ಕುಶಾಲನಗರ, ಸೆ 07: ಕುಶಾಲನಗರ ಇಂಡಸ್ಟ್ರಿಯಲ್ ಏರಿಯ ವರ್ಕರ್ಸ್ ಯೂನಿಯನ್ ಆಶ್ರಯದಲ್ಲಿ ಸಿಐಟಿಯುಗೆ ಸೇರ್ಪಡೆ ಸಮಾವೇಶ ಕೂಡ್ಲೂರಿನ ಖಾಸಗಿ ಸಭಾಂಗಣದಲ್ಲಿ ನಡೆಯಿತು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಸಿ.ಸಾಬು ಪ್ರಾಸ್ತಾವಿಕವಾಗಿ ಮಾತನಾಡಿದರು. ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು, ಸರಕಾರದ ಸವಲತ್ತುಗಳನ್ನು ಪಡೆದುಕೊಳ್ಳಲು
ಸಂಘಟನೆ ಅಗತ್ಯ. ಕಾರ್ಮಿಕರ ಪರವಾದ ಸಿಐಟಿಯು ಅಡಿಯಲ್ಲಿ ರಾಜ್ಯದಲ್ಲಿ 175 ಸಂಘಟನಗಳಿವೆ, ಕೊಡಗು ಜಿಲ್ಲೆಯಲ್ಲಿ ಇದು 10ನೇ ಸಂಘಟನೆಯಾಗಿದೆ. ಮಹಿಳೆಯರ ಮೇಲಿನ ಶೋಷಣೆ ಮುಂದುವರೆದುಕೊಂಡು ಬಂದಿರುವುದು ವಿಷಾದಕರ ಸಂಗತಿ. ಮಹಿಳೆಯರ ದುಡಿಮೆಗೆ ಕನಿಷ್ಠ ವೇತನ ತಾರತಮ್ಯ ನಿವಾರಣೆಯಾಗಬೇಕಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದರೂ ವೇತನ ಏರಿಕೆ ಆಗುತ್ತಿಲ್ಲ.
ಸರಕಾರದ ನಿಗದಿಪಡಿಸಿದ ವೇತನ ದೊರಕಬೇಕಿದೆ ಎಂದರು.
ಸಿಐಟಿಯು ಜಿಲ್ಲಾ ಖಜಾಂಚಿ ಎನ್.ಡಿ ಕುಟ್ಟಪ್ಪನ್ ಮಾತನಾಡಿ, ಕೇಂದ್ರ ಸರಕಾರ ಕಾರ್ಮಿಕ ಕಾನೂನುಗಳು ಬಂಡವಾಳಶಾಹಿಗಳ ಅನುಕೂಲಕ್ಕಾಗಿ ಮಾರ್ಪಾಡುಗೊಳಿಸಿದೆ. ಇದರಿಂದಾಗಿ ನಮ್ಮ ಬೇಡಿಕೆಗಳು, ಹೋರಾಟಗಳಿಗೆ ಸಮರ್ಪಕ ಫಲ ದೊರೆಯುತ್ತಿಲ್ಲ ಎಂದು ಆರೋಪಿಸಿದರು. ಶ್ರೀಮಂತರು, ಅಧಿಕಾರಿಗಳ ಕೃಪಾಪೋಷಿತ ಸಂಘಟನೆಗಳು ಕಾರ್ಮಿಕರ ಪರ ಹೋರಾಟಕ್ಕೆ ಇಳಿಯುವುದಿಲ್ಲ. ಕೋಮುವಾದಿ ಸಂಘಟನೆಗಳನ್ನು ಹೊರತುಪಡಿಸಿ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಹೋರಾಡಲು ಮನಸ್ಸಿರುವ ಸಮರಶೀಲ ಸಂಘಟನೆಗಳನ್ನು ಕಟ್ಟಿ ಬೆಳೆಸಿದಾಗ ಮಾತ್ರ ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.
ನಮ್ಮ ಮೂಲಭೂತ ಹಕ್ಕುಗಳಿಗಾಗಿ ಸದಾ ಹೋರಾಟದಲ್ಲಿ ತೊಡಗಿಸಿಕೊಳ್ಳಲು ಅವರು ಕರೆ ನೀಡಿದರು.
ಇಂಡಸ್ಟ್ರಿಯಲ್ ಏರಿಯ ವರ್ಕರ್ಸ್ ಯೂನಿಯನ್ ಅಧ್ಯಕ್ಷ ಮಂಜು ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮ್ಮ ಸಮಸ್ಯೆಗಳ ಪರಿಹಾರಕ್ಕೆ ಸಿಐಟಿಯು ಮುಖಂಡರು ಸದಾ ಬೆಂಬಲವಾಗಿ ನಿಂತಿದ್ದಾರೆ. ನಮ್ಮ ಸಂಘಟನೆಯ ಬಲವರ್ಧನೆ ಅಗತ್ಯ. ಇನ್ನೂ ಕೂಡ ಈ ಭಾಗದಲ್ಲಿ ಮುಂದುವರೆದಿರುವ ಶೋಷಣೆಯ ವಿರುದ್ದ ನಾವು ಹೋರಾಡುವ ಅನಿವಾರ್ಯತೆ ಇದೆ ಎಂದರು.
ಇದೇ ಸಂದರ್ಭ ಮುಖಂಡರೊಂದಿಗೆ ಮಹಿಳೆಯರು ತಮ್ಮ ಸಮಸ್ಯೆಗಳನ್ನು ತೋಡಿಕೊಂಡರು.
ಕೂಡ್ಲೂರು ಕೈಗಾರಿಕಾ ಕೇಂದ್ರ್
ಎಸ್.ಎಲ್.ಎನ್.ಕಾಫಿ,ಓಲಂ ಕಾಫಿ,
ಸಿ.ಪಿ.ಕಾಫಿ ಎಕ್ಸ್ ಪೋರ್ಟ್ ನ ಮಹಿಳಾ ಕಾರ್ಮಿಕ ಸಂಘಟನೆ ಪ್ರಮುಖರಾದ ಲೀಲಾವತಿ , ಗೌರಮ್ಮ, ಶಾಂತ ಇಂದ್ರಮ್ಮ, ಪೂರ್ಣಿಮಾ, ಮಮತಾ ಸೇರಿದಂತೆ ಪದಾಧಿಕಾರಿಗಳು ಇದ್ದರು. ಮೂರು ಸಂಘಟನೆಗಳು ಸೇರಿ ಒಂದು ಸಮಿತಿ ರಚಿಸಿ ಪದಾಧಿಕಾರಿಗಳನ್ನು ನೇಮಿಸಲಾಯಿತು.
Back to top button
error: Content is protected !!