ಟಿಂಬರ್ ಮರ್ಚೆಂಟ್ ಯೂನಿಯನ್ ಹಾಗೂ ಕೂರ್ಗ್ ಲಾರಿ ಚಾಲಕರ ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳ ಸುದ್ದಿಗೋಷ್ಠಿ

ಕುಶಾಲನಗರ, ಸೆ 29: ಕೊಡಗು ಜಿಲ್ಲೆಯಲ್ಲಿ ಟಿಂಬರ್ ಸಾಗಾಟಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಅಗತ್ಯ ಮಾರ್ಗಸೂಚಿ ಪ್ರಕಟಿಸುವಂತೆ ಟಿಂಬರ್ ಮರ್ಚೆಂಟ್ ಯೂನಿಯನ್ ಹಾಗೂ ಕೂರ್ಗ್ ಲಾರಿ ಚಾಲಕರ ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಡಗು ಜಿಲ್ಲಾ ಟಿಂಬರ್ ಮರ್ಚೆಂಟ್ ಯೂನಿಯನ್ ಅಧ್ಯಕ್ಷ ಎಂ.ಎ.ಶಮೀರ್, ಇತ್ತೀಚಿಗೆ ಕುಶಾಲನಗರದಲ್ಲಿ 4 ಟಿಂಬರ್ ಲಾರಿಗಳನ್ನು ತಡೆದ ಸಂಚಾರಿ ಪೊಲೀಸರು ಆರ್.ಟಿ.ಒ ಮೂಲಕ ಬೃಹತ್ ದಂಡ ವಿಧಿಸಿದ್ದಾರೆ. ಈ ಸಂದರ್ಭ ಲಾರಿ ಚಾಲಕರ ಮೊಬೈಲ್ ಕಸಿದು ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಿದರು. ಟಿಂಬರ್ ಸಾಗಾಟ, ವ್ಯಾಪಾರವನ್ನು ನಿಯಮಾ ನುಸಾರವಾಗಿ ನಡೆಸುತ್ತಿದ್ದೇವೆ ಹೊರತು ದಂಧೆ ನಡೆಸುತ್ತಿಲ್ಲ. ಆದರೂ ಅಧಿಕಾರಿಗಳಿಂದ ಅನಗತ್ಯ ಕಿರುಕುಳ ತಪ್ಪುತ್ತಿಲ್ಲ. ಎಲ್ಲಾ ಉದ್ಯಮಗಳಂತೆ ಇದನ್ನೇ ನಂಬಿ ಸಾವಿರಾರು ಮಂದಿ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಟಿಂಬರ್ ಉದ್ಯಮವನ್ನು ದಂಧೆಯಂತೆ ಭಾವಿಸುತ್ತಿರುವುದು ಸರಿಯಲ್ಲ.
ಇಂತಹ ಪ್ರಕರಣಗಳು ಮರುಕಳಿಸಿದರೆ ಮುಂದಿನ ದಿನಗಳಲ್ಲಿ ಅಧಿಕಾರಿಗಳ ವಿರುದ್ದ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಪಂ ಮಾಜಿ ಸದಸ್ಯರೂ ಆದ ಟಿಂಬರ್ ಮರ್ಚೆಂಟ್ ಯೂನಿಯನ್ ಗೌರವಾಧ್ಯಕ್ಷ ವಿಜು ಸುಬ್ರಮಣಿ ಮಾತನಾಡಿ, ಮಳೆಗಾಲದಲ್ಲಿ ಜಿಲ್ಲಾಡಳಿತದ ಸೂಚನೆಯಂತೆ ಉದ್ಯಮವನ್ನು ಸ್ಥಗಿತಗೊಳಿಸಿ ಆದೇಶ ಪಾಲನೆ ಮಾಡಲಾಗಿದೆ. ಸಾಗಾಟ ಮತ್ತು ಮಾರಾಟಕ್ಕೆ ಅನುಮತಿಯಿರುವ ಮರಗಳನ್ನಷ್ಷೇ ಸಾಗಾಟ ಮಾಡಲಾಗುತ್ತಿದೆ. ಸಾಗಾಟ ಸಂದರ್ಭ ಕೆಲವೊಂದು ಲೋಪಗಳು ಉಂಟಾಗಿರಬಹುದು. ಈ ಬಗ್ಗೆ ಸಂಘದ ಮೂಲಕ ಚಾಲಕರು ಮಾಲೀಕರಿಗೆ ಅಗತ್ಯ ನಿಯಮ ಪಾಲನೆಗೆ ನಿರ್ದೇಶನ ನೀಡಲಾಗಿದೆ. ಬೇರೆಲ್ಲೂ ಇಲ್ಲದ ಕಟ್ಟುನಿಟ್ಟಿನ ನಿಯಮ ಕೊಡಗಿನಲ್ಲಿದೆ. ಇದಕ್ಕೆ ವಿನಾಯ್ತಿ ನೀಡಬೇಕಿದೆ. ಅನಗತ್ಯ ಕಿರುಕುಳ ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಮಾರ್ಗಸೂಚಿ ಪ್ರಕಟಿಸಿದಲ್ಲಿ ಅದರಂತರಯೇ ನಾವು ನಮ್ಮ ಉದ್ಯಮ ನಡೆಸುವುದಾಗಿ ತಿಳಿಸಿದರು.
ಕೂರ್ಗ್ ಲಾರಿ ಚಾಲಕರು ಮಾಲೀಕರ ಸಂಘದ ಉಪಾಧ್ಯಕ್ಷ ಕಿರಣ್ ತಿಮ್ಮಯ್ಯ ಮಾತನಾಡಿ, ಪೊಲೀಸರು ಟಿಂಬರ್ ಲಾರಿಗಳಿಂದ ಲಂಚ ವಸೂಲಿ ಮಾಡುವುದಕ್ಕೆ ಕಡಿವಾಣ ಹಾಕಬೇಕಿದೆ. ಮಿತಿಮೀರಿದ ಅಳತೆಯಲ್ಲಿ ಜಲ್ಲಿ, ಮರಳು ಸಾಗಾಟದಿಂದ ಜನಸಾಮಾನ್ಯರಿಗೆ ಅನಾನುಕೂಲ ಉಂಟಾಗುತ್ತಿರುವ ಬಗ್ಗೆ ಖುದ್ದು ದೂರು ನೀಡಿದ್ದರೂ ಪ್ರಭಾವಿಗಳೆಂಬ ಕಾರಣದಿಂದ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅವರು ಆರೋಪಿಸಿದರು.
ಯೂನಿಯನ್ ಕಾರ್ಯದರ್ಶಿ ಉರೇಶ್, ಕೂರ್ಗ್ ಲಾರಿ ಚಾಲಕರು ಮಾಲೀಕರ ಸಂಘದ ಅಧ್ಯಕ್ಷ ಅಶ್ರಫ್ ಎಂ.ಮಾತನಾಡಿ, ಈಗಾಗಲೆ ಮಳೆಗಾಲದಲ್ಲಿ ಮೂರು ತಿಂಗಳು ಕೆಲವಿಲ್ಲದೆ ನಷ್ಟಕ್ಕೆ ಒಳಗಾಗಿರುವವ ನಮಗೆ ಪೊಲೀಸ್ ಇಲಾಖೆಯ ಕಿರುಕುಳ ಮತ್ತಷ್ಟು ಸಮಸ್ಯೆ ಉಂಟುಮಾಡುತ್ತಿದೆ ಎಂದರು.
ಈ ಸಂದರ್ಭ ಟಿಂಬರ್ ಲಾರಿ ಮಾಲೀಕ ರೂಪೇಶ್ ಇದ್ದರು.



