ಕುಶಾಲನಗರ, ಆ 20: ಕರ್ನಾಟಕ ಆರ್ಯವೈಶ್ಯ ಮಹಾಸಭಾ ವತಿಯಿಂದ ಡಿಸೆಂಬರ್ 25, 26, 27 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ
ಗ್ಲೋಬಲ್ ಆಕ್ಸಿಲೇಟರ್ ವಿಷನ್ ಸಮಿಟ್ (ಜಿ.ಎ.ವಿ.ಎಸ್) ಏರ್ಪಡಿಸಲಾಗಿದೆ ಎಂದು ಕುಶಾಲನಗರ ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ತಿಳಿಸಿದರು.
ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಶಕ್ತಿಯನ್ನು ಸಂಘಟಿಸಿ ಅವರ ಭವಿಷ್ಯ ನಿರ್ಮಾಣಕ್ಕೆ ಜಾಗತಿಕ ಮಟ್ಟದ ವೇದಿಕೆಯನ್ನು ರೂಪಿಸಿ ತನ್ಮೂಲಕ ಅವರಿಗೆ ಅವಶ್ಯವಿರುವ ಮಾಹಿತಿ, ತರಬೇತಿ, ಸಹಕಾರ ನೀಡುವ ಮಹೋನ್ನತ ವೇದಿಕೆಯಾಗಿ ಜಿ.ಎ.ವಿ.ಸ್.ಕಾರ್ಯನಿರ್ವಹಿಸಲಿದೆ.
ನಮ್ಮ ಯುವ ಪೀಳಿಗೆ ವಿದ್ಯಾವಂತರು, ಕೌಶಲ್ಯ ಸಂಪದರೂ ಆಗಿದ್ದಾರೆ. ಆದರೆ ತಮ್ಮ ಕೌಶಲ್ಯವನ್ನು, ಬುದ್ದಿ, ಜ್ಞಾನಗಳನ್ನು ಕೇವಲ ತಮ್ಮ ಜೀವನ ರೂಪಿಸಿಕೊಳ್ಳಲು ಬಳಸುತ್ತಿದ್ದಾರಷ್ಟೇ. ತಮ್ಮಲ್ಲಿರುವ ಅಸಾಧಾರಣ ಶಕ್ತಿಯನ್ನು ದೇಶದ ಭವಿಷ್ಯಕ್ಕಾಗಿ ಬಳಸುವ ಮೂಲಕ ತಾವು ಬೆಳೆದು, ನೂರಾರು ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಿ ಸಾಧಕರಾಗಬೇಕು. ವಿಶ್ವದ ಉದ್ಯಮ ಕ್ಷೇತ್ರದಲ್ಲಿ ಬೆಳೆಯಬೇಕು. ಬೆಳಗಬೇಕು. ದೇಶದ ಆರ್ಥಿಕತೆಗೆ, ಕೈಗಾರಿಕೋದ್ಯಮಕ್ಕೆ ದೊಡ್ಡ ಶಕ್ತಿಯಾಗಬೇಕು ಎಂಬುದು ನಮ್ಮ ಮಹಾಸಭಾದ ಉದ್ದೇಶವಾಗಿದೆ. ಇದು ಯಾವುದೇ ಒಂದು ಸಮುದಾಯಕ್ಕೆ ಮಾತ್ರ ಮೀಸಲಾಗದೆ ಸಮಾಜದ ಎಲ್ಲಾ ವರ್ಗದವರು ಪಾಲ್ಗೊಂಡು ಮೂರು ದಿನಗಳ ಸಮ್ಮುಖದಲ್ಲಿ ದೊರೆಯುವ ಮಾರ್ಗದರ್ಶನ ಪಡೆಯಬಹುದಾಗಿದೆ.
ಈಗಾಗಲೇ ಇರುವ ತಮ್ಮ ವ್ಯಾಪಾರ, ವ್ಯವಹಾರ, ಉದ್ಯಮಗಳನ್ನು ಮತ್ತಷ್ಟು ಬೆಳಸಿಕೊಳ್ಳಲು ಅಗತ್ಯ ಸಲಹೆ, ಸಹಕಾರ,
ನವೋದ್ಯಮಗಳನ್ನು ಆರಂಭಿಸುವವರಿಗೆ ಅವಶ್ಯ ಮಾರ್ಗದರ್ಶನ, ಅಭಿವೃದ್ಧಿಗೆ ಆರ್ಥಿಕ ಸಹಕಾರ, ಆರ್ಥಿಕ ಪಾಲುದಾರಿಕೆ, ಅವಶ್ಯಕತೆಯಿದ್ದಲ್ಲಿ ಉನ್ನತ ಮಟ್ಟದ ತಂತ್ರಜ್ಞಾನದ ನೆರವು, ಆಮದು ರಫ್ತು ವ್ಯವಹಾರಗಳು, ರಿಯಲ್ ಎಸ್ಟೇಟ್ ವ್ಯವಹಾರ, ವ್ಯವಸಾಯದ ವೈವಿಧ್ಯತೆಗಳು,
ಬ್ಯಾಂಕಿಂಗ್ ಕ್ಷೇತ್ರದಿಂದ ದೊರೆಯುವ ಸೌಲಭ್ಯಗಳು, ಹೊಸ ಆವಿಷ್ಕಾರಗಳು-ಅಳವಡಿಸಿಕೊಳ್ಳುವ ಬಗ್ಗೆ ಪರಿಣಿತರಿಂದ ಸಲಹೆ, ವಸ್ತು ಪ್ರದರ್ಶನ-ಆಹಾರ ಮಳಿಗೆಗಳು ಇತ್ಯಾದಿಗಳು ಸಮ್ಮೇಳನದಲ್ಲಿ ಆಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಇದೊಂದು ಅಂತರರಾಷ್ಟ್ರೀಯ ಗುಣಮಟ್ಟದ ಕಾರ್ಯಕ್ರಮವಾಗಿದ್ದು ಅನುಭವಿಗಳ, ಸಾಧಕರ ಪ್ರೇರಣಾತ್ಮಕ ಮಾರ್ಗದರ್ಶನದಿಂದ ಆತ್ಮವಿಶ್ವಾಸ ಹೆಚ್ಚಿಸುವ ಕಾರ್ಯ ನಡೆಯಲಿದೆ.
ಹತ್ತಾರು ವಿಷಯಗಳನ್ನು ಒಂದೇ ವೇದಿಕೆಯಲ್ಲಿ ತಿಳಿದುಕೊಳ್ಳುವ, ಚರ್ಚಿಸುವ ಅನನ್ಯ ಅವಕಾಶ ದೊರೆಯಲಿದೆ. ನವ ಪೀಳಿಗೆಗೆ ಮಾರ್ಗದರ್ಶನ ನೀಡಿ ಅವರ ಕನಸುಗಳಿಗೆ ಜೀವತುಂಬಿ, ಮನಸ್ಸುಗಳಿಗೆ ಶಕ್ತಿತುಂಬಿ, ಹೃದಯದಲ್ಲಿ ಧೈರ್ಯತುಂಬಿ ನಿರಂತರ ಪರಿಶ್ರಮದಿಂದ ಸಾಧನೆಗಳ ಮೆಟ್ಟಿಲೇರಿ ಜಾಗತಿಕ ಮಟ್ಟದಲ್ಲಿ ಧ್ರುವತಾರೆಗಳಾಗಿ ಬೆಳಗುವಂತಹ ಯುವ ಶಕ್ತಿಯನ್ನು ಕಟ್ಟಿ ಬೆಳೆಸುವ ರಾಷ್ಟ್ರದ ಆರ್ಥಿಕ ಶಕ್ತಿಯಾಗಿ ದೇಶ ನಿರ್ಮಾಣ ಮಾಡುವ ಕಟ್ಟಾಳುಗಳ ನಿರ್ಮಾಣವೇ ವಿಶ್ವ ಆರ್ಯವೈಶ್ಯ ಸಮಾವೇಶದ ಮಹತ್ವರ ಗುರಿಯಾಗಿದೆ ಎಂದು ತಿಳಿಸಿದರು.
ಈ ಮಹಾ ಅಂತರರಾಷ್ಟ್ರೀಯ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಬಹುತೇಕ ಐದು ರಾಜ್ಯಗಳ ಸಮಾಜದ ಪ್ರತಿನಿಧಿಗಳು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸರ್ಕಾರದ ಮಂತ್ರಿಗಳು, ಬಹಳಷ್ಟು ಜನಪ್ರತಿನಿಧಿಗಳು, ಆಂಧ್ರಪ್ರದೇಶದ ಕೈಗಾರಿಕೆ ಮತ್ತು ವಾಣಿಜ್ಯ ಆಹಾರ ಸಂಸ್ಕರಣ ಇಲಾಖೆಯ ಮಂತ್ರಿಗಳೂ, ಗೌರವಾಧ್ಯಕ್ಷರು ಆದ ಟಿ.ಜಿ. ಭರತ್, ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಆರ್.ಪಿ. ರವಿಶಂಕರ್, ವಿಧಾನ ಪರಿಷತ್ ಸದಸ್ಯ ಅರುಣ್ ಅಲ್ಲದೆ ಸಮಾಜದ ಅನೇಕ ಸೆಲೆಬ್ರೇಟಿಗಳು, ಬೇರೆ ರಾಜ್ಯಗಳ ಪ್ರಮುಖರು ಈ ಮೂರು ದಿನಗಳ ಸಮಿಟ್ ನಲ್ಲಿ ಭಾಗವಹಿಸುತ್ತಾರೆ ಎಂದರು.
ಕಳೆದ 8 ವರ್ಷಗಳಲ್ಲಿ ಸಮಾಜದ ಕಲ್ಯಾಣ ಕಾರ್ಯಕ್ರಮಗಳಿಗೆ ಸುಮಾರು 40 ಕೋಟಿ ರೂಪಾಯಿಗಳಿಗೂ ಮೀರಿದ ಬೃಹತ್ ಮೊತ್ತವನ್ನು ಅಶಕ್ತರ, ಅಬಲರ ಅವಶ್ಯಕತೆ ಇರುವವರಿಗೆ ಕಾಮಧೇನುವಾಗಿಮಹಾಸಭಾ ಕೆಲಸ ಮಾಡುತ್ತಿದೆ. ಕರ್ನಾಟಕ ರಾಜ್ಯದಲ್ಲಿ 6 ಲಕ್ಷಕ್ಕೂ ಅಧಿಕ ಸಂಖ್ಯೆಯ ಆರ್ಯವೈಶ್ಯ ಸಮಾಜದವರಿದ್ದು, 325 ವಾಸವಿ ದೇವಾಲಯಗಳಿವೆ.ಈ ಸಮಾವೇಶದಲ್ಲಿ ಕೊಡಗು ಜಿಲ್ಲೆಯಿಂದ 2,500 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಸಲು ಉದ್ದೇಶಿಸಿರುವ ಇಂತಹ ಸಮಾವೇಶ ಐದು ವರ್ಷಗಳಲ್ಲಿ 5000 ನವೋದ್ಯಮಗಳ ಸ್ಥಾಪನೆ ತನ್ಮೂಲಕ 5 ಲಕ್ಷ ಉದ್ಯೋಗಗಳ ಸೃಷ್ಟಿ ಮಾಡುವ ಗುರಿ ಹೊಂದಲಾಗಿದೆ. ಈ ಕಾರ್ಯಕ್ರಮವನ್ನು ರಾಜ್ಯದ ಮನೆ ಮನೆಗೆ ತಲುಪಿಸುವ ಜವಾಬ್ದಾರಿಯನ್ನು ಸಹ ಆರ್ಯವೈಶ್ಯ ಮಹಾಸಭಾ ಮಾಡಲಿದೆ ಎಂದರು.
ಸಮ್ಮೇಳನದ ಭಾಗವಾಗಿ
ಆಗಸ್ಟ್ 23 ರಂದು ಭಾನುವಾರ ಬೆಳಿಗ್ಗೆ 10.30 ಕ್ಕೆ ಗ್ಲೋಬಲ್ ಆರ್ಯವೈಶ್ಯ ಸಮಾವೇಶದ ಸಂಕಲ್ಪ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಕುಶಾಲನಗರ ಬೈಚನಹಳ್ಳಿಯಿಂದ ಆಂಜನೇಯಸ್ವಾಮಿ ದೇವಾಲಯದ ತನಕ ಜಾಥಾ ನಡೆಸಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೂ ಸಮಾವೇಶದ ಬಗ್ಗೆ ಜಾಗೃತಿ ಮೂಡಿಸಿ, ಸಮಾವೇಶದಲ್ಲಿ ಭಾಗವಹಿಸಲು ಪ್ರೇರೇಪಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಜಿಲ್ಲಾ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಬಿ.ಎಲ್. ಸತ್ಯನಾರಾಯಣ, ಕುಶಾಲನಗರ ಆರ್ಯ ವೈಶ್ಯ ಮಂಡಳಿ ಕಾರ್ಯದರ್ಶಿ ಪ್ರವೀಣ್, ಖಜಾಂಚಿ ಪ್ರಶಾಂತ್, ನಿರ್ದೇಶಕ ಕೆ.ಜೆ. ಸತೀಶ್,
ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಅಮೃತ್ ರಾಜ್ ಇದ್ದರು.
Back to top button
error: Content is protected !!