ಕೇರಳ ಸಮಾಜದಿಂದ ಅಕ್ಟೋಬರ್ 4 ರಂದು ಕುಶಾಲನಗರದಲ್ಲಿ ಓಣಂ ಆಚರಣೆ

ಕುಶಾಲನಗರ, ಸೆ 30: ಕುಶಾಲನಗರ ಕೇರಳ ಸಮಾಜದ ಆಶ್ರಯದಲ್ಲಿ ಅಕ್ಟೋಬರ್ 4 ರಂದು ಭಾನುವಾರ ಎಪಿಸಿಎಂಎಸ್ ಸಭಾಂಗಣದಲ್ಲಿ 26ನೇ ವರ್ಷದ ಓಣಂ ಆಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಅಧ್ಯಕ್ಷ ಪಿ.ರವೀಂದ್ರನ್ ತಿಳಿಸಿದರು.
ಸಮಾಜದ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ ಕೇರಳ ಸಮಾಜದಿಂದ ಎಪಿಸಿಎಂಎಸ್ ಸಭಾಂಗಣ ತನಕ ಮಾವೇಲಿ ಸಹಿತ ಚಂಡೆ ವಾದ್ಯಗಳೊಂದಿಗೆ ಸಮಾಜ ಬಾಂಧವರಿಂದ ಮೆರವಣಿಗೆ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್, ಶಾಸಕ ಡಾ.ಮಂತರ್ ಗೌಡ, ಮಾಜಿ ಶಾಸಕ ಅಪ್ಪಚ್ಚುರಂಜನ್, ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ
ಜಿಪಂ ಮಾಜಿ ಅಧ್ಯಕ್ಷ ವಿ.ಎಂ.ವಿಜಯನ್, ಕುಶಾಲನಗರ ಎಸ್.ಎನ್.ಡಿ.ಪಿ.ಶಾಖೆ ಅಧ್ಯಕ್ಷ ಕೆ.ಟಿ.ಗಣೇಶ್ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಸಮಾಜದ ನಿರ್ದೇಶಕ ಕೆ.ವರದ ಮಾತನಾಡಿ,
ಹಿಂದೂ, ಕ್ರೈಸ್ತ್ರ, ಮುಸಲ್ಮಾನ ಸಮುದಾಯದ
ಮಲೆಯಾಳಿ ಭಾಷಿಕರು ಒಗ್ಗೂಡಿ ಕುಶಾಲನಗರದಲ್ಲಿ ಓಣಂ ಆಚರಿಸುವುದು ಇಲ್ಲಿನ ವಿಶೇಷವಾಗಿದೆ. ಅಂದು ಓಣಂ ಅಂಗವಾಗಿ ಪೂಕಳಂ, ಚಿತ್ರಕಲಾ ಸ್ಪರ್ಧೆ ಸೇರಿದಂತೆ ತಿರುವಾದಿರ ಕಳಿ, ಭರತನಾಟ್ಯ, ನಾಡೋಡಿ ನೃತ್ಯ, ನಾಡನ್ ಪಾಟ್, ಓಣಂ ಪಾಟ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸಮಾಜದ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಸಮಾಜದ ಜಂಟಿ ಕಾರ್ಯದರ್ಶಿ ಅಜಿತ ಧನರಾಜ್, ಖಜಾಂಚಿ ಬಿ.ಸಿ.ಆನಂದ್, ನಿರ್ದೇಶಕ ಎಂ.ಜಿ.ಪ್ರಕಾಶ್ ಇದ್ದರು.



