ತಂಬಾಕು ಬೆಳೆಯಲ್ಲಿ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕ್ಷೇತ್ರೋತ್ಸವ.
ಕುಶಾಲನಗರ, ಸೆ 18: ರೈತರು ಶೂನ್ಯ ಬಂಡವಾಳದ ಬೆಳೆಗಳ ಉತ್ಪಾದನೆಯಲ್ಲಿ ರಸಾಯನಿಕ ಬದಲಿಗೆ ನೈಸರ್ಗಿಕ ರಸಗೊಬ್ಬರ ಬಳಸಬೇಕು ಎಂದು ರಾಮನಾಥಪುರ ತಂಬಾಕು ಮಂಡಳಿ ಅಧೀಕ್ಷಕ ಐಸಾಕ್ ಸ್ವರ್ಣದತ್ ಸಲಹೆ ನೀಡಿದರು. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ವಾಣಿಜ್ಯ ಇಲಾಖೆ, ತಂಬಾಕು ಮಂಡಳಿ,ಹರಾಜು ಮಾರುಕಟ್ಟೆ ರಾಮನಾಥಪುರ ಇವರ ಸಹಯೋಗದಲ್ಲಿ ಚಿಕ್ಕನಾಯಕನ ಹೊಸಳ್ಳಿ ಗ್ರಾಮದ ರೈತ ಶೇಷಪ್ಪ ಅವರ ಮನೆ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ತಂಬಾಕು ಬೆಳೆಯಲ್ಲಿ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶೂನ್ಯ ಬಂಡವಾಳ ಕೃಷಿ ಎಂದರೆ ದುಡ್ಡು ಖರ್ಚು ಮಾಡದೆ ಬೆಳೆ ಬೆಳೆಯುವುದು. ಬಿತ್ತನೆ ಬೀಜ, ಕೀಟನಾಶಕ ಎಂದು ಸಬ್ಸಿಡಿಯಲ್ಲಿ ದೊರೆಯುವ ರಸಗೊಬ್ಬರಕ್ಕಾಗಿ ಸರದಿಯಲ್ಲಿ ಕಾದು ನಿಂತು ಹಣ ಖರ್ಚು ಮಾಡಿ ಬೆಳೆ ಬೆಳೆಯುವುದರ ಬದಲು ಕೊಟ್ಟಿಗೆಯಲ್ಲಿನ ಆಕಳಿನ ಸಗಣಿ, ಗಂಜಲ, ಬದುವಿನ ಮಣ್ಣು, ಬೆಲ್ಲ, ದ್ವಿದಳ ಧಾನ್ಯಗಳನ್ನು ಬಳಸಿ ಬೆಳೆ ಬೆಳೆಯುವುದೇ ನೈಸರ್ಗಿಕ ಕೃಷಿ ಎಂದು ಹೇಳಿದರು.
ನೈಸರ್ಗಿಕ ಕೃಷಿಗೆ ದೇಸೀ ಆಕಳು ಅತ್ಯಗತ್ಯ. ಇದರ ಸೆಗಣಿಯಲ್ಲಿ ಹೇರಳವಾದ ಜೀವಾಣುಗಳಿವೆ. ಇದರ ಗಂಜಲದಲ್ಲಿ ಅನೇಕ ಪೋಷಕಾಂಶಗಳಿವೆ. ಒಂದು ಗ್ರಾಂ ಸೆಗಣಿಯಿಂದ ಕೋಟ್ಯಂತರ ಜೀವಾಣು ಪಡೆಯಬಹುದು.ಒಂದು ದೇಸಿ ಹಸು ದಿನವೊಂದಕ್ಕೆ ಸುಮಾರು 10 ಕೆ.ಜಿ. ಸಗಣಿ ಹಾಕುತ್ತದೆ. 30 ಎಕರೆ ಕೃಷಿ ಮಾಡಲು ಒಂದು ದನ ಸಾಕಾಗುತ್ತದೆ ಎಂದರು.
ಶೂನ್ಯ ಬಂಡವಾಳಕ್ಕೆ ಏಕಬೆಳೆ ಬೆಳೆಯುವ ಬದಲು ಅಂತರ ಬೆಳೆಯಾಗಿ 30 ದಿನಗಳಲ್ಲಿ ಬೆಳೆಯುವ ತರಕಾರಿ ಬೆಳೆಯಬೇಕು. ಈ ಪದ್ಧತಿ ಅಳವಡಿಸಿಕೊಂಡ ರೈತರು ಯಾವುದೇ ಸಾಲಬಾಧೆ ಅನುಭಸಬೇಕಾಗಿಲ್ಲ ಎಂದರು.
ಐಟಿಸಿ ಕಂಪನಿಯ ವ್ಯವಸ್ಥಾಪಕ ಮಂಜುನಾಥ್ ಮಾತನಾಡಿ,ತಂಬಾಕು ಕೃಷಿಯಲ್ಲಿ
ವೈಜಾನಿಕ ಕೃಷಿ ಪದ್ದತಿ ಅನುಸರಿಸುವ ಮೂಲಕ ಉತ್ತಮ ಗುಣಮಟ್ಟದ ತಂಬಾಕು ಉತ್ಪಾದನೆ ಮಾಡಿ ತಮ್ಮ ಆರ್ಥಿಕ ಮಟ್ಟವನ್ನು ಉತ್ತಮ ಪಡಿಸಿಕೊಳ್ಳಬೇಕು ಎಂದರು.
ಕ್ಷೇತ್ರ ಅಧಿಕಾರಿ ಉಮೇಶ್ ಕುಮಾರ್ ಮಾತನಾಡಿ,ಹೊಗೆಸೊಪ್ಪಿನ ಬೆಳೆಯಲ್ಲಿ ಮಧ್ಯಂತರ ವ್ಯವಸಾಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಬೇಕು. ಇದರಿಂದ ಕಳೆ ನಿಯಂತ್ರಣದ ಜೊತೆಗೆ ಮಣ್ಣಿನಲ್ಲಿ ವಾಯು ಸಂಯೋಜನೆ ಹಾಗೂ ಬೇರಿನ ಬೆಳವಣಿಗೆಗೆ ಸಹಾಯವಾಗುತ್ತದೆ ಎಂದರು.
ಈ ಸಂದರ್ಭ ಕ್ಷೇತ್ರ ಅಧಿಕಾರಿ ಪ್ರಸನ್ನ ಮೂರ್ತಿ,
ಕ್ಷೇತ್ರ ಸಹಾಯಕರಾದ ಕೃಷ್ಣೇಗೌಡ,ಗುರುವೇಂದ್ರ,ರಂಗಸ್ವಾಮಿ, ಮಹೇಶ್, ಮಂಜು,ಮಮತಾ,ಅಕ್ಷತಾ,ಇಂದಿರಾ.ಸೋಮವಾರಪೇಟೆ ರೈತ ಉತ್ಪಾದನಾ ಕಂಪನಿ ನಿಯಮಿತ ಹೆಬ್ಬಾಲೆ ಅಧ್ಯಕ್ಷ ಟಿ.ಡಿ.ಸೋಮಣ್ಣ, ಕಾರ್ಯದರ್ಶಿ ಎಚ್.ಪಿ.ಪ್ರತಾಪ್,ಪ್ರಗತಿಪರ ರೈತ ಶೇಷಪ್ಪ ರೈತ ಮುಖಂಡರಾದ ವಿಷಕಂಠಪ್ಪ, ಚಂದ್ತಪ್ಪ,ಬಸವಣ್ಣ,ಎಸ್.ಸಿ.ರಾಜು,ತಮ್ಮಣ್ಣ,ಶಿವಪ್ಪ,ಪ್ರಸನ್ನ ,ಮಂಜುನಾಥ್, ಕುಮಾರ್ , ನೇತ್ರಾಪಲ್,ಮಾದಪ್ಪ,ರಾಮಮೂರ್ತಿ,ಕೃಷ್ಣಕುಮಾರ್,
ಶಿವರಾಮ್, ತಾಳೆ ಬೆಳೆ ಕ್ಷೇತ್ರ ಸಹಾಯಕ ಎಂ.ಕೆ.ಶಶಿಧರ್ ಉಪಸ್ಥಿತರಿದ್ದರು.ಇದೇ ಸಂದರ್ಭ
ಶೂನ್ಯ ಬಂಡವಾಳದಲ್ಲಿ ಕೃಷಿ ಮಾಡಿದ ರೈತರಾದ ಲಕ್ಕರೂ ಅಶ್ವಥ್, ಗುಡ್ಡೆನಹಳ್ಳಿ ನೇತ್ರಪಾಲ್,ಜಿ.ಎಸ್.ಉಮೇಶ್,ನಿಲವಾಗಿಲಿನ ರಾಮೇಗೌಡ, ಅಂಜನಪ್ಪ,ನಾಗರಾಜಪ್ಪ,ತೊರೆನೂರಿನ ಗೌರಮ್ಮ ಅವರಿಗೆ
ಪ್ರೋತ್ಸಾಹ ಧನದ ಚೆಕ್ ವಿತರಣೆ ಮಾಡಲಾಯಿತು. ಪ್ರಗತಿಪರ ರೈತರನ್ನು ಸನ್ಮಾನಿಸಿ ಗೌರವಿಸಲಾಯಿತು.