ಅರಣ್ಯ ಇಲಾಖೆಯಿಂದ ಬೇಲಿ ತೆರವು ಪ್ರಕರಣ: 80 ಕುಟುಂಬಗಳು ಅತಂತ್ರ ಸ್ಥಿತಿಗೆ
ಗ್ರಾಮಸ್ಥರ ಸಹಕಾರದೊಂದಿಗೆ ಅರಣ್ಯ ಇಲಾಖೆ ಕಛೇರಿಯ ಎದುರು ಪ್ರತಿಭಟನೆ ಸಿದ್ದತೆ

ಕುಶಾಲನಗರ, ಜ10:
ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂದರನಗರ ಗ್ರಾಮದಲ್ಲಿರುವ ಗಣಪತಿ ದೇವಾಲಯದ ಜಾಗದಲ್ಲಿರುವ ಬೇಲಿಯನ್ನು ಕಳೆದ ಎರಡು ದಿನಗಳ ಹಿಂದೆ ಕುಶಾಲನಗರ ಅರಣ್ಯ ಇಲಾಖೆಯ ವತಿಯಿಂದ ತೆರವುಗೊಳಿಸಲು ಪ್ರಯತ್ನ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಂದರನಗರ ಗ್ರಾಮಕ್ಕೆ ಮಾಜಿ ಶಾಸಕ ಅಪ್ಪಚ್ಚು ರಂಜನ್ ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷ, ಸದಸ್ಯರು ಭೇಟಿ ನೀಡಿ ಸ್ಥಳೀಯರ ಅಳಲು ಆಲಿಸಿದರು. ಸಿ.ಎನ್. ಡಿ.ಲ್ಯಾಂಡ್, ಡೀಮ್ಡ್ ಫಾರೆಸ್ಟ್ ಮತ್ತು ಊರುಡುವೆ ಭೂಮಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆದರು.
ಸುಂದರನಗರ ಗ್ರಾಮದ 80 ಕುಟುಂಬದವರ ಮನೆಗೆ ಸಂಬಂಧಿಸಿದ ತಡೆಗೋಡೆ, ಅಲ್ಲದೆ ಇತರೆ ಹೊಸ ಕೆಲಸಗಳನ್ನು ಕೈಗೊಳ್ಳಲು ಅರಣ್ಯ ಇಲಾಖೆಯ ವತಿಯಿಂದ ಅಡೆತಡೆಯಿಂದಾಗಿ ಈ 80 ಕುಟುಂಬದವರು ಅತಂತ್ರ ಸ್ಥಿತಿಯಲ್ಲಿರುವುದಾಗಿ ಸಂತ್ರಸ್ಥರು ದೂರಿದರು.
ಕುಶಾಲನಗರ ಅರಣ್ಯ ಇಲಾಖೆಯ ವ್ಯಾಪ್ತಿಗೆ ಒಳಪಡುವ ಸುಂದರನಗರ ಗ್ರಾಮವು ಡೀಮ್ಡ್ ಫಾರೆಸ್ವ್ ಎಂದು ಅರಣ್ಯ ಇಲಾಖೆಯ ವತಿಯಿಂದ ಯಾವುದೇ ರೀತಿಯ ಹೊಸ ಕೆಲಸಗಳಿಗೆ ಸಹಕಾರ ನೀಡದೆ ಗ್ರಾಮಸ್ಥರಿಗೆ ಮತ್ತು ರೈತರಿಗೆ ಸಾರ್ವಜನಿಕರಿಗೆ ತೊಂದರೆಗಳನ್ನು ನೀಡುತ್ತಿದ್ದಾರೆ ಎಂದು ಅರೋಪಿಸಿದ್ದಾರೆ. 2006 ರಲ್ಲಿ ಸರ್ವೆ ನಂಬರ್ 30ರ ಭೂಮಿ ಸಿ.ಎನ್. ಡಿ. ಲ್ಯಾಂಡ್ ಎಂದು ನಮೂದಿತವಾಗಿದ್ದ ಭೂಮಿ ಇದೀಗ 2022 ರಲ್ಲಿ ಸರ್ವೆ ನಂ 31/1 ಎಂದು ನಮೂದಾಗಿ ಡೀಮ್ಡ್ ಫಾರೆಸ್ಟ್ (ಪರಿಭಾವಿತ ಅರಣ್ಯ ಪ್ರದೇಶ) ವಾಗಿದೆ. ಈ ಆದೇಶದಿಂದಾಗಿ ಸ್ಥಳೀಯರಿಗೆ ತಮ್ಮ ಮನೆಯ ಅಭಿವೃದ್ಧಿಗೆ ಯಾವುದೇ ಅವಕಾಶಗಳನ್ನು ಅರಣ್ಯ ಇಲಾಖೆ ನೀಡದ ಹಿನ್ನೆಲೆಯಲ್ಲಿ ಸುಂದರನಗರದ ನೂರಾರು ಗ್ರಾಮಸ್ಥರ ಸಹಕಾರದೊಂದಿಗೆ ಪ್ರತಿಭಟನೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಗ್ರಾಮದ ಪ್ರಮುಖರಾದ ಸುಕುಮಾರ್,ರಮೇಶ್, ರಾಜು, ಮುರುಗ, ಮಂಜುನಾಥ, ಧರ್ಮ,ಗಿರೀಶ್ ವೇಲುಸ್ವಾಮಿ, ಸವಿತ ನಿರ್ಮಲ,ಪಾರ್ವತಿ, ಮಹದೇವಮ್ಮ ತಿಳಿಸಿದ್ದಾರೆ.
ಗ್ರಾಮಸ್ಥರು ನೀಡಿದ ಮಾಹಿತಿಯ ಮೇರೆಗೆ ಮಾಜಿ ಶಾಸಕ ಅಪ್ಪಚ್ಚು ರಂಜನ್ ಭೇಟಿ ನೀಡಿ ಪರಿಶೀಲನೆ ನಡೆಸಿ ಸರಕಾರದ ಈ ಕ್ರಮದ ಬಗ್ಗೆ ತೀವ್ರವಾಗಿ ಖಂಡಿಸಿದ ಅವರು ಅರಣ್ಯ ಇಲಾಖೆಯ ನಿಲುವು ಕ್ರಮಬದ್ಧವಾಗಿಲ್ಲ. ಅರಣ್ಯ ಸಚಿವರು ಮನಬಂದಂತೆ ಹೊಸ ನಿಯಮಗಳನ್ನು ಜಾರಿಗೆ ತಂದಿರುವುದು ಸರಿಯಾದ ಕ್ರಮವಲ್ಲ. ಗ್ರಾಮಸ್ಥರಿಗೆ ತೊಂದರೆ ಉಂಟುಮಾಡಿದರೆ ಮುಂದಿನ ದಿನಗಳಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಪಕ್ಷದ ಕಾರ್ಯಕರ್ತರೊಂದಿಗೆ ಹಿಂದಿನ ನಿಯಮಗಳನ್ನು ಪಾಲನೆ ಮಾಡುವಂತೆ ಪ್ರತಿಭಟನೆ ಮಾಡಲಾಗುವುದು ಎಂದು ಸ್ಧಳಕ್ಕೆ ತೆರಳಿದ ಸುದ್ದಿಗಾರರಿಗೆ ತಿಳಿಸಿದರು.
ಇದಕ್ಕೆ ಸಂಬಂಧಿಸಿದಂತೆ ಕುಶಾಲನಗರ ವಲಯ ಅರಣ್ಯಾಧಿಕಾರಿ ರವರನ್ನು ಮಾಹಿತಿ ಬಯಸಿದಾಗ, ಅರಣ್ಯ ಇಲಾಖೆಯ ರಾಜ್ಯ ಮಟ್ಟದ ಅಧಿಕಾರಿ ಸೂಚನೆ ಅನ್ವಯ ಸುಂದರನಗರ ಗ್ರಾಮದಲ್ಲಿ ಯಾವುದೇ ರೀತಿಯ ಹೊಸ ಮನೆಗಳ ನಿರ್ಮಾಣ, ಮತ್ತು ತಡೆಗೋಡೆ ನಿರ್ಮಾಣ ಅವಕಾಶಗಳನ್ನು ನೀಡುವುದಿಲ್ಲ. ಡಿ.ಎಲ್. ಸಿ. ಸಭೆಯ ತೀಮಾನದಂತೆ ಅಧಿಕಾರಿ ವರ್ಗದವರು ಕಾರ್ಯ ನಿರ್ವಹಿಸುತ್ತೇವೆ ಎಂದು ತಿಳಿಸಿದ್ದಾರೆ.
ಅಧಿಕಾರಿ ವರ್ಗದವರು ಸ್ಧಳಕ್ಕೆ ಭೇಟಿ ನೀಡಿ ಸಮರ್ಪಕವಾಗಿ ಪರಿಶೀಲನೆ ನಡೆಸಿ ನಿಯಮಾನುಸಾರ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಿಕೊಂಡಬೇಕು ಇಲ್ಲದಿದ್ದಲ್ಲಿ ತೀವ್ರತರವಾದ ಪ್ರತಿಭಟನೆ ಮಾಡಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ ನಾಯಕ್, ಸದಸ್ಯರುಗಳಾದ ದಿನೇಶ್, ಮಣಿಕಂಠ, ಜಿ.ಜೆ.ಪಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎಂ.ಹೆಚ್.ಮಹಮ್ಮದ್, ಮುಖಂಡ ಹೇರೂರು ಚಂದ್ರಶೇಖರ್ ಇದ್ದರು.



