ಸಭೆ
ಗೊಂದಿಬಸವನಹಳ್ಳಿ ಗ್ರಾಮದ ಅರಣ್ಯ ಹಕ್ಕು ಸಮಿತಿಯ ಗ್ರಾಮಸಭೆ


ಕುಶಾಲನಗರ, ಸೆ 29: ಮುಳ್ಳುಸೋಗೆ ಗ್ರಾಪಂ ವ್ಯಾಪ್ತಿಯ ಗೊಂದಿಬಸವನಹಳ್ಳಿ ಗ್ರಾಮದ ಅರಣ್ಯ ಹಕ್ಕು ಸಮಿತಿಯ ಗ್ರಾಮಸಭೆ ಸಮಿತಿ ಅಧ್ಯಕ್ಷ ಗೋವಿಂದಪ್ಪ ಅವರ ಅಧ್ಯಕ್ಷತೆಯಲ್ಲಿ ಗ್ರಾಮದ ಸರಕಾರಿ ಶಾಲಾ ಆವರಣದಲ್ಲಿ ನಡೆಯಿತು.ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ವಾಸವಿರುವ ನಿವಾಸಿಗಳು ತಮ್ಮ ಜಾಗಗಳಿಗೆ ಖಾತೆ ಪಡೆದುಕೊಳ್ಳುವ ಸಂಬಂಧ ಸಲ್ಲಿಸಿದ ಅರ್ಜಿಗಳ ಬಗ್ಗೆ ಚರ್ಚೆ ನಡೆಯಿತು. ಸರಕಾರದ ಸೂಚನೆಯಂತೆ ವಿಭಾಗೀಯ ಮಟ್ಟಕ್ಕೆ ಸಲ್ಲಿಸಿದ 158 ಅರ್ಜಿದಾರರ ಪೈಕಿ ಸೂಕ್ತ ದಾಖಲಾತಿಗಳನ್ನು ಸಲ್ಲಿಸಿದ 9 ಮಂದಿ ಪಪಂಗಡದವರಿಗೆ ಹಕ್ಕು ಪತ್ರ ಮಂಜೂರಾಗಿರುವ ಬಗ್ಗೆ ಸಮಿತಿ ಕಾರ್ಯದರ್ಶಿಯಾದ ಗ್ರಾಪಂ ಪಿಡಿಒ ಸುಮೇಶ್ ಸಭೆಗೆ ಮಾಹಿತಿ ಒದಗಿಸಿದರು. ಪ.ಪಂಗಡ, ಪ.ಜಾತಿ ಮತ್ತು ಸಾಮಾನ್ಯ ವರ್ಗದವರಿಗೆ ಪ್ರತ್ಯೇಕವಾಗಿ ನಿಗದಿಪಡಿಸಿರುವ ಮಾನದಂಡಗಳ ಅನುಗುಣವಾಗಿ ಒದಗಿಸಬೇಕಾದ ದಾಖಲೆಗಳ ವಿವರಗಳನ್ನು ಅವರು ಸಭೆಗೆ ಮಂಡಿಸಿದರು. ಸೂಕ್ತ ದಾಖಲಾತಿ, ಸಾಕ್ಷ್ಯಾಧಾರಗಳ ಮೇರೆಗೆ ಆಯ್ಕೆಯಾದವರಿಗೆ ಶೀಘ್ರದಲ್ಲಿ ಹಕ್ಕುಪತ್ರ ವಿತರಿಸಲಾಗುವುದು ಎಂದು ತಿಳಿಸಿದರು. ಅಗತ್ಯ ದಾಖಲೆಗಳ ಪೈಕಿ ಪೂರ್ವಜರಿಗೆ ಸೇರಿದ 1930 ರ ಇಸವಿಯ ಹಿಂದಿನ ದಾಖಲಾತಿಗಳನ್ನು ಒದಗಿಸಲು ಕಷ್ಟವಾಗಿದ್ದು ಇದಕ್ಕೆ ಪಯಾರ್ಯ ಮಾರ್ಗ ಸೂಚಿಸುವಂತೆ ಕೆಲವು ಗ್ರಾಮಸ್ಥರು ಅಸಮಾಧಾನ ಹೊರಹಾಕಿದರು. ಇರುವಷ್ಟು ದಾಖಲೆಗಳನ್ನು ಒದಗಿಸಲಾಗಿದೆ. ಆದರೂ ಕಳೆದ ಮೂರು ದಶಕಗಳ ಬೇಡಿಕೆ ಈಡೇರಿಲ್ಲ ಎಂದು ಕೆಲವು ಗ್ರಾಮಸ್ಥರು ಆಕ್ರೋಷ ವ್ಯಕ್ತಪಡಿಸಿದರು. 158 ಅರ್ಜಿಗಳನ್ನು ವಿಭಾಗೀಯ ಮಟ್ಟಕ್ಕೆ ಪಂಚಾಯ್ತಿಯಿಂದ ಅನುಮೋದಿಸಿ ಕಳುಹಿಸಿಕೊಡಲಾಗಿದೆ. ಆದರೆ ಸಮರ್ಪಕ ದಾಖಲಾತಿಗಳು ಇಲ್ಲದೆ ಇರುವ ಕಾರಣ ಉಳಿದ ಮಂದಿಯ ಅರ್ಜಿಗಳು ಮಾನ್ಯವಾಗದಿರುವ ಬಗ್ಗೆ ಪಿಡಿಒ ಸಭೆಯ ಗಮನಕ್ಕೆ ತಂದರು.