ಕುಶಾಲನಗರ, ಸೆ 14: ಮುಳ್ಳುಸೋಗೆ ಗ್ರಾಪಂ ಮತ್ತು ಗುಡ್ಡೆಹೊಸೂರು ಗ್ರಾಪಂನ ಕೆಲವು ವ್ಯಾಪ್ತಿ ಒಳಗೊಂಡಂತೆ ಕುಶಾಲನಗರ ಪಟ್ಟಣ ಪಂಚಾಯ್ತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸುವ ಸಂಬಂಧ ಮುಳ್ಳುಸೋಗೆ ಗ್ರಾಪಂ ಆಡಳಿತ ಮಂಡಳಿ ಪೌರಾಡಳಿತಕ್ಕೆ ಆಕ್ಷೇಪಣೆ ಸಲ್ಲಿಸಿತ್ತು. ಆದರೆ ಇದೀಗ ಮುಳ್ಳುಸೋಗೆ ಗ್ರಾಪಂ ಹೊರತುಪಡಿಸಿ ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿ ಒಳಗೊಂಡು ಪುರಸಭೆ ರಚನೆಗೆ ಪ್ರಕ್ರಿಯೆಗಳು ಆರಂಭವಾದ ವಿಚಾರವಾಗಿ ಮುಳ್ಳುಸೋಗೆ ಗ್ರಾಮಸ್ಥರು ಮುಳ್ಳುಸೋಗೆ ಗ್ರಾಪಂ ಆಡಳಿತ ಮಂಡಳಿ ವಿರುದ್ದ ಆಕ್ರೋಷ ವ್ಯಕ್ತಪಡಿಸುತ್ತಿದ್ದರು. ಗ್ರಾಮದ ಅಭಿವೃದ್ದಿಗೆ ಆಡಳಿತ ಮಂಡಳಿ ಕಲ್ಲು ಹಾಕಿದೆ. ಪುರಸಭೆಗೆ ಸೇರ್ಪಡೆಯಾಗಲು ಆಡಳಿತ ಮಂಡಳಿಯವರೇ ಅಧಿಕಾರದಾಸೆಯಿಂದ ತಡೆಯೊಡ್ಡಿದ್ದಾರೆ ಎಂಬ ಆರೋಪಗಳಿಂದ ಎಚ್ಚೆತ್ತ ಮುಳ್ಳುಸೋಗೆ ಗ್ರಾಪಂ ಆಡಳಿತ ಮಂಡಳಿ ತುರ್ತು ಸಭೆ ಬುಧವಾರ ನಡೆಯಿತು.
ಸಭೆಯಲ್ಲಿ ಬಹುತೇಕ ಎಲ್ಲರೂ ಕೂಡ ಪುರಸಭೆಗೆ ಮುಳ್ಳುಸೋಗೆ ಸೇರ್ಪಡೆಗೆ ಯಾವುದೇ ಆಕ್ಷೇಪವಿಲ್ಲ ಎಂದು ಸ್ಪಷ್ಟಪಡಿಸಿದರು.
ಪೌರಾಡಳಿತಕ್ಕೆ ಆಕ್ಷೇಪಣೆ ಸಲ್ಲಿಸುವ ಸಂಬಂಧ ಆಡಳಿತ ಮಂಡಳಿ ಪದಾಧಿಕಾರಿಗಳಿಂದ ಸಂಗ್ರಹಿಸಲಾದ ಶುಲ್ಕದ ಮೊತ್ತ ಹಾಗೂ ತಡೆಯಾಜ್ಞೆ ಪ್ರತಿ ವಿಚಾರವಾಗಿ ಸದಸ್ಯೆ ವೇದಾವತಿ, ಜಿ.ಜಿ.ಜಗದೀಶ್, ಎಂ.ಎಸ್.ಶಿವಾನಂದ ನಡುವೆ ಮಾತಿನ ಚಕಮಕಿ ನಡೆಯಿತು. ಈ ಮಧ್ಯೆ ಜಗದೀಶ್ ಹಾಗೂ ವೇದಾವತಿ ನಡುವೆ ತೀವ್ರ ವಾಗ್ವಾದ ಉಂಟಾಗಿ ಏಕವಚನ ಪದಪ್ರಯೋಗ ನಡೆಯಿತು. ಆಡಳಿತ ಮಂಡಳಿ 23 ಸದಸ್ಯರ ತೀರ್ಮಾನದಂತೆ ಆಕ್ಷೇಪಣೆ ಸಲ್ಲಿಸಲಾಗಿತ್ತು. ಈ ಪೈಕಿ ಮೂರ್ನಾಲ್ಕು ಮಂದಿ ಅನುಪಸ್ಥಿತಿಯಲ್ಲಿ ಆಡಳಿತ ಮಂಡಳಿ ಇತರೆ ಸದಸ್ಯರು ನ್ಯಾಯಾಲಯದ ಮೆಟ್ಟಿಲೇರಿದ್ದು. ಆದರೆ ಇದೀಗ ಗ್ರಾಮಸ್ಥರಿಂದ ಛೀಮಾರಿ ಎದುರಾದ ಬೆನ್ನಲ್ಲೇ ಕೆಲವು ಸದಸ್ಯರು ಪತ್ರಿಕೆ ಮಾಧ್ಯಮಗಳಿಗೆ ವೈಯಕ್ತಿಕವಾಗಿ ಪುರಸಭೆ ಪರ ಹೇಳಿಕೆ ನೀಡುತ್ತಿದ್ದಾರೆ ಎಂಬ ವಿಚಾರವಾಗಿ ವಾದ ವಿವಾದಗಳು ನಡೆಯಿತು.
ಈ ಪೈಕಿ ಕೆಲವು ಸದಸ್ಯರು, ಗ್ರಾಮದ ಕೆಲವೊಂದು ಸರ್ವೆ ನಂಬರ್ ಗಳು ಬಿಟ್ಟು ಹೋಗಿವೆ. ಕೃಷಿ ಭೂಮಿಗಳನ್ನು ಪುರಸಭೆ ಗೆ ಸೇರ್ಪಡೆ ಮಾಡಬಾರದು. ಮರು ಸರ್ವೆ ನಡೆಯಬೇಕಿದೆ ಎಂಬ ಬೇಡಿಕೆ ಇಟ್ಟರು. ಈ ಸಂಬಂಧ ಕೈ ಎತ್ತಿ ಒಪ್ಪಿಗೆ, ವಿರೋಧ ಸೂಚಿಸುವ ಪ್ರಕ್ರಿಯೆ ನಡೆಯಿತು.
ಗ್ರಾಪಂ ಅಧಿಕಾರ ವಹಿಸಿಕೊಂಡು ಒಂದು ವರ್ಷದಲ್ಲೇ ಗ್ರಾಪಂ ಪುರಸಭೆಗೆ ಸೇರ್ಪಡೆಯಾಗುವ ಮೂಲಕ ಅಧಿಕಾರಿ ಅವಧಿ ಕೊನೆಗೊಳ್ಳುವ ಕಾರಣ ಕಾಲಾವಕಾಶ ಕೋರಿ ಆಕ್ಷೇಪಣೆ ಸಲ್ಲಿಸಲಾಗಿತ್ತೇ ವಿನಃ ಪುರಸಭೆಗೆ ಸೇರ್ಪಡೆಯಾಗಲು ಯಾವುದೇ ರೀತಿಯ ವಿರೋಧವಿಲ್ಲ. ಮುಳ್ಳುಸೋಗೆ ಒಳಗೊಂಡಂತೆ ಕುಶಾಲನಗರ ಪುರಸಭೆಯಾಗಿ ರಚನೆಯಾಗಬೇಕಿದೆ ಎಂದು ಆಡಳಿತ ಮಂಡಳಿ ಒಮ್ಮತದ ನಿರ್ಣಯ ಕೈಗೊಂಡಿತು. ಕೂಡಲೆ ಸಭಾ ನಡಾವಳಿಯನ್ನು ಸಂಬಂಧಿಸಿದವರಿಗೆ ರವಾನಿಸಲು ಸಭೆ ತೀರ್ಮಾನಕ್ಕೆ ಬಂದ ಬೆನ್ನಲ್ಲೇ ಬಹುತೇಕ ಸದಸ್ಯರು ಭಾರದ ಮನಸ್ಸಿನಿಂದ ಸಭೆಯಿಂದ ನಿರ್ಗಮಿಸಿದರು.
ಗ್ರಾಪಂ ಅಧ್ಯಕ್ಷ ಚೆಲುವರಾಜು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷೆ ಜಯಮ್ಮ, ಪಿಡಿಒ ಸುಮೇಶ್ ಮತ್ತು ಸದಸ್ಯರುಗಳು ಇದ್ದರು.