ಕುಶಾಲನಗರ, ಆ 29: ಸೋಮವಾರಪೇಟೆ ಉಪವಿಭಾಗ ಪೊಲೀಸ್ ಇಲಾಖೆ ವತಿಯಿಂದ ಸಾರ್ವಜನಿಕರ ಶಾಂತಿ ಸಭೆ ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆಯಿತು.
ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕುಶಾಲನಗರ ತಾಲೂಕು ವ್ಯಾಪ್ತಿಯ ವಿವಿಧ ಸಮುದಾಯ ಪ್ರಮುಖರು, ಸಂಘಸಂಸ್ಥೆ, ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು.
ಶಾಂತಿ, ಸುವ್ಯವಸ್ಥೆ ನೆಲೆನಿಲ್ಲಲು ಸರ್ವ ಧರ್ಮಮುಖಂಡರು, ಸಾರ್ವಜನಿಕರು ಅಗತ್ಯ ಕಾನೂನು ಮಾರ್ಗಸೂಚಿ ಪಾಲಿಸಲು ಕೋರಲಾಯಿತು. ಪ್ರತಿ ಧರ್ಮಗಳ ಧಾರ್ಮಿಕ ಆಚರಣೆಗಳ ಸಂದರ್ಭ ಸಮಾಜದಲ್ಲಿ ಶಾಂತಿ ಕದಡದಂತೆ ವರಿಷ್ಠಾಧಿಕಾರಿ ಅಯ್ಯಪ್ಪ ಸಭೆಯ ಸಹಕಾರ ಕೋರಿದರು.
ಮೊದಲಿಗೆ ಗಣೇಶೋತ್ಸವ ಆಚರಣೆ ಸಂಬಂಧ ನಿಯಮಗಳ ಬಗ್ಗೆ ಚರ್ಚೆ ನಡೆಯಿತು.
ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಯೂತ್ ಕಮಿಟಿ, ಜಿಲ್ಲಾಡಳಿತ, ಮಾಧ್ಯಮ, ವಿವಿಧ ಇಲಾಖೆಗಳು ಹಾಗೂ ಪೊಲೀಸ್ ತಂಡಗಳ ಸೌಹಾರ್ದ ಕ್ರೀಡಾಕೂಟ ಹಮ್ಮಿಕೊಳ್ಳುವ ಬಗ್ಗೆ ಯೋಜನೆ ಹಮ್ಮಿಕೊಂಡಿರುವ ಬಗ್ಗೆ ಸಭೆಗೆ ಮಾಹಿತಿ ನೀಡಲಾಯಿತು. ಸಾರ್ವಜನಿಕರ ಅನುಮಾನಗಳನ್ನು ಬಗೆಹರಿಸಲಾಯಿತು.
ಪೊಲೀಸರು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಅದೇ ರೀತಿ ಸಾರ್ವಜನಿಕರು ಕೂಡ ಇಲಾಖೆಗೆ ಸಹಕರಿಸಬೇಕಿದೆ. ಗಣೇಶೋತ್ಸವ ಸಂದರ್ಭ ಸಾರ್ವಜನಿಕರಿಗೆ ಕಿರಿಕಿರಿ, ಅನಾನುಕೂಲ ಉಂಟಾಗಬಾರದು. ಬಲವಂತದ ವಸೂಲಿ ಮಾಡಬಾರದು. ಅಗತ್ಯವಾಗಿ ಸಿಸಿ ಕ್ಯಾಮೆರ ಅಳವಡಿಸಿಕೊಂಡು ರಾತ್ರಿ 10 ರ ಒಳಗಾಗಿ ಗಣಪತಿ ವಿಸರ್ಜಿಸಲು ಡಿವೈಎಸ್ಪಿ ಅರ್.ವಿ. ಗಂಗಾಧರಪ್ಪ ಸೂಚಿಸಿದರು.
ಈ ಸಂದರ್ಭ ವೃತ್ತ ನಿರೀಕ್ಷಕ ಮಹೇಶ್, ಠಾಣಾಧಿಕಾರಿಗಳಾದ ಚಂದ್ರಶೇಖರ್, ಅಪ್ಪಾಜಿ ಮತ್ತು ಸಿಬ್ಬಂದಿಗಳು ಇದ್ದರು.
Back to top button
error: Content is protected !!