದೆ. ಆ ನಿಟ್ಟಿನಲ್ಲಿ ಪೋಷಕರು ಮನೆಯಲ್ಲಿ ಮಕ್ಕಳಿಗೆ ಉತ್ತಮ ವಾತಾವರಣ ನಿರ್ಮಾಣ ಮಾಡಿಕೊಡಬೇಕು.
ಮನೆಯೊಳಗೆ ಹಿರಿಯ ಜೀವಗಳನ್ನು ಕಡೆಗಣಿಸದೇ ಅತ್ಯಂತ ಗೌರವದಿಂದ ಕಾಣುವ ಪರಂಪರೆ ಉದ್ದೀಪನಗೊಳ್ಳಬೇಕು. ಸಾಧ್ಯವಾದಷ್ಟು ದೃಶ್ಯ ಮಾಧ್ಯಮಗಳಿಂದ ದೂರವಿದ್ದು ಸತ್ಸಂಗ, ಭಜನೆ ಮೊದಲಾದ ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಾಗಿ ಭಾಗವಹಿಸುವ ಮೂಲಕ ಮನಸ್ಸನ್ನು ಜಾಗೃತಗೊಳಿಸಬೇಕು ಎಂದು ಅವರು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಮಾತನಾಡಿ, ರೈತರು, ಮಹಿಳೆಯರು, ಯುವಕ ಯುವತಿಯರ ಕಲ್ಯಾಣಕ್ಕೆ ಗ್ರಾಮಾಭಿವೃದ್ದಿ ಯೋಜನೆ ಯ ಕೊಡುಗೆ. ನಾವು ಬದುಕುತ್ತಿರುವುದೇ ಧಾರ್ಮಿಕ ನಂಬಿಕೆಯ ತಳಹದಿಯ ಮೇಲೆ. ನಮ್ಮಲ್ಲಿನ ಕೌಟುಂಬಿಕ ವಾತಾವರಣ ವಿದೇಶಿಗರ ಕಣ್ತೆರೆಸಿದೆ.
ಸ್ವಚ್ಛತೆಗೆ ಒತ್ತು ನೀಡುವ ಕೆಲಸ ವಾಗಬೇಕಿದೆ.
ಹಿಂದೂ ಮುಸ್ಲಿಂ ಕ್ರೈಸ್ತ ನಾವೆಲ್ಲರು ಒಂದೇ ಎಂಬ ಸಂದೇಶ ಸಾರುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕುಶಾಲನಗರ ಗಣಪತಿ ದೇವಾಲಯ ಸಮಿತಿ ಅಧ್ಯಕ್ಷ ವಿ.ಎನ್.ವಸಂತಕುಮಾರ್, ಕೊಡಗು ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಎಸ್.ಕೆ.ಸತೀಶ್, ಕೊಡಗು ಜಿಲ್ಲಾ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಬಿ.ಆರ್.ನಾಗೇಂದ್ರಪ್ರಸಾದ್, ಜನಜಾಗೃತಿ ಸಮಿತಿ ಉಪಾಧ್ಯಕ್ಷ ಎಂ.ಎನ್.ಚಂದ್ರಮೋಹನ್ , ಮಹಿಳಾ ಒಕ್ಕೂಟದ ಅಧ್ಯಕ್ಷೆ ಪಾರ್ವತಿ, ಸೋಮವಾರಪೇಟೆ ತಾಲ್ಲೂಕು ಯೋಜನಾಧಿಕಾರಿ ರೋಹಿತ್, ಸತ್ಯ ನಾರಾಯಣಸ್ವಾಮಿ ಪೂಜಾ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷೆ ರಾಧಾ, ಮೇಲ್ವಿಚಾರಕಿ ಪೂರ್ಣಿಮಾ, ಕಾರ್ಯದರ್ಶಿ ನವ್ಯ ಸೇರಿದಂತೆ ಸ್ವಸಹಾಯ ಸಂಘಗಳ ಪದಾಧಿಕಾರಿಗಳು, ಸದಸ್ಯರು ದ್ದರು.
ಕುಶಾಲನಗರ ಸುತ್ತಮುತ್ತಲ ನೂರಾರು ದಂಪತಿಗಳು ಸಾಮೂಹಿಕ ಸತ್ಯ ನಾರಾಯಣ ಪೂಜೆಯಲ್ಲಿ ಪಾಲ್ಗೊಂಡಿದ್ದರು.
Back to top button
error: Content is protected !!