ಕುಶಾಲನಗರ, ಅ 01: ಹೆಣ್ಣು ಮಕ್ಕಳು ಪ್ರತಿ ಮನೆಗಳ ಮಾನ ಮರ್ಯಾದೆ, ಗೌರವ ಹಾಗು ಸಾಮಾಜಿಕ ಸಂಸ್ಕ್ರತಿಗಳನ್ನು ಉಳಿಸಿ ಬೆಳೆಸುವ ರಾಯಭಾರಿಗಳು ಎಂದು ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಅಭಿಪ್ರಾಯಪಟ್ಟರು.
ಕುಶಾಲನಗರದ ಕನ್ನಡ ಭಾರತಿ ಪಿಯು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಶಿಬಿರದ ವತಿಯಿಂದ ಕೊಪ್ಪಾದ ಮಿಳಿಂದ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಪಾಲ್ಗೊಂಡು ಗ್ರಾಮೀಣಾಭಿವೃದ್ದಿಯಲ್ಲಿ ಸಾಂಸ್ಕ್ರತಿಯ ಪರಂಪರೆಯ ಮಹತ್ವದ ಕುರಿತು ಮಾತನಾಡಿದ ಅವರು, ಇಂದಿನ ಆಧುನಿಕ ಯುಗದಲ್ಲಿ ಮಾನವ ಸಂಬಂಧಗಳು ಕ್ಷೀಣವಾಗುತ್ತಿವೆ. ಹಿಂದೆ ಪೂರ್ವಜರಲ್ಲಿದ್ದ ಸಾಮಾಜಿಕ ಬದ್ಧತೆ, ಪರಸ್ಪರರಲ್ಲಿದ್ದ ಶುದ್ಧ ಭಾವನೆಗಳು ಇಂದು ಮರೆಯಾಗುತ್ತಿವೆ ಎಂದು ವಿಷಾದಿಸಿದರು.
ಪರಿಸರ ಸಂರಕ್ಷಣೆ ಕುರಿತು ಉಪನ್ಯಾಸ ನೀಡಿದ ಕೂಡ್ಲೂರು ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಗಿಡ ಮರಗಳನ್ನು ಹೆಚ್ಚಾಗಿ ನೆಟ್ಟು ಬೆಳೆಸುವ ಮೂಲಕ ಅಂತರ್ಜಲದ ಗುಣಮಟ್ಟವನ್ನು ಸಂರಕ್ಷಿಸಬೇಕು. ಪರಿಸರ ಹಾಗು ಪಕ್ಷಿ ಪ್ರಾಣಿಗಳ ಆರೋಗ್ಯಕ್ಲೆ ಮಾರಕವಾಗುವ ಪಟಾಕಿಗಳನ್ನು ಬಳಸಬಾರದು. ಹಾಗೆಯೇ ಶಿಬಿರದಲ್ಲಿ ಪಾಲ್ಗೊಂಡಿದ್ದ ಸಂಪನ್ಮೂಲ ವ್ಯಕ್ತಿಗಳು ನೀಡಿದ
ಉತ್ತಮ ಮಾಹಿತಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ನಾಯಕರಾಗಲು ವಿದ್ಯಾರ್ಥಿಗಳಿಗೆ ಕರೆಕೊಟ್ಟರು.
ಅಧ್ಯಕ್ಷತೆ ವಹಿಸಿದ್ದ ಕುಶಾಲನಗರ ಕನ್ನಡ ಭಾರತಿ ಪದವಿ ಕಾಲೇಜಿನ ಪ್ರಾಂಶುಪಾಲ ಎನ್.ರುದ್ರಾಚಾರ್ ಮಾತನಾಡಿ, ಗ್ರಾಮಗಳ ಜನ ಜೀವನ ಹಾಗು ಅಲ್ಲಿನ ಸಂಸ್ಕ್ರತಿಗಳನ್ನು ಅರಿಯುವ ಮೂಲಕ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ಕೆಲಸ ಇಂದಿನ ವಿದ್ಯಾರ್ಥಿ ಸಮೂಹದಿಂದ ಆಗಬೇಕೆಂಬ ಮಹುದುದ್ದೇಶದಿಂದ ಇಂತಹ ಶಿಬಿರಗಳು ಸಹಕಾರಿ ಎಂದರು.
ಶಿಬಿರಾಧಿಕಾರಿ ಸಿ. ಮಂಜುನಾಥ್, ಕಾಲೇಜಿನ ಉಪನ್ಯಾಸಕರಾದ ಡಾ.ನಾಗೇಂದ್ರ ಸ್ವಾಮಿ, ದರ್ಶಿನಿ, ಪ್ರಿಯ, ಆಶಾ, ರಶ್ಮಿ, ಪ್ರವಿತ, ರಾಮಚಂದ್ರ, ಮಿಳಿಂದ ವಿದ್ಯಾಸಂಸ್ಥೆಯ ಉಪನ್ಯಾಸಕಿ ಎ.ಎಂ.ಮಣಿಕುಮಾರಿ, ನಾಜಿರಾ ಇದ್ದರು.
ಶಿಬಿರಾರ್ಥಿ ಸಲ್ಮಾನ್ ಸ್ವಾಗತಿಸಿ, ವಿನುತ ನಿರೂಪಿಸಿದರು. ರಕ್ಷಿತ ವಂದಿಸಿದರು.
Back to top button
error: Content is protected !!