ಸುದ್ದಿಗೋಷ್ಠಿ

ಕುಶಾಲನಗರದ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿದ್ಧೋದ್ದೇಶ ಸಹಕಾರ ಸಂಘದಿಂದ ಸ.ಪ.ಪೂ ಕಾಲೇಜಿಗೆ ಕಂಪ್ಯೂಟರ್ ಲ್ಯಾಬ್ ಕೊಡುಗೆ

ಕುಶಾಲನಗರ, ಜ 01: ಕುಶಾಲನಗರದ
ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿದ್ಧೋದ್ದೇಶ ಸಹಕಾರ ಸಂಘದಿಂದ ಸಮುದಾಯಿಕ ಪ್ರಯೋಜನ ವಿದ್ಯಾಯೋಜನೆ ( ಐಪಿ ಎಂಸಿ ಎಸ್) ಅಡಿಯಲ್ಲಿ ಕುಶಾಲನಗರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಿರ್ಮಿಸಿರುವ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ ಸಮಾರಂಭ ಜನವರಿ 3 ರ ಶನಿವಾರ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಟಿ. ಆರ್. ಶರವಣ ಕುಮಾರ್ ತಿಳಿದ್ದಾರೆ.
ಕಾಲೇಜಿನ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘವು ಹಲವಾರು ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಈವರೆಗೆ ಹಮ್ಮಿಕೊಂಡು ಬಂದಿದೆ. ಇದೀಗ ಕುಶಾಲನಗರ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಂಘದ ಮೂಲಕ ಸುಮಾರು 12 ಲಕ್ಷ ರೂಪಾಯಿಗಳ ವೆಚ್ಚದಲ್ಲಿ 21 ಕಂಪ್ಯೂಟರ್ ಗಳು, ಮತ್ತು ಉತ್ತಮ ಗುಣಮಟ್ಟದ 22 ಟೇಬಲ್ ಗಳು 44 ಕುರ್ಚಿಗಳು ಹಾಗೂ ಇಂಟ್ರೋ ಅಲೈವ್ ಮಲ್ಟಿಪರ್ಪಸ್ ಬೋರ್ಡ್, ತರಬೇತಿ ನೀಡುವ ಆಧ್ಯಾಪಕರಿಗೆ ಉತ್ತಮ ಗುಣಮಟ್ಟದ ದೊಡ್ಡ ಟೇಬಲ್, ಯುಪಿಎಸ್, ವೈಫೈ, ವೂಫರ್ ಕೊಡುಗೆ ನೀಡಲಾಗಿದೆ.
ಬಡ ಮಧ್ಯಮ ವರ್ಗದ ಮಕ್ಕಳಿಗೆ ಇದರಿಂದ ಅನುಕೂಲವಾಗಲಿದೆ ಎಂದು ತಿಳಿಸಿದ ಅವರು ವಿದ್ಯಾರ್ಥಿಗಳು ಉತ್ತಮ ತಂತ್ರಜ್ಞಾನ ಪಡೆದುಕೊಳ್ಳಲು ಸಹಾಯವಾಗಲಿದೆ. ಈ ಎಲ್ಲಾ ಕಂಪ್ಯೂಟರ್ ಗಳ ತಾಂತ್ರಿಕ ನಿರ್ವಹಣೆಯನ್ನು ನಮ್ಮ ಸಂಘ ವಹಿಸಲಿದೆ ಎಂದರು. ಈ ಪ್ರಯೋಗಾಲಯವನ್ನು
ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಅವರು ದಿನಾಂಕ 3 ರಂದು ಬೆಳಗ್ಗೆ 11 ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉದ್ಘಾಟನೆ ಮಾಡಲಿದ್ದಾರೆ.
ಸಂಘದ ಅಧ್ಯಕ್ಷ ಟಿ. ಆರ್. ಶರವಣ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ. ಪಿ. ಶಶಿಧರ್, ಶಕ್ತಿ ದಿನಪತ್ರಿಕೆ ಸಂಪಾದಕ ಜಿ.ಚಿದ್ವಿಲಾಸ್, ಕಾಲೇಜಿನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಸ್. ಎನ್. ರಾಜೇಂದ್ರ, ಜಿಲ್ಲಾ ಪದವಿಪೂರ್ವ ಇಲಾಖೆಯ ಪ್ರಭಾರಿ ಉಪ ನಿರ್ದೇಶಕ ಪಿ.ಆರ್. ವಿಜಯ್, ಪ್ರಭಾರ ಪ್ರಾಂಶುಪಾಲೆ ಬಿ.ಜಿ. ಶಾಂತಿ ಮತ್ತು ಆಡಳಿತ ಮಂಡಳಿ ನಿರ್ದೇಶಕರುಗಳು ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಕಾಲೇಜಿನ ಪ್ರಭಾರಿ ಪ್ರಾಂಶುಪಾಲೆ ಶಾಂತಿ ಮಾತನಾಡಿ, ನಮ್ಮ ಕಾಲೇಜಿಗೆ ಇದೊಂದು ಅಪರೂಪದ ಉಡುಗೊರೆಯಾಗಿ ಲಭಿಸಿದೆ.
ಇದರಿಂದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಡ- ಮಧ್ಯಮ ವರ್ಗದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಾಯವಾಗಲಿದೆ ಅದಕ್ಕಾಗಿ ಸಂಘದ ಆಡಳಿತ ಮಂಡಳಿಗೆ ಕೃತಜ್ಞತೆಗಳು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಸಂಘದ ನಿರ್ದೇಶಕರಾದ ರಾಮಕೃಷ್ಣಯ್ಯ, ಶಿವಪ್ರಕಾಶ್, ನಾರಾಯಣ, ಸುರೇಶ್ ಕುಮಾರ್, ಶರತ್, ಅಮೃತ್, ಸುರೇಶ್, ಕೃತಿಕಾ ಪೊನ್ನಪ್ಪ ಮತ್ತು ಕೀರ್ತಿ ಲಕ್ಷ್ಮಿ ಸಹ ನಿರ್ದೇಶಕರಾದ ಆರ್. ಕೆ.ನಾಗೇಂದ್ರ ಬಾಬು ಸೇರಿದಂತೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಡಿ. ಶ್ರೀಜೇಶ್ , ವ್ಯವಸ್ಥಾಪಕ ಆರ್. ರಾಜ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!