ಕುಶಾಲನಗರ, ಸೆ 10: ನಿರುದ್ಯೋಗಿ ವಿದ್ಯಾವಂತ ತರುಣರನ್ನು ಸ್ವಾವಲಂಬಿಗಳಾಗಿಸುವ ದಿಸೆಯಲ್ಲಿ ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕೊಡಗು ಎಜುಕೇಶನಲ್ ಸೋಸಿಯಲ್ ಸರ್ವೀಸ್ ಸಂಸ್ಥೆ ಅಗ್ನಿಪಥ್ ಗೆ ಆಯ್ಕೆಯಾಗಲು ಬಯಸುವ ಯುವಕರಿಗೆ ಜಿಲ್ಲೆಯ ಗೋಣಿಕೊಪ್ಪ ಹಾಗು ಕುಶಾಲನಗರದಲ್ಲಿ ಲಿಖಿತ ಪರೀಕ್ಷಾ ಕಾರ್ಯಾಗಾರವನ್ನು ಆರಂಭಿಸಿದೆ.
ಕುಶಾಲನಗರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಹಮ್ಮಿಕೊಂಡಿರುವ ತರಬೇತಿ ಕಾರ್ಯಾಗಾರದಲ್ಲಿ 20 ಕ್ಕೂ ಹೆಚ್ಚಿನ ವಿದ್ಯಾವಂತ ನಿರುದ್ಯೋಗಿ ತರುಣರು ದಾಖಲಾಗಿದ್ದಾರೆ.
ಇವರಿಗೆ ವಿವಿಧ ವಿಷಯಗಳಲ್ಲಿ ಪರಿಣತಿ ಹೊಂದಿರುವ ವಿಷಯ ತಜ್ಞರಿಂದ ತರಗತಿಗಳು ನಡೆಯುತ್ತಿವೆ.
ಅಗ್ನಿಪಥ್ ಲಿಖಿತ ಪರೀಕ್ಷೆಯಲ್ಲಿನ ಸಾಮಾನ್ಯ ವಿಷಯಗಳಾದ ಗಣಿತ, ವಿಜ್ಞಾನ ಹಾಗು ಸಾಮಾನ್ಯ ಜ್ಞಾನ ವಿಷಯಗಲ್ಲಿ ಪರಿಣತಿ ಹೊಂದಿರುವ ಜೀವಶಾಸ್ತ್ರ ಉಪನ್ಯಾಸಕಿ ಪದ್ಮ ಪ್ರಾಣೇಶ್, ಯುಪಿಎಸ್ಸಿ ಪರೀಕ್ಷಾ ತರಬೇತುದಾರ ಕುಶಾಲ್, ಸಿಡಿಎಸ್ ತರಬೇತುದಾರ್ತಿ ಎ.ಜೆ.ಯಕ್ಷಿತಾ ಮೊದಲಾದ ಸಂಪನ್ಮೂಲ ವ್ಯಕ್ತಿಗಳು ಈ ಯುವಕರನ್ನು ಪರೀಕ್ಷೆಗೆ ಸಜ್ಜುಗೊಳಿಸುತ್ತಿದ್ದಾರೆ.
ಇಷ್ಟೇ ಅಲ್ಲದೇ ತರಬೇತುದಾರರ ಫಿಸಿಕಲ್ ಮತ್ತು ಮೆಡಿಕಲ್ ಪರೀಕ್ಷೆಗಳು ಪೂರ್ಣಗೊಂಡ ಬಳಿಕ ಅಗ್ನಿಪಥ್ ಗೆ ಆಯ್ಕೆಯಾದವರನ್ನು ಅಗ್ನಿವೀರ್ ಗೆ ಅಣಿಗೊಳಿಸುವ ಕೆಲಸವನ್ನು ಈ ಸಂಸ್ಥೆ ಮಾಡುತ್ತಿದೆ.
ಕೊಡಗು ಎಜುಕೇಶನಲ್ ಮತ್ತು ಸರ್ವೀಸಸ್ ಸಂಸ್ಥೆಯ ಗೌರವ ಅಧ್ಯಕ್ಷ ಮೇಜರ್ ಜನರಲ್ ಅರ್ಜುನ್ ಮುತ್ತಣ್ಣ ( ನಿವೃತ್ತ) ಅಧ್ಯಕ್ಷರಾದ ಎಂ.ಕೆ. ಚೆಂಗಪ್ಪ, ಕಾರ್ಯದರ್ಶಿ ಗಣೇಶ್ ಪೊನ್ನಪ್ಪ, ಕ್ಯಾಪ್ಟನ್ ಪಿ.ಎಸ್.ಕಾರ್ಯಪ್ಪ (ನಿವೃತ್ತ), ಸೂರಜ್ ಮಾಚಯ್ಯ, ಬಿ.ಕೆ.ಸುಬ್ರಮಣಿ, ಸೂರಜ್ ಮಾಚಯ್ಯ, ಹವಾಲ್ದಾರ್ ಜನಾರ್ಧನ್ ( ನಿವೃತ್ತ) ಮೊದಲಾದವರ ಸೇವೆ ಇಲ್ಲಿ ಅವಿಸ್ಮರಣೀಯವಾದುದು.
ಅಂದರೆ ಸೇನೆ ಮತ್ತು ಪೋಲೀಸ್ ಇಲಾಖೆಗಳಿಗೆ ಆಯ್ಕೆಯಾಗ ಬಯಸುವ ನಿರುದ್ಯೋಗಿ ಯುವಕರಿಗೆ ಉಚಿತವಾದ ಸೇವೆಗಳನ್ನು ನೀಡುವ ಮೂಲಕ ಆ ಕುಟುಂಬಗಳಿಗೆ ಬೆಳಕಾಗುತ್ತಿದೆ ಈ ಸಂಸ್ಥೆ.
ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಹೊರರಾಜ್ಯಗಳಿಂದ ಕರೆ ಮಾಡುವ ಆಗಂರುಕರು, ನಿಮಗೆ ಸೇನೆಗೆ ಸೇರುವ ಹಂಬಲವಿದ್ದರೆ ನಾವು ಎಲ್ಲಾ ಸಿದ್ಧತೆಗಳನ್ನು ನಿಮ್ಮ ಕೈಗೆಟುಕುವ ಮಾದರಿಯಲ್ಲಿ ಅಣಿಗೊಳಿಸುತ್ತೇವೆ ಬನ್ನಿ ದಾಖಲಾಗಿ ಎಂದು ಆಸೆ ಆಮಿಷ ತೋರಿಸುತ್ತಿರುವ ಬೆಳವಣಿಗೆಗಳು ಕೇಳಿ ಬರುತ್ತಿವೆ. ಈ ಬಗ್ಗೆ ಯುವಕರು ಎಚ್ಚರಿಕೆ ವಹಿಸಬೇಕು. ಉಚಿತ ಅಥವಾ ರಿಯಾಯಿತಿಯ ಸೇವೆಗಳು ಎಂದು ದೂರದ ಪ್ರದೇಶಗಳಿಗೆ ತೆರಳುವ ಬಹಳಷ್ಟು ಮಂದಿ ವಂಚನೆಗಳಿಗೆ ತುತ್ತಾಗಿ ಹಣ ಕಳೆದುಕೊಂಡು ಬರಿಗೈಯಲ್ಲಿ ಮರಳಿರುವ ಪ್ರಸಂಗಗಳು ಜರುಗಿರುವುದರಿಂದ ಎಚ್ಚರ ವಹಿಸಬೇಕು ಎಂದು ಕೊಡಗು ಎಜುಕೇಶನಲ್ ಅಂಡ್ ಸೋಸಿಯಲ್ ಸರ್ವೀಸಸ್ ಸಂಸ್ಥೆಯ ಅಧ್ಯಕ್ಷ ಚೆಂಗಪ್ಪ ಮನವಿ ಮಾಡಿದ್ದಾರೆ.
Back to top button
error: Content is protected !!