ಕುಶಾಲನಗರ, ಆ 21:
ದೇವರಾಜ ಅರಸರು ಅಂಬೇಡ್ಕರರ ಆಶಯಗಳನ್ನು ಜಾರಿಗೊಳಿಸುವ ಮೂಲಕ ಧ್ವನಿ ಇಲ್ಲದವರಿಗೆ ಸಾಮಾಜಿಕ ನ್ಯಾಯ, ರಾಜಕೀಯ ಅಧಿಕಾರ ಕಲ್ಪಿಸಿದ, ಬಡವರ ಬಾಳಿನಲ್ಲಿ ಬೆಳಕು ತಂದುಕೊಟ್ಟ ಒಬ್ಬ ಮೇರು ಪರ್ವತ, ಅಂದು-ಇಂದು-ಎಂದೆಂದಿಗೂ ಅವರ ಹೆಸರು ಅಜರಾಮರವೆಂದು ಶಾಸಕ ಎಚ್.ಪಿ.ಮಂಜುನಾಥ್ ಬಣ್ಣಿಸಿದರು.
ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಡಿ.ದೇವರಾಜ ಅರಸರ ೧೦೭ನೇ ಜಯಂತಿ ಅಂಗವಾಗಿ ಎ.ಪಿ.ಎಂಸಿ.ಬಳಿಯ ಅರಸರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿ, ದೇವರಾಜ ಅರಸರ ಹೆಸರೇ ರೋಮಾಂಚನ, ಬಡವರಿಗೆ ಮಾಶಾಸನ, ಭೂಮಿ, ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೇರಿದಂತೆ ಅನೇಕ ಕೊಡುಗೆಗಳನ್ನು ನೀಡಿರುವ ಅರಸರನ್ನು ಎಂದಿಗೂ ಮರೆಯಬಾರದು. ವಿದ್ಯಾರ್ಥಿಗಳು ಅವರ ಬಗೆಗಿನ ಪುಸ್ತಕ ಓದಿ ಅರಿಯಬೇಕು. ಅರಸರು ಆಳಿದ ಈ ಕ್ಷೇತ್ರದಲ್ಲಿ ನಾನು ಶಾಸಕನಾಗಿರುವುದು ನನ್ನ ಸೌಭಾಗ್ಯ, ಇವರ ಹಾದಿಯಲ್ಲೇ ಸಿದ್ದರಾಮಯ್ಯನವರು ಆಡಳಿತ ನಡೆಸಿದ್ದಾರೆ, ಅರಸರ ಗರಡಿಯಲ್ಲಿ ಬೆಳೆದ ಎಂಎಲ್‌ಸಿ ವಿಶ್ವನಾಥರಿಗೆ ದೇವರಾಜ ಅರಸು ಪ್ರಶಸ್ತಿಯನ್ನು ನೀಡಿರುವುದು ಅಭಿನಂದನೀಯ.
ಅರಸುಭವನ ಪೂರ್ಣಗೊಳಿಸಲು ಸಾಕಷ್ಟು ಶ್ರಮಹಾಕಿದ್ದೇನೆ. ೨.೫ ಕೋಟಿ ರೂ ಅನುದಾನವಿದ್ದರೂ ಮಂಜೂರಿ ವಿಳಂಬವಾಗುತ್ತಿದ್ದು, ಇದೀಗ ಜಿಲ್ಲಾಧಿಕಾರಿಗಳಿಗೆ ಜವಾಬ್ದಾರಿವಹಿಸಿದ್ದು. ಹಣ ಬಿಡುಗಡೆಯಾಗದಿದ್ದಲ್ಲಿ ಧರಣಿ ಮಾಡುವ ಎಚ್ಚರಿಕೆ ನೀಡಿದ್ದೇನೆ. ಉಳಿದ ಬೇಡಿಕೆಗಳ ಬಗ್ಗೆ ಕ್ರಮವಹಿಸಲಾಗುವುದೆಂದರು.
ಎಂಎಲ್‌ಸಿ ವಿಶ್ವನಾಥ್ ಮಾತನಾಡಿ ಎಲ್ಲ ಧರ್ಮ,ಜಾತಿ,ಭಾಷಿಕರನ್ನು ಪ್ರೀತಿಸಿದ, ಅಧಿಕಾರ ಕಲ್ಪಿಸಿದ ದೇವರಾಜ ಅರಸರು ಸದಾ ಸ್ಮರಣೀಯರು. ಅವರ ಸಾಮಾಜಿಕ ಕಳಕಳಿ, ಸಾಮಾಜಿಕ ನ್ಯಾಯ ಇಂದಿನ ರಾಜಕಾರಣಿಗಳಿಗೆ ಪ್ರೇರಣೆಯಾಗಬೇಕು. ಶಾಸಕ ಮಂಜುನಾಥ್ ನಾಯಕತ್ವದಲ್ಲಿ ಅರಸರ ಸಮಕಾಲಿನರನ್ನು ಗೌರವಿಸಿರುವುದು ಅಭಿನಂದನೀಯ. ತಮಗೆ ಅರಸರ ಪ್ರಶಸ್ತಿ ಸಿಕ್ಕಿರುವುದು ದೊಡ್ಡ ಗೌರವವೆಂದು ಸಂತಸ ವ್ಯಕ್ತಪಡಿಸಿದರು.
ಶಿಕ್ಷಕ ಜೆ.ಮಹದೇವ್ ದೇವರಾಜ ಅರಸರ ಹೋರಾಟದ ಬದುಕನ್ನು ಪರಿಚಯಿಸಿದರು.
Back to top button
error: Content is protected !!