ಕುಶಾಲನಗರ,ನ 12:
ಕುಶಾಲನಗರದ ಐತಿಹಾಸಿಕ ಶ್ರೀ ಗಣಪತಿ ದೇವರ ರಥೋತ್ಸವ ಶನಿವಾರ ಶ್ರದ್ಧಾ ಭಕ್ತಿಯ ಜೊತೆಗೆ ವಿಜೃಂಭಣೆಯಿಂದ ನಡೆಯಿತು. ಕೊರೊನಾ ಕಾರಣಕ್ಕೆ ಕಳೆದ 2 ವರ್ಷ ಸರಳವಾಗಿ ಆಚರಿಸಿದ್ದ ಉತ್ಸವ ಈ ಬಾರಿ ಕಳೆಗಟ್ಟಿತ್ತು.
ರಥೋತ್ಸವ ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ದೇವಾಲಯದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. 11.30ರ ಸುಮಾರಿಗೆ ರಥಕ್ಕೆ ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು. ಪಂಚಾಮೃತ ಅಭಿಷೇಕ, ಏಕವಾರ, ರುದ್ರಾಭಿಷೇಕ, ಪುಷ್ಪಾಲಂಕಾರ, ರಥಪೂಜೆ ಹಾಗೂ ರಥ ಬಲಿ ಕಾರ್ಯಕ್ರಮಗಳು ನಡೆದವು.
ನಂತರ ದೇವಾಲಯದಲ್ಲಿ ಸಾಂಪ್ರದಾಯಿಕ ಆಚರಣೆಗಳನ್ನು ನೆರವೇರಿಸಿ ದೇವರ ಉತ್ಸವಮೂರ್ತಿಯನ್ನು ಮಂಗಳವಾದ್ಯಗಳ ಜೊತೆಗೆ ದೇವಾಲಯದಿಂದ ಹೊರತಂದು ಭಕ್ತರ ಜಯಘೋಷಗಳ ಮಧ್ಯೆ ರಥದಲ್ಲಿ ಕುಳ್ಳರಿಸಲಾಯಿತು. ಇದಕ್ಕೂ ಮೊದಲು ಪಕ್ಕದ ಹೆಬ್ಬಾಲೆ ಮತ್ತು ಆವರ್ತಿಯಿಂದ ಬಂದಿದ್ದ ಗೋವುಗಳಿಗೆ ಗೋಪೂಜೆ ನೆರವೇರಿಸಲಾಯಿತು.
ಇದೇ ವೇಳೆ ಅಯ್ಯಪ್ಪ ಮಾಲಾಧಾರಿಗಳು ಗಣಪತಿ ದೇವಾಲಯದ ಎದುರು ರಸ್ತೆಯುದ್ದಕ್ಕೂ ಕರ್ಪೂರ ಹರಡಿ ಬೆಂಕಿ ಹಚ್ಚಿ ಪ್ರಾರ್ಥನೆ ಸಲ್ಲಿಸಿದರು. ಮಧ್ಯಾಹ್ನ 1 ಗಂಟೆ ಸುಮಾರಿಗೆ ರಥೋತ್ಸವಕ್ಕೆ ಚಾಲನೆ ದೊರೆಯಿತು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಸೇರಿದ್ದ ಭಕ್ತರು ಗಣಪತಿಗೆ ಜಯಘೋಷ ಮೊಳಗಿಸುತ್ತಾ ಉತ್ಸಾಹದಿಂದ ರಥ ಎಳೆದು ಪುನೀತರಾದರು. ಹರಕೆ ಹೊತ್ತಿದ್ದ ಭಕ್ತರು ರಥ ಆಗಮಿಸುವ ವೇಳೆ ರಸ್ತೆಯಲ್ಲಿ ಸಾವಿರಾರು ಈಡುಗಾಯಿ ಒಡೆದು ಭಕ್ತಿ ಪ್ರದರ್ಶಿಸಿದರು. ದೇವಾಲಯ ವ್ಯಾಪ್ತಿಯಲ್ಲಿ ಬಾಳೆಹಣ್ಣು, ಜವನ ಮಾರಾಟ, ಪೈಪೋಟಿಗೆ ಬಿದ್ದಂತೆ ರಥಕ್ಕೆ ಜವನ ಎಸೆಯುವ ದೃಶ್ಯ ಸಾಮಾನ್ಯವಾಗಿತ್ತು.
ಗಣಪತಿ ದೇವಾಲಯದ ಎದುರಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ರಥಬೀದಿಗಾಗಿ ಆಂಜನೇಯ ದೇವಾಲಯದ ತನಕ ರಥವನ್ನು ಎಳೆದುಕೊಂಡು ಹೋಗಲಾಯಿತು.
ಗಣಪತಿ ದೇವಾಲಯದ ಪ್ರಧಾನ ಅರ್ಚಕ ಆರ್.ಕೆ. ನಾಗೇಂದ್ರ ಬಾಬು ನೇತೃತ್ವದಲ್ಲಿ ಪೂಜಾ ವಿದಿ ವಿಧಾನಗಳನ್ನು ನೆರವೇರಿಸಲಾಯಿತು.
ಕುಶಾಲನಗರ ಸುತ್ತಮುತ್ತಲು ಅಲ್ಲದೆ ನೆರೆಯ ಹಾಸನ ಹಾಗೂ ಮೈಸೂರು ಜಿಲ್ಲೆಗಳಿಂದಲೂ ಭಕ್ತರು ಆಗಮಿಸಿ ರಥೋತ್ಸವ ಕಣ್ತುಂಬಿಸಿಕೊಂಡರು. ಭಕ್ತರಿಗೆ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು.
Back to top button
error: Content is protected !!