ಸಭೆ

ಸಮಸ್ಯೆ ಬಗೆಹರಿಸದಿದ್ದಲ್ಲಿ ಆತ್ಮಹತ್ಯೆ ಒಂದೇ ದಾರಿ: ಅರಣ್ಯಾಧಿಕಾರಿ ಬಳಿ ಮಹಿಳೆ ಅಳಲು

ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯಲ್ಲಿ ಮಿತಿಮೀರಿದ‌‌ ಕಾಡಾನೆಗಳ ಹಾವಳಿ‌ ನಿಯಂತ್ರಣ‌ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳ ‌ವಿಶೇಷ ಸಭೆ .

ಕುಶಾಲನಗರ, ಅ 29: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯಲ್ಲಿ ಮಿತಿಮೀರಿದ‌‌ ಕಾಡಾನೆಗಳ ಹಾವಳಿ‌ ನಿಯಂತ್ರಣ‌ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳ ‌ವಿಶೇಷ ಸಭೆ ನಡೆಯಿತು.
ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ ಅಧ್ಯಕ್ಷತೆಯಲ್ಲಿ ಎಸಿಎಫ್ ಎ.ಎ.ಗೋಪಾಲ್ ನೇತೃತ್ವದ ಅರಣ್ಯಾಧಿಕಾರಿಗಳು ಮತ್ತು ಗ್ರಾಮಸ್ಥರ ಸಭೆ ಗ್ರಾಮದ ಹೊಸಪಟ್ಟಣ ಸಮುದಾಯ ಭವನದಲ್ಲಿ ಸಭೆ ನಡೆಯಿತು.
ನಂಜರಾಯಪಟ್ಟಣ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ‌ ಹಾವಳಿ‌ ಮತ್ತು ಅದನ್ನು ತಡೆಗಟ್ಟಲು ಅರಣ್ಯ ಇಲಾಖೆ ಕೈಗೊಂಡ‌ ನಿಯಂತ್ರಣ ಕಾಮಗಾರಿಗಳಿಂದ ಉಂಟಾಗಿರುವ ಅನಾನುಕೂಲಗಳ ಬಗ್ಗೆ ಅಧ್ಯಕ್ಷರಾದ ಸಿ.ಎಲ್.ವಿಶ್ವ ಅಧಿಕಾರಿಗಳ ಗಮನ ಸೆಳೆದರು. ಗ್ರಾಪಂ ವ್ಯಾಪ್ತಿಯ‌ ನದಿ ತಟದಲ್ಲಿ ಅರಣ್ಯ ಇಲಾಖೆ ವತಿಯಿಂದ ಕೈಗೊಂಡ ರೈಲ್ವೇ‌ ಬ್ಯಾರಿಕೆಡ್ ಅಳವಡಿಕೆ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು ಕಾಡಾನೆಗಳನ್ನು ತಡೆಯುವಲ್ಲಿ ಕೆಲವೆಡೆ ಈ ಯೋಜನೆ ವಿಫಲವಾಗಿದೆ ಎಂದು ಆರೋಪಿಸಿದರು. ಕಾಮಗಾರಿ ಅಪೂರ್ಣವಾಗಿದೆ. ರೈಲ್ವೇ ಕಂಬಿಗಳನ್ನು ದಾಟಿ ಕಾಡಾನೆಗಳು ಗ್ರಾಮಕ್ಕೆ‌ ಸಲೀಸಾಗಿ‌ ನುಗ್ಗಿ ಬೆಳೆ ಹಾನಿ ಮಾಡುತ್ತಿವೆ. ಸೋಲಾರ್ ಫೆನ್ಸ್ ಗಳು ಕೂಡ ಪರಿಣಾಮಕಾರಿಯಾಗಿಲ್ಲ. ದಾಸವಾಳ ಗ್ರಾಮ ವ್ಯಾಪ್ತಿಯಲ್ಲಿ ಆರೇಳು ಮನೆಗಳ‌ ಮುಂದೆಯೇ ರೈಲ್ವೇ ಕಂಬಿಗಳನ್ನು ಅಳವಡಿಸಿರುವ ಕಾರಣ‌ ನಿವಾಸಿಗಳು ತೀವ್ರ ಅನಾನುಕೂಲ ಅನುಭವಿಸುತ್ತಿದ್ದಾರೆ. ಕೋಟ್ಯಾಂತರ ರೂಗಳ ಯೋಜನೆ ವೈಫಲ್ಯಕ್ಕೆ‌ ಅರಣ್ಯ ಇಲಾಖೆ ಮೇಲಧಿಕಾರಿಗಳೇ ಸಂಪೂರ್ಣ ಹೊಣೆ. ಕೆಳಹಂತದ ಅಧಿಕಾರಿಗಳಿಂದ ಸೂಕ್ತ‌ ಮಾಹಿತಿ‌ ಪಡೆಯದೆ ಬೇಕಾಬಿಟ್ಟಿ ಕಾಮಗಾರಿ ಕೈಗೊಂಡ‌ ಕಾರಣ ರೈಲ್ವೇ ಕಂಬಿ ಅಳವಡಿಕೆ ಯೋಜನೆ ವೈಫಲ್ಯ ಕಂಡಿದೆ ಎಂದು ಆರೋಪಿಸಿದರು.
ರೈಲ್ವೇ ಕಂಬಿ‌ ಅಳವಡಿಕೆ ಕಾಮಗಾರಿ ಪೂರ್ಣಗೊಳ್ಳುವವರೆಗೆ ಕಾಡಾನೆಗಳು ಲಗ್ಗೆಯಿಡುವ ಮಾರ್ಗದಲ್ಲಿ‌ ಆದಷ್ಟು ಕಂದಕಗಳನ್ನು‌ ನಿರ್ಮಿಸಲು ಅವರು ಸಲಹೆ ನೀಡಿದರು.
ಗ್ರಾಪಂ ಸದಸ್ಯ ಆರ್.ಕೆ.ಚಂದ್ರ ಮಾತನಾಡಿ, ರಂಗಸಮುದ್ರ ವ್ಯಾಪ್ತಿಯಲ್ಲಿ ಹೆಚ್ಚಾಗಿ ಪಜಾತಿ, ಪಪಂಗಡದವರಿದ್ದು ಕೃಷಿಯನ್ನೇ ಅವಲಂಬಿಸಿದ್ದಾರೆ. ಇರುವ ಸಣ್ಣ ಪ್ರಮಾಣದ ಜಮೀನಿನಲ್ಲಿ ‌ಕೃಷಿ ಕೈಗೊಳ್ಳಲು ಕಾಡಾನೆಗಳ ಹಾವಳಿ ಅಡ್ಡಿಯಾಗಿದೆ. ಆದ್ದರಿಂದ ಚಿಕ್ಲಿಹೊಳೆಯ ಎಡದಂಡೆ, ಬಲದಂಡೆ ನಾಲೆ ವ್ಯಾಪ್ತಿಯಲ್ಲಿ ‌ರೈಲ್ವೇ ಕಂಬಿ‌ ಅಳವಡಿಕೆ ಅಥವಾ ಕಂದಕ‌ ನಿರ್ಮಿಸಿ‌ ಕಾಡಾನೆಗಳ ಹಾವಳಿ ನಿಯಂತ್ರಿಸಲು ಕೋರಿ ಗ್ರಾಮಸ್ಥರ ಪರವಾಗಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಸದಸ್ಯ ಮಾವಾಜಿ ರಕ್ಷಿತ್ ಮಾತನಾಡಿ, ಹಲವೆಡೆ ಆನೆ ಕಂದಕದಲ್ಲಿ ಹೂಳು ತುಂಬಿದ್ದು ಹೂಳು ತೆಗೆಯುವ ಕೆಲಸವಾಗಬೇಕು. ಕೆಲವೆಡೆ ಮನೆಗೆ ಒತ್ತಿಕೊಂಡಂತೆ ಟ್ರಂಚ್ ನಿರ್ಮಿಸಿರುವ ಕಾರಣ ಮಳೆಗೆ ಮನೆಗಳು ಜರಿಯುತ್ತಿವೆ.ಈ‌ ನಿಟ್ಟಿನಲ್ಲಿ ರಿಟೆನಿಂಗ್ ವಾಲ್ ನಿರ್ಮಿಸುವ ಅಗತ್ಯವಿದೆ ಎಂದು ಕೋರಿದರು.
ಇದೇ ಸಂದರ್ಭ ದಾಸವಾಳ ಗ್ರಾಮದಲ್ಲಿ ಮನೆ ಮುಂದೆ ರೈಲ್ವೇ‌ ಬ್ಯಾರಿಕೆಡ್ ಅಳವಡಿಸಿರುವ ಕಾರಣ ವಾಹನವನ್ನು ಹೊರತೆಗೆಯಲು ಸಾಧ್ಯವಾಗದೆ ಬೆಳೆದ ಬೆಳೆಯನ್ನು ಸಾಗಿಸಲು ಕಷ್ಟವಾಗಿದೆ. ಕೂಡಲೆ ಈ ಸಮಸ್ಯೆ ಬಗೆಹರಿಸದಿದ್ದಲ್ಲಿ ಅರಣ್ಯ ಇಲಾಖೆ ಕಛೇರಿ ಮುಂದೆ ಆತ್ಮಹತ್ಯೆಗೆ ಶರಣಾಗುವುದಾಗಿ ನೊಂದ ವೃದ್ದ ಮಹಿಳೆ ಲಲಿತಮ್ಮ ತಮ್ಮ ಸಂಕಟ ಹೊರಹಾಕಿದರು.
ನಂತರ ಮಾತನಾಡಿದ ಎಸಿಎಫ್ ಎ.ಎ.ಗೋಪಾಲ್, ರೈತಾಪಿ ವರ್ಗ ಜೀವದ ಬಗ್ಗೆ ಆದಷ್ಟು ಎಚ್ಚರವಹಿಸಬೇಕಿದೆ.‌ ಸರಕಾರದ ನಿರ್ದೇಶನದಂತೆ ಅರಣ್ಯ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ಪ್ರಕೃತಿ‌ ಮತ್ತು ವನ್ಯಜೀವಿಗಳ ಮುಂದೆ ಮಾನವರು ಏನೇನೂ ಅಲ್ಲ. ಕಾಡಾನೆಗಳನ್ನು
ಘಾಸಿಗೊಳಿಸುವ ಯೋಜನೆ‌ ನಿಷೇದಿಸಿರುವ ಕಾರಣ ರೈಲ್ವೇ ಕಂಬಿ‌ಅಳವಡಿಕೆ, ಸೋಲಾರ್ ಫೆನ್ಸ್ ಮತ್ತಿತರ ಯೋಜನೆಗಳನ್ನು‌ ಜಾರಿಗೆ ತರಲಾಗಿದೆ. ಆದರೂ ಕೂಡ ಕಾಡಾನೆಗಳು ಕಾಡಿನಿಂದ‌ ನಾಡಿಗೆ ಬರುವುದು ಹೆಚ್ಚಾಗಿದೆ. ಕಾಡಿನ ಆಹಾರಕ್ಕಿಂತ ಗ್ರಾಮಗಳಲ್ಲಿ ರೈತರು ಬೆಳೆಯುವ ಬೆಳೆಗಳ‌ ಬಗ್ಗೆ ಆಕರ್ಷಣೆಗೊಂಡಿದೆ. ಅರಣ್ಯ ದಲ್ಲಿ ಕಾಡಾನೆಗಳ ಆಹಾರಕ್ಕಾಗಿ ಅಗತ್ಯ ಪ್ರಮಾಣದಲ್ಲಿ ಆಹಾರ ಉತ್ಪಾದನೆಗೆ ಬಿದಿರು ಬೆಳೆಯಲು 150 ಹೆಕ್ಟೇರ್ ಪ್ರದೇಶದಲ್ಲಿ ಸಿದ್ದತೆ ನಡೆಸಲಾಗಿತ್ತು. ಆದರೆ ಆರಂಭದಲ್ಲಿಯೇ ಗಿಡಗಳನ್ನು ಕಾಡಾನೆಗಳು ಅರ್ಧಕರ್ಧ ಹಾನಿ‌ ಮಾಡಿವೆ. ಈ ಭಾಗದ ಬೆಟಗೇರಿಯಲ್ಲಿ ಮುಂದಿನ ದಿನಗಳಲ್ಲಿ ಆನೆ ಕಾರಿಡಾರ್‌ ನಿರ್ಮಿಸುವ ಸಂಬಂಧ ಚಿಂತನೆ ಹರಿಸಲಾಗಿದೆ. ಸೋಲಾರ್ ಯೋಜನೆ ಶೇ 90 ರಷ್ಟು ಕಾರ್ಯನಿರ್ವಹಿಸುತ್ತಿದೆ. ಸರಕಾರದ‌ ಮಾರ್ಗಸೂಚಿಯಂತೆಯೇ ರೈಲ್ವೇ ಬ್ಯಾರಿಕೆಡ್ ಅಳವಡಿಕೆ ‌ಮಾಡಬೇಕಾಗಿದ್ದು ಎಲ್ಲವೂ‌ ಟೆಂಡರ್ ಪ್ರೋಸೆಸ್ ನಂತೆ ನಡೆಯಬೇಕಿದೆ. ಗ್ರಾಮಸ್ಥರಿಗೆ ಉಂಟಾಗಿರುವ ಅನಾನುಕೂಲಗಳನ್ನು ಸರಿಪಡಿಸಲು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ವಿ.ಶಿವರಾಂ, ಗ್ರಾಪಂ ಪಿಡಿಒ ರಾಕೇಶ್, ಡಿ ಆರ್ ಎಫ್ ಒ ಕೂಡಕಂಡಿ ಸುಬ್ರಾಯ, ಅರಣ್ಯ ರಕ್ಷಕ ರವಿ ಉತ್ನಾಳ್‌ ಮತ್ತು ಗ್ರಾಮಸ್ಥರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!